ಮಂಜೂರಾದ ಜಮೀನು ಪಿಟಿಸಿಎಲ್ ಕಾಯಿದೆಯಡಿ ಮರು ಸ್ಥಾಪನೆ ಇಲ್ಲ
ಬೆಂಗಳೂರು, ಮೇ 12: ಕರ್ನಾಟಕ ಭೂ ಸುಧಾರಣಾ ಕಾಯಿದೆಯಡಿಯಲ್ಲಿ ಭೂ ನ್ಯಾಯಮಂಡಳಿಗಳಿಂದ ಮಂಜೂರಾಗಿರುವ ಜಮೀನುಗಳನ್ನು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ಕೆಲ ಜಮೀನುಗಳ ವರ್ಗಾವಣೆ ನಿಷೇಧ) ಕಾಯಿದೆಯಡಿ (ಪಿಟಿಸಿಎಲ್) ಅಡಿಯಲ್ಲಿ ಪುನರ್ ಸ್ಥಾಪಿಸಲು ಉಪ ವಿಭಾಗಾಧಿಕಾರಿ (ಎಸಿ)ಗೆ ಅಧಿಕಾರವಿಲ್ಲ ಎಂದು ಹೈಕೋರ್ಟ್ ಆದೇಶ ನೀಡಿದೆ. ಹಾಗಾಗಿ ಇನ್ನು ಮುಂದೆ ಎಸಿಗಳು ಆ ರೀತಿ ಜಮೀನು ಪುನರ್ ಸ್ಥಾಪನೆಗೆ ಅವಕಾಶವಿಲ್ಲದಂತಾಗಿದೆ.
ಸರ್ಕಾರದಿಂದ ಮಂಜೂರಾದ ಜಮೀನುಗಳನ್ನು ಪಿಟಿಸಿಎಲ್ ಕಾಯಿದೆಯಡಿ ಪುನರ್ ಸ್ಥಾಪಿಸಲು ಉಪವಿಭಾಗಾಧಿಕಾರಿಗಳಿಗೆ ಅಧಿಕಾರವಿದೆ. ಆದರೆ, ಭೂ ಸುಧಾರಣಾ ನ್ಯಾಯಮಂಡಳಿಯಿಂದ ಮಂಜೂರಾದ ಜಮೀನುಗಳನ್ನು ಪುನರ್ ಸ್ಥಾಪಿಸಲು ಅಧಿಕಾರವಿಲ್ಲ ಎಂದು ಜಮೀನು ಖರೀದಿಸಿದ್ದ ಶಂಕರೇಪ್ಪ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ಕಲಬುರಗಿ ನ್ಯಾಯಪೀಠ ಆದೇಶಿಸಿದೆ.

ಹೈಕೋರ್ಟ್ ಏನು ಹೇಳಿದೆ?: ಉಪವಿಭಾಗಾಧಿಕಾರಿಗಳಿಗೆ ಪಿಟಿಸಿಎಲ್ ಕಾಯಿದೆಯ ಸೆಕ್ಷನ್ 4(2) ಅಡಿಯಲ್ಲಿ ಜಮೀನನ್ನು ಮರುಸ್ಥಾಪನೆ ಮಾಡಿ ಆದೇಶ ನೀಡುವುದಕ್ಕೆ ಅಧಿಕಾರವಿಲ್ಲ. ಅಲ್ಲದೆ, ಮೇಲ್ಮನವಿ ಪ್ರಾಧಿಕಾರವಾಗಿರುವ ಜಿಲ್ಲಾಧಿಕಾರಿಗಳು ಈ ಕುರಿತಂತೆ ಗಮನ ಹರಿಸದೆ ಆದೇಶ ಮಾಡಿದ್ದಾರೆ ಎಂದು ತಿಳಿಸಿದ ಪೀಠ, ಅರ್ಜಿಯನ್ನು ಪುರಸ್ಕರಿಸಿದ್ದು, ಜಿಲ್ಲಾಧಿಕಾರಿಗಳ ಆದೇಶ ರದ್ದುಪಡಿಸಿ ಆದೇಶಿಸಿದೆ.
ಅಲ್ಲದೆ, ಜಮೀನು ಮಂಜೂರಾಗಿರುವುದು 1976ರಲ್ಲಿ ಆರು ವರ್ಷಗಳ ಕಾಲ ಮಾರಾಟ ಮಾಡಬಾರದು ಎಂಬುದಾಗಿ ವಿಧಿಸಿದ್ದ ಷರತ್ತು 1982ರಲ್ಲಿ ಮುಕ್ತಾಯವಾಗಿದೆ. 28 ವರ್ಷಗಳ ಬಳಿಕ ಈ ಜಮೀನನ್ನು ಮಾರಾಟ ಮಾಡಲಾಗಿದೆ. ಜಮೀನು ಮಂಜೂರಾದ ಸಂದರ್ಭದಲ್ಲಿನ ಷರತ್ತು ಅವಧಿ ಪೂರ್ಣಗೊಂಡ ಬಳಿಕ ಮಾಲೀತ್ವದ ಹಕ್ಕನ್ನು ಚಲಾಯಿಸುವ ನಿರ್ಬಂಧ ಜಾರಿಯಲ್ಲಿರುವುದಿಲ್ಲ ಎಂದು ಪೀಠ ತಿಳಿಸಿದೆ.
ಅಲ್ಲದೆ, ಭೂ ಮಂಜೂರು ಮಾಡುವ ಸಂದರ್ಭದಲ್ಲಿ ವಿಧಿಸಿದ್ದ ಷರತ್ತುಗಳು ಪೂರ್ಣಗೊಳಿಸಿದ ಬಳಿಕ ನಾಗಪ್ಪ ಅವರು ಆ ಜಮೀನಿನ ಮಾಲೀಕರಾಗುತ್ತಾರೆ. ಆ ಜಮೀನಿನಲ್ಲಿ ದುಡಿಯುವುದು ಮಾರಾಟ ಮಾಡುವುದು ಸೇರಿದಂತೆ ಎಲ್ಲ ರೀತಿಯಲ್ಲಿಯೂ ಅನುಭವಿಸಲು ಹಕ್ಕುದಾರರಾಗಿರುತ್ತಾರೆ. ಆದ್ದರಿಂದ ನಾಗಪ್ಪನವರ ಮಕ್ಕಳು ಪಿಟಿಸಿಎಲ್ ಕಾಯಿದೆ ಮೂಲಕ ಮರು ಸ್ಥಾಪನೆಗೆ ಕೋರಿ ಮನವಿ ಸಲ್ಲಿಸಲು ಅವಕಾಶವಿಲ್ಲ ಎಂದು ಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ: ವಿಜಯಪುರ ಜಿಲ್ಲೆಯ ಇಂಡಿ ಎಂಬಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ನಾಗಪ್ಪ ಎಂಬುವವರಿಗೆ 1976ರಲ್ಲಿ ಭೂ ನ್ಯಾಯಾಧೀಕರಣ 5 ಎಕರೆ ಜಮೀನನ್ನು ಮಂಜೂರು ಮಾಡಿತ್ತು. ಈ ಜಮೀನನ್ನು ಆರು ವರ್ಷಗಳ ಕಾಲ ಪರಾಭಾರೆ ಮಾಡಬಾರದು ಎಂಬ ಷರತ್ತನ್ನು ವಿಧಿಸಲಾಗಿತ್ತು. ಈ ಜಮೀನಿನ ಪೈಕಿ 3 ಎಕರೆ ಜಮೀನನ್ನು 2004ರಲ್ಲಿ ನಾಗಪ್ಪ ಅವರು ಶಂಕರೇಪ್ಪ ಎಂಬುವರಿಗೆ ಮಾರಾಟ ಮಾಡಿದ್ದರು.
ನಾಗಪ್ಪ ಮೃತಪಟ್ಟ ಬಳಿಕ ಅವರ ಮಕ್ಕಳು 2014ರಲ್ಲಿ ಮಾರಾಟ ಮಾಡಿದ್ದ 3 ಎಕರೆ ಜಮೀನನ್ನು ತಮಗೆ ಹೆಸರಿಗೆ ಮರುಸ್ಥಾಪನೆ ಮಾಡಬೇಕು ಎಂದು ಕೋರಿ ಉಪವಿಭಾಗಾಧಿಕಾರಿಗಳಿಗೆ ಮನವಿ ಮಾಡಿದ್ದರು. ಇದನ್ನು ಉಪ ವಿಭಾಗಾಧಿಕಾರಿಗಳು ಪುರಸ್ಕರಿಸಿ ಆದೇಶಿಸಿದ್ದರು.
ಅಲ್ಲದೆ, ಜಮೀನು ಮಂಜೂರಾದ ಬಳಿಕ 28 ವರ್ಷದಲ್ಲಿ ಅದನ್ನು ಪರಾಭಾರೆ ಮಾಡಲಾಗಿದೆ, 2004ರಲ್ಲಿ ಜಮೀನು ಮರಾಟ ನೋಂದಣಿಯೂ ಆಗಿದೆ. ಆದರೆ, ನಾಗಪ್ಪನವರ ವಾರಸುದಾರರು 2014ರಲ್ಲಿ ಉಪವಿಭಾಗಾಧಿಕಾರಿಗಳಿಗೆ ಮನವಿ ಮಾಡಿದ್ದರು.
ಈ ಆದೇಶವನ್ನು ಶಂಕರೇಪ್ಪ ಜಿಲ್ಲಾಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ಜಿಲ್ಲಾಧಿಕಾರಿಗಳು ತಿರಸ್ಕರಿಸಿ, ಉಪ ವಿಭಾಗಾಧಿಕಾರಿಗಳ ಆದೇಶ ಎತ್ತಿಹಿಡಿದಿದ್ದರು. ಇದನ್ನು ಪ್ರಶ್ನಿಸಿ ಶಂಕರೇಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ವೇಳೆ ಶಂಕರೇಪ್ಪ ಪರ ವಕೀಲರು, ಈ ಜಮೀನನ್ನು ಭೂ ನ್ಯಾಯಾಧೀಕರಣ ಮಂಜೂರು ಮಾಡಿದೆ. ಆದರೆ, ಸರ್ಕಾರದಿಂದ ಮಂಜೂರು ಮಾಡಿಲ್ಲ. ಆದ್ದರಿಂದ ಪಿಟಿಸಿಎಲ್ ಕಾಯಿದೆಗೆ ಈ ಜಮೀನಿಗೆ ಅನ್ವಯವಾಗುವುದಿಲ್ಲ. ಆದರೆ, ಈ ಅಂಶವನ್ನು ಉಪ ವಿಭಾಗಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಪರಿಗಣನೆಗೆ ತೆಗೆದುಕೊಂಡಿಲ್ಲ. ಇದು ನ್ಯಾಯ ಪ್ರಕ್ರಿಯೆಯ ದುರ್ಬಳಕೆಯಾದಂತಾಗಿದೆ ಎಂದು ವಾದ ಮಂಡಿಸಿದ್ದರು.












Click it and Unblock the Notifications