Gruha Lakshmi: ಮುಂದಿನ ವಾರ 24ನೇ ಕಂತಿನ ₹2000 ಹಣ ಫಲಾನುಭವಿಗಳಿಗೆ ಜಮೆ: ಸಚಿವೆ
ಬೆಳಗಾವಿ: ಕರ್ನಾಟಕ ರಾಜ್ಯದಲ್ಲಿ ಹಣ ಬಾರದೇ ನಿರಾಸೆಗೊಂಡಿದ್ದ 'ಗೃಹ ಲಕ್ಷ್ಮೀ' ಯೋಜನೆಯ ಫಲಾನುಭವಿಗಳಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಹೊಸ ವರ್ಷಕ್ಕೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮುಂದಿನ ವಾರ 24ನೇ ಕಂತಿನ 2000 ರೂಪಾಯಿ ಹಣ ಜಮೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಈ ಮೂಲಕ ಬಾಕಿ ಕಂತಿನ ಹಣ ಯಾವಾಗ ಜಮೆ ಆಗುತ್ತೆ ಎಂಬ ನಿರೀಕ್ಷೆಗೆ ತೆರೆ ಬಿದ್ದಿದೆ.
ಇಂದು (ಡಿಸೆಂಬರ್ 21) ಭಾನುವಾರ ಬೆಳಗಾವಿ ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಗೃಹಲಕ್ಷ್ಮೀ ಹಣ ಫಲಾನುಭವಿಗಳಿಗೆ ಯಾವಾಗ ಜಮೆ ಆಗುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದೆ. ಮುಂದಿನ ವಾರ ಹಣ ಜಮೆ ಮಾಡಲಾಗುವುದು. ಸೋಮವಾರದಿಂದಲೇ ಫಲಾನುಭವಿಗಳ ಖಾತೆಗೆ 24ನೇ ಕಂತಿನ ಹಣ ಹಾಕಲಾಗುತ್ತದೆ. ಒಂದು ಕಂತಿನ ಹಣ ಸೋಮವಾರದಿಂದ ಶನಿವಾರದ ಒಳಗಾಗಿ ಮಹಿಳೆಯರ ಖಾತೆಗೆ ಹಾಕುವ ಬಗ್ಗೆ ಸಚಿವೆ ಅಧಿಕೃತ ಮಾಹಿತಿ ನೀಡಿದರು.

ಹಣ ಬಿಡುಗಡೆಗೆ ರಾಜ್ಯ ಹಣಕಾಸು ಇಲಾಖೆ ಒಪ್ಪಿಗೆ ನೀಡಿದೆ. ಮುಂದಿನ ವಾರ ತಪ್ಪದೇ ಹಣ ಬಿಡುಗಡೆ ಆಗಲಿದೆ. ಈ ಬಗ್ಗೆ ಚಿಂತೆಪಡಬೇಕಿಲ್ಲ ಎಂದರು. ಇದರೊಂದಿಗೆ ಮೃತಪಟ್ಟವರ ಖಾತೆಗೂ ಹಣ ಜಮೆ ಆಗುತ್ತಿದೆ. ಈ ಬಗ್ಗೆ ಕೈಗೊಂಡ ಕ್ರಮಗಳ ಬಗ್ಗೆ ಸಚಿವೆ ಉತ್ತರಿಸಿದರು.
ಮೃತಪಟ್ಟವರ ಖಾತೆಗೆ ಜಮೆ ಆದ್ರೆ ವಸೂಲಿ
ಗೃಹ ಲಕ್ಷ್ಮೀ ಯೋಜನೆಯ ಫಲಾನುಭವಿಗಳಾಗಿ ನಂತರ ಮೃತಪಟ್ಟವರ ಮಾಹಿತಿ ದೊರಕಿಲ್ಲ. ಹೀಗಾಗಿ ಮೃತ ವ್ಯಕ್ತಿಗಳ ಖಾತೆಗೂ 2000 ರೂಪಾಯಿ ಹಣ ಜಮೆ ಆಗುತ್ತಿದೆ. ಇದಕ್ಕೆ ಬ್ರೇಕ್ ಹಾಕಲು ಇಲಾಖೆ ಮುಂದಾಗಿದೆ. ಈ ಸಂಬಂಧ ಅಗತ್ಯ ಸೂಚನೆಗಳನ್ನು ನೀಡಲಾಗಿದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.
ಮೃತಪಟ್ಟವರ ಖಾತೆಗೆ ಹಣ ಜಮೆ ಆದರೆ ಆ ಕ್ಷಣಕ್ಕೆ ಗೊತ್ತಾಗುವುದಿಲ್ಲ. ಈ ಸಂಬಂಧ ಸಾಫ್ಟವೇರ್ ಅಭಿವೃದ್ಧಿಪಡಿಸಲಾಗುತ್ತಿದೆ. ಅಂಗವಾಡಿ ಕಾರ್ಯಕರ್ತೆಯರಿಗೆ ತಮ್ಮ ವ್ಯಾಪ್ತಿಯಲ್ಲಿ ಮೃತಪಟ್ಟವರ ಪರಿಶೀಲನೆಗೆ ಸೂಚನೆ ನೀಡಲಾಗಿದೆ. ಒಂದು ವೇಳೆ ಮೃತಪಟ್ಟವರ ಖಾತೆಗೆ ಹಣ ಜಮೆ ಆದರೆ ಮರಳಿ ಪಡೆಯಲು ಬ್ಯಾಂಕ್ ನವರಿಗೂ ಸೂಚನೆ ನೀಡಲಾಗಿದೆ. ಬ್ಯಾಂಕ್ ನವರಿಗೆ ವಸೂಲಿಯ ಹೊಣೆಗಾರಿಕೆ ನೀಡಲಾಗಿದೆ ಎಂದು ವಿವರಿಸಿದರು.
ಚಳಿಗಾಲ ಅಧಿವೇಶನದಲ್ಲೂ ಭಾರೀ ಚರ್ಚೆ
ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿದ್ದ 'ಗೃಹ ಲಕ್ಷ್ಮೀ' ಯೋಜನೆಯಡಿ ರಾಜ್ಯದ ಅರ್ಹ ಫಲಾನುಭವಿಗಳ ಖಾತೆಗೆ ಡಿಬಿಟಿ ಮೂಲಕ ನೇರ ಬ್ಯಾಂಕ್ ಖಾತೆಗೆ ಮಾಸಿಕ 2000 ರೂಪಾಯಿ ಜಮೆ ಮಾಡಲಾಗುತ್ತದೆ. ಈ ಹಣ ಕೆಲವು ತಿಂಗಳು ಬಾಕಿ ಉಳಿದಿದೆ. ಸಕಾಲಕ್ಕೆ ಹಾಕದೇ ತಡವಾಗಿ ಹಾಕುತ್ತಾ ಬಂದ ಸರ್ಕಾರ ಇದರಲ್ಲಿ 5000 ಕೋಟಿ ಹಣ ಲೂಟಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಇದೇ ವಿಚಾರ ಬೆಳಗಾವಿ ವಿಧಾನಮಂಡಲ ಚಳಿಗಾಲ ಅಧಿವೇಶನದಲ್ಲಿ ಭಾರಿ ಚರ್ಚೆ ಆಗಿತ್ತು. ಸದನಕ್ಕೆ ಮೂರು ದಿನ ಬಾರದೇ ಗೈರಾಗಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಒಂದಷ್ಟು ಆರೋಪಗಳು ಕೇಳಿ ಬಂದವು. ಮಹಿಳೆಯರ ಖಾತೆಗೆ ಗೃಹ ಲಕ್ಷ್ಮೀ ಹಣ ಹಾಕದೇ ಸರ್ಕಾರ ಹಣ ಲೂಟಿ ಮಾಡಿದೆ. ಈ ಬಗ್ಗೆ ಉತ್ತರ ಕೊಡಲು ಆಗದೇ ಸದನಕ್ಕೆ ಸಚಿವೆ ಗೈರಾಗಿದ್ದಾರೆ ಎಂದೆಲ್ಲ ವಿಪಕ್ಷ ನಾಯಕರು ದೂರಿದ್ದರು. ಬಳಿಕ ಹಾಜರಾದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಹಣ ಬಾಕಿ ಆಗದ್ದನ್ನು ಒಪ್ಪಿಕೊಂಡರು. ಉಳಿದೆಲ್ಲ ಆರೋಪ ನಿರಾಕರಿಸಿದರು.












Click it and Unblock the Notifications