ಸೋನಿಯಾ ಭೇಟಿಗೂ ಮುನ್ನ ಹಾಸನದಲ್ಲಿ ಎಚ್‌ಡಿಕೆ ಸಾಲು ಸಾಲು ಪೂಜೆ
Recommended Video

ಬೆಂಗಳೂರು, ಮೇ 21: ನಿಯೋಜಿತ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲು ಸೋಮವಾರ ದೆಹಲಿಗೆ ತೆರಳಲಿದ್ದಾರೆ.
ರಾಜ್ಯದಲ್ಲಿ ಆಡಳಿತ ನಡೆಸಲು ಪರಸ್ಪರ ಕೈಜೋಡಿಸಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರದ ಸ್ವರೂಪ ಯಾವ ರೀತಿ ಇರಬೇಕು ಎಂಬ ಬಗ್ಗೆ ಸೋನಿಯಾ ಅವರೊಂದಿಗೆ ಕುಮಾರಸ್ವಾಮಿ ಅವರು ಸಮಾಲೋಚನೆ ನಡೆಸಲಿದ್ದಾರೆ ಎನ್ನಲಾಗಿದೆ.
ಉಪ ಮುಖ್ಯಮಂತ್ರಿ, ಗೃಹಖಾತೆ ಸೇರಿದಂತೆ ವಿವಿಧ ಸಚಿವ ಸ್ಥಾನಗಳ ಹಂಚಿಕೆ ಸಂಬಂಧ ಈ ವೇಳೆ ಮಾತುಕತೆ ನಡೆಯಲಿದೆ.
ಕಾಂಗ್ರೆಸ್‌ನ ಎಷ್ಟು ಶಾಸಕರಿಗೆ ಸಂಪುಟದಲ್ಲಿ ಅವಕಾಶ ನೀಡಬೇಕು, ಯಾವ ಶಾಸಕರಿಗೆ ಯಾವ ಖಾತೆ ನೀಡಬೇಕು ಎಂಬ ಬಗ್ಗೆ ಚರ್ಚಿಸಲಿದ್ದಾರೆ. ಇಬ್ಬರನ್ನು ಉಪಮುಖ್ಯಮಂತ್ರಿ ಸ್ಥಾನಕ್ಕೆ ನೇಮಕ ಮಾಡಬೇಕು ಎಂಬ ಬಗ್ಗೆ ಒತ್ತಾಯ ಕೇಳಿಬರುತ್ತಿದ್ದು, ಈ ಕುರಿತೂ ಸಹ ಮಾತುಕತೆ ನಡೆಯುವ ಸಾಧ್ಯತೆ ಇದೆ.

ಅಲ್ಲದೆ, ಬುಧವಾರ ನಡೆಯಲಿರುವ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರನ್ನು ಕುಮಾರಸ್ವಾಮಿ ಅವರು ಖುದ್ದಾಗಿ ಆಹ್ವಾನ ನೀಡಲಿದ್ದಾರೆ ಎನ್ನಲಾಗಿದೆ.
33 ಖಾತೆಗಳಿರುವ ಸಂಪುಟದಲ್ಲಿ ಕಾಂಗ್ರೆಸ್‌ಗೆ 20 ಮತ್ತು ಜೆಡಿಎಸ್‌ಗೆ 13 ಸಚಿವ ಸ್ಥಾನಗಳನ್ನು ಹಂಚಿಕೊಳ್ಳುವ ನಿರೀಕ್ಷೆಯಿದೆ.
ಸೋಮವಾರ ಬೆಳಿಗ್ಗೆಯೇ ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಎಚ್.ಡಿ. ದೇವೇಗೌಡ ಅವರ ನಿವಾಸಕ್ಕೆ ತೆರಳಿದ ಕುಮಾರಸ್ವಾಮಿ ಅವರಿಂದ ಕೆಲವರು ಸಲಹೆ ಸೂಚನೆಗಳನ್ನು ಪಡೆದುಕೊಂಡರು.
ದೆಹಲಿಗೆ ಹೊರಡುವ ಮುನ್ನ ಹಾಸನಕ್ಕೆ ತೆರಳಲಿರುವ ಕುಮಾರಸ್ವಾಮಿ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ.
ಹುಟ್ಟೂರು ಹರದನಹಳ್ಳಿ, ಮಾವಿನಕೆರೆ, ಚನ್ನರಾಯಪಟ್ಟಣದ ವಿವಿಧ ದೇವಸ್ಥಾನಗಳಲ್ಲಿ ಅವರು ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಜಕ್ಕೂರು ವಿಮಾನ ನಿಲ್ದಾಣದಿಂದ ದೆಹಲಿಯತ್ತ ಪ್ರಯಾಣ ಬೆಳೆಸಲಿದ್ದಾರೆ.











Click it and Unblock the Notifications