Channapatna by-election: "ಕುಮಾರಸ್ವಾಮಿನೇ ಅಭಿವೃದ್ಧಿ ಕೆಲಸ ಮಾಡಲಿಲ್ಲ ಅವರ ಮಗ ಇನ್ನೇನ್ ಮಾಡ್ತಾರೆ"!
ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಹಾಗೂ ಸಿ.ಪಿ ಯೋಗೇಶ್ವರ್ ಅವರ ವಾಕ್ಸಮರ ನಡೆಯುವುದಕ್ಕಿಂತ. ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಹಾಗೂ ಸಿ.ಪಿ ಯೋಗೇಶ್ವರ್ ಅವರ ನಡುವೆಯೇ ವಾಕ್ಸಮರ ನಡೆಯುತ್ತಿದೆ. ಇದೀಗ ಸಿ.ಪಿ ಯೋಗೇಶ್ವರ್ ಅವರು ಜೆಡಿಎಸ್ ಕುಟುಂಬ ರಾಜಕೀಯದ ಬಗ್ಗೆ ಮಾತನಾಡಿದ್ದಾರೆ. ಕರ್ನಾಟಕದಲ್ಲಿ ಮೂರು ವಿಧಾನಸಭೆ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯುತ್ತಿದೆ.ಆದರೆ, ಚನ್ನಪಟ್ಟಣ ಉಪ ಚುನಾವಣೆಯೇ ಹೈವೋಲ್ಟೇಜ್ ಕ್ಷೇತ್ರವಾಗಿದೆ.
ಸಿ.ಪಿ ಯೋಗೇಶ್ವರ್ ಅವರು ಈಚೆಗೆ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಸಿ.ಪಿ ಯೋಗೇಶ್ವರ್ ಅವರು ಕಾಂಗ್ರೆಸ್ ಸೇರಿದ ಮೇಲೆ ಜೆಡಿಎಸ್‌ನ ಮೇಲೆ ಮುಗಿ ಬೀಳುವುದು ಮುಂದುವರಿದಿದೆ. ಇದೀಗ ಸಿ.ಪಿ ಯೋಗೇಶ್ವರ್ ಅವರು ಜೆಡಿಎಸ್ ಕುಟುಂಬ ರಾಜಕೀಯದ ಕುರಿತು ಕಿಡಿಕಾರಿದ್ದಾರೆ.

ಚುನಾವಣೆ ಪ್ರಚಾರದಲ್ಲಿ ಮಾತನಾಡಿರುವ ಸಿ.ಪಿ ಯೋಗೇಶ್ವರ್ ಅವರು, ಎಚ್.ಡಿ ಕುಮಾರಸ್ವಾಮಿಯವರು ಚನ್ನಪಟ್ಟಣ ಕ್ಷೇತ್ರಕ್ಕೆ ಏನೂ ಮಾಡಿಲ್ಲ. ಅವರು ಎರಡು ಬಾರಿ ಶಾಸಕರಾಗಿ ಹಾಗೂ ಮುಖ್ಯಮಂತ್ರಿಯೂ ಆಗಿದ್ದರು. ಆದರೆ, ಈ ಕ್ಷೇತ್ರಕ್ಕೆ ಯಾವುದೇ ಕೊಡುಗೆಯನ್ನು ಅವರು ಕೊಟ್ಟಿಲ್ಲ. ಅವರ ಉದಾಸೀನತೆಯನ್ನು ನೋಡಿ ಜನ ನಿರಾಸೆಗೆ ಒಳಗಾಗಿದ್ದಾರೆ ಎಂದರು.
ಕುಮಾರಸ್ವಾಮಿ ಅವರು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರವನ್ನು ಯಾಕೆ ಬಿಟ್ಟು ಹೋಗಿದ್ದರು. ಈಗ ಅವರ ಮಗನನ್ನು ಯಾಕೆ ಕರೆದುಕೊಂಡು ಬಂದಿದ್ದಾರೋ ಗೊತ್ತಿಲ್ಲ. ಇದಕ್ಕೂ ಮೊದಲು ಅವರ ಪತ್ನಿಯನ್ನು ಕರೆದುಕೊಂಡು ಬಂದಿದ್ದರು. ಈಗ ಅವರ ಮಗನನ್ನು ಕರೆದುಕೊಂಡು ಬಂದಿದ್ದಾರೆ. ಕುಮಾರಸ್ವಾಮಿಗೆ ಸ್ವಾರ್ಥ ರಾಜಕಾರಣ ಬಿಟ್ಟರೆ ಬೇರೆ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
8 ವರ್ಷಗಳಿಂದ ಕುಮಾರಸ್ವಾಮಿ ಅವರ ನಿಷ್ಕ್ರೀಯತೆಯನ್ನು ಜನ ನೋಡಿದ್ದಾರೆ. ಅವರು ಮುಖ್ಯಮಂತ್ರಿಯಾಗಿದ್ದಾಗ, ಬಡವನಿಗೆ ಒಂದು ಮನೆ ಕೊಡಲಿಲ್ಲ. ಯಾಕೆ ಅವರು ತಾಲ್ಲೂಕು ಬಿಟ್ಟೋದರು, ಯಾಕೆ ಈಗ ಮಗನನ್ನು ಕರೆದುಕೊಂಡು ಬಂದಿದ್ದಾರೆ ಅಂತ ಗೊತ್ತಿಲ್ಲ. ಇಲ್ಲಿ ಸ್ವಾರ್ಥ ಇದೆ. ವಂಶಪಾರಂಪರ್ಯ ರಾಜಕೀಯವನ್ನು ಜನ ಒಪ್ಪುವುದಿಲ್ಲ. ಇಲ್ಲಿನ ಜನ ಸ್ವಾಭಿಮಾನಿಗಳಾಗಿದ್ದಾರೆ. ಈ ಬಾರಿ ಚನ್ನಪಟ್ಟಣ ಜನ ಬದಲಾವಣೆ ಬಯಸಿದ್ದಾರೆ. ಹೀಗಾಗಿ, ನಾನು ಅತ್ಯಧಿಕ ಮತಗಳಿಂದ ಗೆಲ್ಲಲ್ಲಿದ್ದೇನೆ ಎಂದು ಸಿ.ಪಿ ಯೋಗೇಶ್ವರ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಲ್ಲಿ ಅರಾಜಕತೆ ಎನ್ನುವುದು ಮನೆ ಮಾಡಿದೆ. ನನ್ನ ಗೆಲುವಿಗೆ ಎರಡೂ ಪಕ್ಷಗಳ ಕಾರ್ಯಕರ್ತರು ಬೆಂಬಲ ಸೂಚಿಸಿದ್ದಾರೆ ಎಂದಿದ್ದಾರೆ. ನನಗೆ ಚನ್ನಪಟ್ಟಣದಲ್ಲಿ ಪಕ್ಷಾತೀತವಾಗಿ ಬೆಂಬಲ ಸಿಗ್ತಿದೆ ಎಂದೂ ಅವರು ಹೇಳಿದ್ದಾರೆ. ನನ್ನ ಬೆಂಬಲಿಗರು ಹಾಗೂ ಕಾಂಗ್ರೆಸ್ ಬೆಂಬಲಿಗರು ನನ್ನ ಬೆಂಬಲಕ್ಕೆ ನಿಂತಿದ್ದಾರೆ ಎಂದಿದ್ದಾರೆ.
ನಿಖಿಲ್ ಕಣ್ಣೀರಿಗೆ ವ್ಯಂಗ್ಯ: ಇನ್ನು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಕಣದಲ್ಲಿ ಇರುವ ಬಿಜೆಪಿ - ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಕಣ್ಣೀರು ಹಾಕಿರುವ ಬಗ್ಗೆ ಸಿ.ಪಿ ಯೋಗೇಶ್ವರ್ ಅವರು ವ್ಯಂಗ್ಯವಾಡಿದ್ದಾರೆ. ಯುದ್ಧ ಭೂಮಿಯಲ್ಲಿ ಸೋಲುವ ಭಯ ಇರುವ ಸೈನಿಕ ಪ್ರಯೋಗಿಸುವ ಕೊನೆಯ ಅಸ್ತ್ರವೇ ಕಣ್ಣೀರು. ಅವರ ತಂದೆ ಎಚ್.ಡಿ ಕುಮಾರಸ್ವಾಮಿ ಅವರು ಮಾಡಿರುವ ಅವ್ಯವಸ್ಥೆಗಳಿಗಾಗಿ ಅವರ ಮಗ ಕಣ್ಣೀರು ಸುರಿಸುತ್ತಿದ್ದಾರೆ. ಜನ ನಾಯಕ ಜನರ ಕಣ್ಣೀರು ಒರೆಸಬೇಕು ಕಣ್ರೀ ಅವರೇ ಕಣ್ಣೀರು ಹಾಕಬಾರದು ಎಂದು ಸಿ.ಪಿ ಯೋಗೇಶ್ವರ್ ಹೇಳಿದ್ದಾರೆ.












Click it and Unblock the Notifications