'ಇಂದಿರಾ ಕ್ಯಾಂಟೀನ್ ಮುಚ್ಚಲ್ಲ, ಅನ್ನಭಾಗ್ಯಕ್ಕೆ ಇಲ್ಲ ಕನ್ನ'
ಬೆಂಗಳೂರು, ಜೂನ್ 15 : ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್ -ಜೆಡಿಎಸ್ ದೋಸ್ತಿ ಸರ್ಕಾರದ ಆಡಳಿತದಲ್ಲಿ ಸಿದ್ದರಾಮಯ್ಯ ಸರ್ಕಾರದ ಜನಪ್ರಿಯ ಯೋಜನೆಗಳಿಗೆ ಕೊಕ್ ನೀಡಲಾಗುತ್ತದೆ ಎಂಬ ಗಾಳಿಸುದ್ದಿಗೆ ಮುಖ್ಯಮಂತಿ ಎಚ್ ಡಿ ಕುಮಾರಸ್ವಾಮಿ ಗುದ್ದು ನೀಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಮ್ಮಿಶ್ರ ಸರ್ಕಾರದ ಮೊದಲ ಸಮನ್ವಯ ಸಮಿತಿ ಸಭೆಯಲ್ಲಿ ಹತ್ತು ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಈ ಪೈಕಿ ಸಿದ್ದರಾಮಯ್ಯ ಸರ್ಕಾರದ ಜನಪ್ರಿಯ ಯೋಜನೆಗಳನ್ನು ಮುಂದುವರೆಸಿಕೊಂಡು ಹೋಗಲು ಸಮ್ಮಿಶ್ರ ಸರ್ಕಾರಕ್ಕೆ ಸೂಚನೆ ಸಿಕ್ಕಿದೆ.

ಜನಪ್ರಿಯ ಯೋಜನೆಗಳ ಮುಂದುವರಿಕೆ: ಸಿದ್ದರಾಮಯ್ಯ ಅವರ ಆಡಳಿತ ಅವಧಿಯಲ್ಲಿ ಜಾರಿಗೊಂಡು ಯಶಸ್ಸು ಕಂಡಿದ್ದ ಅನ್ನಭಾಗ್ಯ, ಕ್ಷೀರಭಾಗ್ಯ, ಇಂದಿರಾ ಕ್ಯಾಂಟೀನ್ ಮುಂದುವರೆಸಲು ನಿರ್ಧರಲಾಗಿದೆ. ಅಲ್ಲದೆ, ಚುನಾವಣಾ ಪೂರ್ವ ಬಜೆಟ್ ನಲ್ಲಿ ಪಡೆದ ಲೇಖಾನುದಾನ, ಈ ಹಿಂದಿನ ಬಜೆಟ್ ನಲ್ಲಿ ಘೋಷಣೆಯಾಗಿದ್ದ ಪ್ರಮುಖ ಯೋಜನೆಗಳನ್ನು ಮುಂದುವರೆಸುವಂತೆ ಸಮನ್ವಯ ಸಮಿತಿ ಸೂಚಿಸಿದೆ.
ಕುಮಾರಸ್ವಾಮಿ ಅವರು ಮಂಡಿಸಲಿರುವ ಸಮ್ಮಿಶ್ರ ಸರ್ಕಾರದ ಚೊಚ್ಚಲ ಬಜೆಟ್ ನಲ್ಲಿ ಎರಡು ಪಕ್ಷಗಳ ಪ್ರಣಾಳಿಕೆಗೆ ತಕ್ಕಂತೆ ಅನುದಾನ ಸಿಗಲಿದೆ. ಎರಡೂ ಪಕ್ಷದ ಪ್ರಣಾಳಿಕೆಯನ್ನು ಸಮೀಕರಣಗೊಳಿಸಿ ಒಂದು ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸಿ ಸಮನ್ವಯ ಸಮಿತಿ ಮುಂದೆ ಹತ್ತು ದಿನದೊಳಗೆ ವರದಿ ಸಲ್ಲಿಸಲಾಗುತ್ತದೆ.












Click it and Unblock the Notifications