ಜನವರಿ 8 ಮತ್ತು 9ರಂದು ಕೆಎಸ್ಆರ್‌ಟಿಸಿ ನೌಕರರ ಮುಷ್ಕರ
ಬೆಂಗಳೂರು, ಡಿಸೆಂಬರ್ 19 : ಕೆಎಸ್ಆರ್‌ಟಿಸಿ ನೌಕರರು 2019ರ ಜನವರಿ 8 ಮತ್ತು 9ರಂದು ಮುಷ್ಕರ ನಡೆಸಲಿದ್ದಾರೆ?. ಎರಡು ದಿನಗಳ ಕಾಲ ರಾಷ್ಟ್ರವ್ಯಾಪಿ ಸಾರಿಗೆ ಮುಷ್ಕರ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ.
ಕೆಎಸ್ಆರ್‌ಟಿಸಿ ಸ್ಟಾಫ್ ಅಂಡ್ ವರ್ಕಸ್ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಎಚ್.ವಿ.ಅನಂತ ಸುಬ್ಬರಾವ್ ಅವರು ಈ ಕುರಿತು ಹೇಳಿಕೆ ನೀಡಿದ್ದಾರೆ. 'ಕನಿಷ್ಠ ಕೂಲಿ ನಿಗದಿ ಸೇರಿದಂತೆ ಕಾರ್ಮಿಕರ 18 ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜನವರಿ 8 ಮತ್ತು 9ರಂದು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಾಗುತ್ತದೆ' ಎಂದು ಹೇಳಿದ್ದಾರೆ.
ಕೆಎಸ್ಆರ್‌ಟಿಸಿ ಸ್ಟಾಫ್ ಅಂಡ್ ವರ್ಕಸ್ ಫೆಡರೇಷನ್ 6ನೇ ರಾಜ್ಯ ಸಮ್ಮೇಳನದಲ್ಲಿ ಮಾತನಾಡಿದ ಎಚ್.ವಿ.ಅನಂತ ಸುಬ್ಬರಾವ್, 'ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇದುವರೆಗೆ ರಾಷ್ಟ್ರವ್ಯಾಪಿ ಮೂರು ಮುಷ್ಕರಗಳನ್ನು ನಡೆಸಲಾಗಿದ್ದು, ಇದು ನಾಲ್ಕನೇ ಮುಷ್ಕರವಾಗಿದೆ' ಎಂದರು.

'ಜೀವವಿಮೆ, ಬ್ಯಾಂಕ್, ಸಾರ್ವಜನಿಕ ವಯಲದ ಉದ್ದಿಮೆಗಳ ಖಾಸಗೀಕರಣ ಕೈಬಿಡಬೇಕು. ತಿಂಗಳಿಗೆ 18 ಸಾವಿರ ಕನಿಷ್ಠ ಕೂಲಿ ನಿಗದಿಪಡಿಸಬೇಕು. ಕಾರ್ಮಿಕ ವಿರೋಧಿ ನೀತಿಗಳನ್ನು ಕೈ ಬಿಡಬೇಕು ಎಂದು ಒತ್ತಾಯಿಸಿ ಮುಷ್ಕರ ನಡೆಸಲಾಗುತ್ತದೆ' ಎಂದರು.
'ಕೆಎಸ್ಆರ್‌ಟಿಸಿ ನಿಗಮಗಳಲ್ಲಿ ಕೆಲಸ ಮಾಡುತ್ತಿರುವ ಯಾರೊಬ್ಬರು ಆತ್ಮಹತ್ಯೆ ಮಾಡಿಕೊಳ್ಳಬಾರದು. ಕಿರುಕುಳ ನೀಡುವ ಅಧಿಕಾರಿಗಳ ವಿರುದ್ಧ ಹೋರಾಟ ಮಾಡಬೇಕು' ಎಂದು ಕರೆ ನೀಡಿದರು.
ಕೆಎಸ್ಆರ್‌ಟಿಸಿ ಸ್ಟಾಫ್ ಅಂಡ್ ವರ್ಕಸ್ ಫೆಡರೇಷನ್ ಗೌರವ ಅಧ್ಯಕ್ಷ ಡಾ.ಸಿದ್ದನಗೌಡ ಪಾಟೀಲ ಮಾತನಾಡಿ, 'ಮೋದಿ ಸರ್ಕಾರ ಜನಸಾಮಾನ್ಯರ ಹಿತ ಕಾಯದೇ ಕಾರ್ಪೊರೇಟ್ ವಲಯದ ಗುಲಾಮನಂತೆ ವರ್ತಿಸುತ್ತಿದೆ. ರಫೇಲ್ ರಾಜ ಮೋದಿ ಎಲ್ಲವನ್ನು ಖಾಸಗೀಕರಣಗೊಳಿಸುವ ಹುನ್ನಾರ ನಡೆಸಿದ್ದಾರೆ' ಎಂದು ದೂರಿದರು.












Click it and Unblock the Notifications