KSRTC; ಸಿಬ್ಬಂದಿ, ನೌಕರರಿಗೆ ಜಯದೇವದಲ್ಲಿ ಹೃದಯ ತಪಾಸಣೆ, ಮಾರ್ಗಸೂಚಿ
ಬೆಂಗಳೂರು, ನವೆಂಬರ್ 07; ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಎಲ್ಲಾ ಸಿಬ್ಬಂದಿಗಳಿಗೆ 10 ಮಾದರಿಯ ಹೃದಯ ಸಂಬಂಧಿ ವೈದ್ಯಕೀಯ ತಪಾಸಣೆಗಳನ್ನು ಮಾಡಿಸಲು ಐದು ವರ್ಷಗಳ ಅವಧಿಗೆ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಜೊತೆ ಒಪ್ಪಂದ ಮಾಡಿಕೊಂಡಿದೆ.
ಕೆಎಸ್ಆರ್‌ಟಿಸಿಯ ವ್ಯವಸ್ಥಾಪಕ ನಿರ್ದೇಶಕರು ಸುತ್ತೋಲೆಯೊಂದನ್ನು ಹೊರಡಿಸಿದ್ದು, ನಿಗಮದ ನೌಕರರು/ ಅಧಿಕಾರಿಗಳನ್ನು ಹೃದಯ ಸಂಬಂಧಿ ವೈದ್ಯಕೀಯ ತಪಾಸಣೆಗೆ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಬೆಂಗಳೂರು ಮತ್ತು ಮೈಸೂರು ಯೂನಿಟ್‌ಗಳಿಗೆ ನಿಯೋಜಿಸುವ ಕುರಿತು ನಿರ್ದೇಶನಗಳನ್ನು ನೀಡಿದ್ದಾರೆ.

ಈ ಸುತ್ತೋಲೆಯಲ್ಲಿ ಕರಾರಸಾನಿಗಮದ ನೌಕರರ ಕಾರ್ಯ ಸ್ವರೂಪ ಮತ್ತು ಇತರೆ ಕಾರಣಗಳಿಂದಾಗಿ ನೌಕರರಲ್ಲಿ ಹೃದಯಾಘಾತ/ ಹೃದಯ ಸಂಬಂಧಿ ಕಾಯಿಲೆಗಳು ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಹೃದಯ ಸಂಬಂಧಿ ತಪಾಸಣೆಗಳನ್ನು ಪರೀಕ್ಷೆಗಳನ್ನು ನಿರಂತರವಾಗಿ ಮಾಡಿಸುವುದರಿಂದ ಸಂಭವನೀಯ ಹೃದಯಾಘಾತವನ್ನು ತಪ್ಪಿಸಲು ಮತ್ತು ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ನಿಗಮದ ಎಲ್ಲಾ ನೌಕರರು/ ಅಧಿಕಾರಿಗಳನ್ನು ಹೃದಯಕ್ಕೆ ಸಂಬಂಧಿಸಿದ ನಿರ್ಧಿಷ್ಟವಾದ ಪರೀಕ್ಷೆ/ ತಪಾಸಣೆಗಳಿಗೆ ಒಳಪಡಿಸುವ ಅವಶ್ಯಕತೆಯನ್ನು ಮನಗಂಡು 2018ನೇ ಸಾಲಿನಲ್ಲಿ ನಿಗಮದ ನಿರ್ದೇಶಕರ ಮಂಡಳಿಯ ಅನುಮೋದನೆಯನ್ನು ಪಡೆದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯೊಂದಿಗೆ 5 ವರ್ಷಗಳ ಅವಧಿಗೆ ಒಡಂಬಡಿಕೆಯನ್ನು ಮಾಡಿಕೊಳ್ಳಲಾಗಿದ್ದು, ಬೆಂಗಳೂರು ಮತ್ತು ಮೈಸೂರಿನಲ್ಲಿರುವ ಯೂನಿಟ್‌ನ ಸಹಯೋಗದೊಂದಿಗೆ ಹೃದಯ ಸಂಬಂಧಿ ವೈದ್ಯಕೀಯ ತಪಾಸಣೆಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
10 ಪರೀಕ್ಷೆಗಳ ಮಾಹಿತಿ
1. ECG
2. Echo
3. TMT
4. X-Ray
5. FBS/ PPBS/ RBS
6. Complete Haemogram
7. Lipid Profile
8. RFT
9. Serum Electrolyte
10. Urine Routine
ನಿಗಮದ ನೌಕರರು ಮತ್ತು ಅಧಿಕಾರಿಗಳನ್ನು ತಪಾಸಣೆಗೆ ನಿಯೋಜಿಸುವ ಸಂಬಂಧ ಸುತ್ತೋಲೆಯಲ್ಲಿ ನಿರ್ದೇಶನಗಳನ್ನು ನೀಡಲಾಗಿದೆ. ದಿನಾಂಕ 02/11/2023 ರಿಂದ ಮುಂದಿನ 5 ವರ್ಷಗಳವರೆಗೆ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯೊಂದಿಗೆ ಒಡಂಬಡಿಕೆಯನ್ನು ನವೀಕರಿಸಲಾಗಿದ್ದು, ಈ ಹಿಂದಿನ ಪದ್ಧತಿಯಂತೆ 40 ವರ್ಷ ಮತ್ತು ಮೇಲ್ಪಟ್ಟ ಅಧಿಕಾರಿ/ ಸಿಬ್ಬಂದಿಗಳನ್ನು ವಾಹನಗಳ ಕಾರ್ಯಾಚರಣೆಯಲ್ಲಿ ಯಾವುದೇ ವ್ಯತ್ಯಯ ಆಗದಂತೆ ಹೃದಯ ತಪಾಸಣೆಗೆ ನಿಯೋಜಿಸುವ ನಿರ್ದೇಶನ ನೀಡಲಾಗಿದೆ.
* ವಿಭಾಗದ ಕಾರ್ಮಿಕ ಕಲ್ಯಾಣಾಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನಿಯೋಜಿಸಿದ್ದು, ಸದರಿ ಅಧಿಕಾರಿಗಳು ವಿಭಾಗದ ವ್ಯಾಪ್ತಿಯಲ್ಲಿನ 40 ವರ್ಷ ಮತ್ತು ಮೇಲ್ಪಟ್ಟ ನೌಕರರು ಮತ್ತು ಅಧಿಕಾರಿಗಳ ಪಟ್ಟಿಯನ್ನು ತಯಾರಿಸಿಕೊಳ್ಳುವುದು.
* ಬೆಂಗಳೂರು ಕೇಂದ್ರೀಯ ವಿಭಾಗ, ರಾಮನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಪ್ರಾದೇಶಿಕ ಕಾರ್ಯಾಗಾರ, ಬೆಂಗಳೂರು, ಕೆಂಪೇಗೌಡ ಬಸ್ ನಿಲ್ದಾಣ ಮತ್ತು ಕೇಂದ್ರ ಕಛೇರಿ (ಮುದ್ರಣಾಲಯ, ಆಸ್ಪತ್ರೆ ಸೇರಿದಂತೆ) ಹಾಗೂ ಈ ವ್ಯಾಪ್ತಿಯಲ್ಲಿ ಬರುವ ಕಾಮಗಾರಿ ವಿಭಾಗ, ತರಬೇತಿ ಕೇಂದ್ರಗಳ ಅಧಿಕಾರಿ/ ನೌಕರರನ್ನು ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಬೆಂಗಳೂರು ಯೂನಿಟ್‌ಗೆ ವಾರದ ಪ್ರತಿ ಮಂಗಳವಾರ ಮತ್ತು ಶನಿವಾರಗಳಂದು (ಎರಡನೇ ಶನಿವಾರ ಮತ್ತು ಸರ್ಕಾರಿ ರಜೆ ದಿನಗಳಂದು ಹೊರತುಪಡಿಸಿ) ನಿಯೋಜಿಸುವುದು.
* ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಚಿಕ್ಕಮಗಳೂರು, ಮಂಗಳೂರು, ಪುತ್ತೂರು, ಪ್ರಾದೇಶಿಕ ಕಾರ್ಯಾಗಾರ, ಹಾಸನ ಹಾಗೂ ಈ ವ್ಯಾಪ್ತಿಯಲ್ಲಿ ಬರುವ ಕಾಮಗಾರಿ ವಿಭಾಗ, ತರಬೇತಿ ಕೇಂದ್ರಗಳ ಅಧಿಕಾರಿ/ ನೌಕರರನ್ನು ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಮೈಸೂರು ಯೂನಿಟ್‌ಗೆ ವಾರದ ನಾಲ್ಕು ದಿವಸಗಳಂದು ಅಂದರೆ, ಮಂಗಳವಾರ, ಬುಧವಾರ, ಗುರುವಾರ ಮತ್ತು ಶುಕ್ರವಾರಗಳಂದು ಸರ್ಕಾರಿ ರಜೆ ದಿನಗಳಂದು ಹೊರತುಪಡಿಸಿ) ನಿಯೋಜಿಸುವುದು.
* ವಯೋಮಿತಿಯ ಮೇರೆಗೆ 60 ರಿಂದ 40 ರ ಇಳಿಕೆ ಕ್ರಮದಲ್ಲಿ ಮೊದಲಿಗೆ 60 ರಿಂದ 55 ವರ್ಷದ ವರೆಗಿನ ನೌಕರರಿಗೆ ಮೊದಲ ಆದ್ಯತೆ ನೀಡಿ, ವಿಭಾಗವಾರು ನಮೂದಿಸಿರುವ ಸಿಬ್ಬಂದಿಗಳ ಸಂಖ್ಯೆಗೆ ಅನುಗುಣವಾಗಿ ನಿಯೋಜಿಸಲು ಕ್ರಮ ಕೈಗೊಳ್ಳುವುದು.
* ವಾರದ ರಜೆಯ ದಿನದಂದೇ ನೌಕರರನ್ನು ತಪಾಸಣೆಗಾಗಿ ನಿಯೋಜಿಸುವುದು. ಆ ದಿವಸಗಳಂದು ವಾರದರಜೆ ಹೊಂದಿರದ ಇರದ ನೌಕರರಿಗೆ ಅವರ ಖಾತೆಯಲ್ಲಿರುವ ರಜೆಯನ್ನು ಮಂಜೂರು ಮಾಡಿ ನಿಯೋಜಿಸುವುದು.
* ಪ್ರತಿ ವಾರ ತಪಾಸಣೆಗೆ ನಿಯೋಜಿಸುವ ನೌಕರರ ವಿವರಗಳನ್ನು ಮುಂಚಿತವಾಗಿ ಪ್ರತಿ ಸೋಮವಾರ ಮಧ್ಯಾಹ್ನದೊಳಗೆ ಕೇಂದ್ರ ಕಛೇರಿಯ ನೋಡಲ್ ಅಧಿಕಾರಿಗಳಾದ ಮುಖ್ಯ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿಗಳಿಗೆ ಕಳುಹಿಸುವುದು.
* ತಪಾಸಣೆಗೆ ನಿಯೋಜಿಸುವ ನೌಕರರು ಮತ್ತು ಅಧಿಕಾರಿಗಳಿಗೆ ನಿಯೋಜನಾ ಆದೇಶವನ್ನು ಸೂಕ್ತಾಧಿಕಾರಿಗಳ ಸಹಿ ಮತ್ತು ಮೊಹರಿನೊಂದಿಗೆ ನೀಡುವುದು.
* ನಿಯೋಜನೆಗೊಂಡ ಅಧಿಕಾರಿ/ ಸಿಬ್ಬಂದಿಗಳು ಬೆಳಗ್ಗೆ 8 ಗಂಟೆಗೆ ಖಾಲಿ ಹೊಟ್ಟೆಯಲ್ಲಿ ತಪಾಸಣೆಗೆ ಹಾಜರಾಗಲು ಹಾಗೂ ನಿಗಮವು ನೀಡಿರುವ ನಿಯೋಜನಾ ಆದೇಶ, ಗುರುತಿನ ಚೀಟಿ (ID Card), ಇತ್ತೀಚಿನ ವೇತನ ಪಟ್ಟಿ (Latest Pay Slip) ಮತ್ತು ಆಧಾರ್ ಕಾರ್ಡ್ ಅನ್ನು ತಪ್ಪದೇ ಕೊಂಡೊಯ್ಯಲು ಸೂಚಿಸುವುದು.
* 40ಕ್ಕಿಂತ ಕಡಿಮೆ ವಯಸ್ಸಿನ ನೌಕರರನ್ನು ತುರ್ತು ಸಂದರ್ಭ ಅಥವಾ ತಪಾಸಣೆಯ ಅವಶ್ಯಕತೆ ಕಂಡುಬಂದಲ್ಲಿ ತಪಾಸಣೆಗೆ ನಿಯೋಜಿಸುವುದು. ತತ್ಸಂಬಂಧ ನಿಯೋಜನಾ ಆದೇಶದಲ್ಲಿ ಕಾರಣಗಳೊಂದಿಗೆ ಷರಾ ನಮೂದಿಸುವುದು ಮತ್ತು ಮಾಹಿತಿಯನ್ನು ಕೇಂದ್ರ ಕಛೇರಿಯ ನೋಡಲ್ ಅಧಿಕಾರಿಗೆ ನೀಡುವುದು.
* ತಪಾಸಣೆಗೆ ನಿಯೋಜಿಸಿದ ಸಿಬ್ಬಂದಿಗಳಿಗೆ ಗುರುತರವಾದ ಹೃದಯ ಸಂಬಂಧಿ ಕಾಯಿಲೆಗಳು ಪತ್ತೆಯಾದ ಬಗ್ಗೆ ಅಥವಾ ಹೆಚ್ಚಿನ ಚಿಕಿತ್ಸೆಗೆ ಶಿಫಾರಸ್ಸು ಮಾಡಿರುವ ಬಗ್ಗೆ ಮಾಹಿತಿಯನ್ನು ಪ್ರತಿ ತಿಂಗಳು ಕೇಂದ್ರ ಕಛೇರಿಯ ನೋಡಲ್ ಅಧಿಕಾರಿಗೆ ನೀಡುವುದು.
* ತಪಾಸಣೆಗೆ ಒಳಗಾಗುವ ನೌಕರರ ಪರವಾಗಿ ನಿಗಮವು ತಪಾಸಣಾ ವೆಚ್ಚ ರೂ. 1200 ಗಳಂತೆ ಪ್ರತಿ ನೌಕರರ ಪರವಾಗಿ ಪಾವತಿಸಬೇಕಿರುತ್ತದೆ. ಆದುದರಿಂದ ನಿಯೋಜನೆಗೊಂಡ ನೌಕರರ ದಾಖಲಾತಿಗಳ ಪರಿಶೀಲನೆ ಹಾಗೂ ಧೃಢೀಕರಣ ಕುರಿತು ನೀಡಿರುವ ನಿರ್ದೇಶನಗಳನ್ನು ತಪ್ಪದೇ ಅನುಸರಿಸುವುದು.
* ಕೇಂದ್ರ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ/ ಸಿಬ್ಬಂದಿಗಳನ್ನು ತಪಾಸಣೆಗೆ ನಿಯೋಜಿಸುವ ಸಂಬಂಧ 40 ವರ್ಷ ಮೇಲ್ಪಟ್ಟ ನೌಕರರ ಪಟ್ಟಿಯನ್ನು ಆಯಾ ಇಲಾಖಾ ಮುಖ್ಯಸ್ಥರು ಕಾರ್ಮಿಕ ಇಲಾಖೆಗೆ ನೀಡುವುದು.
* ಕೇಂದ್ರ ಕಛೇರಿಯ ನೋಡಲ್ ಅಧಿಕಾರಿಯು ಇಲಾಖಾ ಮುಖ್ಯಸ್ಥರೊಂದಿಗೆ ಸಮಾಲೋಚಿಸಿ ಪ್ರತಿ ವಾರ ತಪಾಸಣೆಗೆ ನಿಯೋಜಿಸುವ ನೌಕರರಿಗೆ ನಿಯೋಜನಾ ಆದೇಶವನ್ನು ನೀಡುವುದು.












Click it and Unblock the Notifications