ಪ್ರಯಾಣಿಕರನ್ನು ಹೊತ್ತು ಸಾಗುವ KSRTC, ಶೀಘ್ರದಲ್ಲೇ ಮತ್ತೊಂದು ಅವತಾರದಲ್ಲಿ
ಬೆಂಗಳೂರು, ಆಗಸ್ಟ್ 22: ಇಷ್ಟು ದಿನ ರಾಜ್ಯದಾದ್ಯಂತ ಜನರನ್ನು ಹೊತ್ತು ತಿರುಗುತ್ತಿರುವ ಕೆಎಸ್‌ಆರ್‌ಟಿಸಿ ಬಸ್ ನೋಡಿದ್ದಾಗಿದೆ, ಇನ್ನು ಮುಂದೆ ಲಗೇಜ್ ಗಳನ್ನ ಹೊತ್ತು ತಿರುಗೋ ಕೆಎಸ್‌ಆರ್‌ಟಿಸಿ ಲಾರಿಗಳು ರಸ್ತೆಗಿಳಿಯಲಿವೆ. ಇದೇನು ಹೊಸ ವಿಚಾರ ಅಂದರೆ, ಗ್ಯಾರಂಟಿ ಯೋಜನೆ ಎಫೆಕ್ಟ್ ನಿಂದಾಗಿ ತನ್ನ ಆದಾಯದ ಮೂಲ ಹೆಚ್ಚಿಸಿ ಕೊಳ್ಳಲು ಸಾರಿಗೆ ಇಲಾಖೆ ಒಂದಿಲ್ಲೊಂದು ಮಾಸ್ಟರ್ ಪ್ಲಾನ್ ಮಾಡುತ್ತಿದೆ. ಆ ಯೋಜನೆಯ ಭಾಗವೇ ಈ ಕೆಎಸ್‌ಆರ್‌ಟಿಸಿ ಲಾರಿ..
ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿ ಬಳಿಕ ತನ್ನ ವ್ಯಾಪ್ತಿಯಲ್ಲಿ ಇನ್ನಷ್ಟು ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಸದ್ಯ ಕೆಎಸ್‌ಆರ್‌ಟಿಸಿ ಅನೇಕ ಪ್ಲ್ಯಾನ್ ಗೆ ಮುಂದಾಗುತ್ತಿದೆ. ಇದೇ ನಿಟ್ಟಿನಲ್ಲಿ ಸದ್ಯ ತನ್ನ ವ್ಯಾಪ್ತಿಯಲ್ಲಿ ಲಾರಿಗಳ ಬಳಕೆಗೆ ನಿಗಮ ತಯಾರಿ ನಡೆಸಿದ್ದು, ಇನ್ಮುಂದೆ ಲಾರಿಗಳ ಮೂಲಕ ಲಗೇಜ್ ಗಳನ್ನ ರಾಜ್ಯವ್ಯಾಪಿ ಸಾಗಣೆ ಮಾಡಲು ಚಿಂತನೆ ನಡೆಸಿದೆ.

ಇಷ್ಟು ದಿನ ಪ್ರಯಾಣಿಕರು ಸಂಚರಿಸುವ ಬಸ್ಸಿನಲ್ಲಿ ಪಾರ್ಸೆಲ್ ಸೇವೆ ಒದಗಿಸಲಾಗುತ್ತಿತ್ತು. ಜೊತೆಗೆ ಕೆಲ ಖಾಸಗಿಯವರಿಗೆ ಕಾರ್ಗೋ ಸಾಗಣೆ ಟೆಂಡರ್ ಗಳನ್ನ ನೀಡಿ ಅವರಿಂದ ವರ್ಷಕ್ಕೆ 28 ಕೋಟಿಯಷ್ಟು ಲಾಭವನ್ನ ಕೆಎಸ್‌ಆರ್‌ಟಿಸಿ ತನ್ನ ಬೊಕ್ಕಸಕ್ಕೆ ತುಂಬಿಸಿಕೊಳ್ಳುತ್ತಿತ್ತು.
ಆದರೆ ಇತ್ತೀಚಿನ ಕೆಲ ದಿನಗಳಲ್ಲಿ ಲಗೇಜ್ ಸಾಗಣೆಗೆ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಖುದ್ದು ಇನ್ನು ಮುಂದೆ ಸಂಸ್ಥೆಯೇ ಈ ಸೇವೆ ನೀಡಲು ಪ್ಲ್ಯಾನ್ ಮಾಡಿದೆ. ಈ ಮೂಲಕ ಖಾಸಗಿಯವರಿಂದ ಬರುತ್ತಿದ್ದ 28ಕೋಟಿ ಹಣದಿಂದ ಸಾಗಣೆ ಲಾಭವನ್ನ ನೂರು ಕೋಟಿಗೆ ಹೆಚ್ಚಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ..
ಇದಕ್ಕೆ ಸದ್ಯ, ಬಸ್ ಚಾಲಕರನ್ನೇ ಲಾರಿ ಚಾಲಕರನ್ನಾಗಿ ನೇಮಕ ಮಾಡುವ ಸಾಧ್ಯತೆಯಿದೆ. ಇದಕ್ಕೆಂದು ಪ್ರತ್ಯೇಕ ನೇಮಕಾತಿ ಮಾಡುವ ಸಾಧ್ಯತೆ ಕಡಿಮೆ ಇದೆ. ಪಾರ್ಸೆಲ್ ಗ್ರಾಹಕರ ಮನೆ ಬಾಗಿಲಿಗೂ ತಲುಪಿಸಲು ಚಿಂತನೆ ನಡೆಸಲಾಗಿದೆ.
ಪ್ರತ್ಯೇಕ ಶುಲ್ಕ ವಿಧಿಸಿ, ಸೇವೆಗಳನ್ನ ಒದಗಿಸಲು ಕೆಎಸ್ಆರ್ಟಿಸಿ ಪ್ಲಾನ್ ಮಾಡುತ್ತಿದೆ. ನಿಗಮದ ನಿಲ್ದಾಣಗಳಿಗೆ ಬಂದು ಬೀಳುವ ಪಾರ್ಸೆಲ್ ಗಳನ್ನು ಸ್ಥಳೀಯ ಸಿಬ್ಬಂದಿ ಮೂಲಕ ಪೋರ್ಟರ್ ಮಾದರಿಯಲ್ಲಿ ಆಯಾ ಮನೆಗಳಿಗೆ ತಲುಪಿಸಲು ಪ್ಲಾನ್ ಮಾಡಲಾಗುತ್ತಿದ್ದು ಅದಕ್ಕೆ ಪ್ರತ್ಯೇಕ ಶುಲ್ಕ ಇರಲಿದೆ.

ಇನ್ನೂ ಈ ಸಂಬಂಧ ಈಗಾಗಲೇ ನಿಗಮಕ್ಕೆ ಪ್ರಾಥಮಿಕ ಹಂತವಾಗಿ 10 ಲಾರಿಗಳನ್ನ ತರಿಸಲಾಗಿದೆ. ಆ ಮೂಲಕ ರಾಜ್ಯದ ಹೆಚ್ಚು ಬೇಡಿಕೆಗಳಿಗೆ ಪ್ರಾರಂಭದಲ್ಲಿ ಸೇವೆ ಆರಂಭಿಸಲು ಚಿಂತನೆ ನಡೆಸಿದೆ. ಸದ್ಯ ಈಗ ರಾಜ್ಯದೊಳಗಷ್ಟೇ ಸೇವೆ ನೀಡಲು ಕೆಎಸ್‌ಆರ್‌ಟಿಸಿ ಚಿಂತನೆ ನಡೆಸಿದೆ. ನಂತರ ದಿನಗಳಲ್ಲಿ ರಾಜ್ಯದ ಹೊರ ಭಾಗಗಳಿಗೆ ಈ ಸೇವೆ ನೀಡುವ ನಿಟ್ಟಿನಲ್ಲಿ ಪ್ಲ್ಯಾನ್ ಮಾಡಿದ್ದು, ರಾಜ್ಯದೊಳಗೆ ವರ್ಕೌಟ್ ಆದರೆ ಮುಂದಿನ ದಿನಗಳಲ್ಲಿ ಹೊರ ರಾಜ್ಯಗಳಿಗೂ ಸೇವೆ ವಿಸ್ತರಣೆ ಸಾಧ್ಯತೆ ಹೆಚ್ಚಿದೆ.
ಇನ್ನೂ ಈ ಸೇವೆ ಇದೇ ಸೆಪ್ಟೆಂಬರ್ ನಿಂದ ಆರಂಭವಾಗುವ ಸಾಧ್ಯತೆ ಇದ್ದು, ಸದ್ಯದಲ್ಲೇ ದರಗಳನ್ನ ಫಿಕ್ಸ್ ಮಾಡುವ ಸಾಧ್ಯತೆ ಇದೆ. ಒಟ್ಟಾರೆ ಇನ್ಮುಂದೆ ನೀವು ಬಸ್ ನಲ್ಲಿ ಪ್ರಯಾಣ ಮಾಡಿದರೆ, ನಿಮ್ಮ ಲಗೇಜ್ ಗಳು ಲಾರಿ ಜೊತೆ ನಿಮ್ಮ ಜಾಗ ಸೇರಲಿದೆ.












Click it and Unblock the Notifications