E-Vanijya: ವಾಣಿಜ್ಯ ಮಳಿಗೆಗಳ ನಿರ್ವಹಣಾ ತಂತ್ರಾಂಶ 'ಇ-ವಾಣಿಜ್ಯ' ಲೋಕಾರ್ಪಣೆ: ರಾಮಲಿಂಗಾ ರೆಡ್ಡಿ...KSRTC
ಬೆಂಗಳೂರು, ಡಿಸೆಂಬರ್ 03: ಕರ್ನಾಟಕ ರಾಜ್ಯ ಸಾರಿಗೆ ಇಲಾಖೆ ವ್ಯಾಪ್ತಿಯಲ್ಲಿ ನಾಲ್ಕು ಸಾರಿಗೆ ನಿಗಮಗಳು ಕಾರ್ಯ ನಿರ್ವಹಿಸುತ್ತಿವೆ. ನಿತ್ಯ ಸಾವಿರಾರು ಬಸ್‌ಗಳು ಲಕ್ಷಾಂತರ ಪ್ರಯಾಣಿಕರಿಗೆ ಸೇವೆ ನೀಡುತ್ತಿವೆ. ಈ ನಿಗಮದ ವ್ಯಾಪ್ತಿಯಲ್ಲಿ ಒಂದೂವರೆ ಸಾವಿರಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳಿವೆ. ಪ್ರಯಾಣಿಕರಿಗೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ ವಾಣಿಜ್ಯ ಮಳಿಗೆಗಳ ನಿರ್ವಹಣಾ ತಂತ್ರಾಂಶವಾದ 'ಇ-ವಾಣಿಜ್ಯ' ಅನ್ನು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಇಂದು ಬುಧವಾರ ಲೋಕಾರ್ಪಣೆ ಮಾಡಿದರು. ಏನಿದು, ಇದರ ಪ್ರಯೋಜನ, ಇತರ ಮಾಹಿತಿ ಇಲ್ಲಿದೆ.
ಇಂದು ಬೆಂಗಳೂರಿನಲ್ಲಿ ಅಪಘಾತ ಹಾಗೂ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಮೂರು ಸಿಬ್ಬಂದಿಯ ಕುಟುಂಬಕ್ಕೆ ತಲಾ ರೂ.1 ಕೋಟಿ ಪರಿಹಾರ ವಿತರಣೆ ಕಾರ್ಯಕ್ರಮ ನಡೆಯಿತು. ಈ ವೇಳೆ ಪರಿಹಾರ ವಿತರಿಸುವ ಜೊತೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಪ್ರಯಾಣಿಕ ಸ್ನೇಹಿ ಮತ್ತು ವಾಣಿಜ್ಯ ಮಳಿಗೆಗಳ ನಿರ್ವಹಣೆಗಾಗಿ 'ಇ-ವಾಣಿಜ್ಯ' ತಂತ್ರಾಂಶ (Commercial Management Software) ಬಿಡುಗಡೆ ಮಾಡಿದರು.

ನಿಗಮದ ವ್ಯಾಪ್ತಿಯಲ್ಲಿನ ಬಸ್ ನಿಲ್ದಾಣಗಳಲ್ಲಿ ಸಾರ್ವಜನಿಕ ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜನರಲ್ ಸ್ಟಾಲ್, ಉಪಹಾರ ಗೃಹ ಮತ್ತು ಇತರೆ ವಾಣಿಜ್ಯ 1847 ವಾಣಿಜ್ಯ ಮಳಿಗೆಗಳಿವೆ. ಸದರಿ ವಾಣಿಜ್ಯ ಮಳಿಗೆಗಳು, ಅವುಗಳು ವ್ಯವಹಾರಗಳ ಕುರಿತಂತೆ ಪರವಾನಗಿದಾರರಿಂದ ಪ್ರತಿ ಮಾಹೆಯಾನ ವಸೂಲು ಮಾಡಬೇಕಾದ ಪರವಾನಗಿ ಶುಲ್ಕ, ಜಿ.ಎಸ್.ಟಿ ಮೊತ್ತ, ತಡ ಪಾವತಿ, ಇತರೆ ಶುಲ್ಕಗಳ ಕುರಿತ ಲೆಕ್ಕಾಚಾರ ಹಾಕಲಾಗುತ್ತದೆ. ಈ ಸಂಬಂಧ ಇನ್ ವಾಯ್ಸ್ ತಯಾರಿಕೆಯನ್ನು ಪ್ರಸ್ತುತ ಮ್ಯಾನ್ಯುಯಲ್ (ವ್ಯಕ್ತಿಗತವಾಗಿ) ವ್ಯವಸ್ಥೆಯ ಮೂಲಕ ನಿರ್ವಹಿಸಲಾಗುತ್ತಿದೆ.
ವಾಣಿಜ್ಯ ಮಳಿಗೆಗಳ ಕುರಿತ ನಿರ್ವಹಣೆಯನ್ನು ಮ್ಯಾನ್ಯುಯಲ್ ವ್ಯವಸ್ಥೆಯ ಮೂಲಕ ನಿರ್ವಹಿಸಲು ಹೆಚ್ಚಿನ ಸಮಯ ಹಿಡಿಯುತ್ತದೆ. ಲೆಕ್ಕಾಚಾರದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇರುತ್ತದೆ. ಏಕರೂಪತೆ ಮತ್ತು ದಕ್ಷತೆ ಹೆಚ್ಚಿಸಲು ಈ 'ಇ-ವಾಣಿಜ್ಯ' ತಂತ್ರಾಂಶ ಜಾರಿಗೆ ತರಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ವಾಣಿಜ್ಯ ಮಳಿಗೆಳ ನಿರ್ವಹಣೆಯನ್ನು ಸರಳೀಕರಣಗೊಳಿಸುವ ಸಲುವಾಗಿ ನಿಗಮದ ಆಂತರಿಕ ಸಂಪನ್ಮೂಲಗಳನ್ನು ಬಳಸಿಕೊಂಡು ನಿಗಮದ ವತಿಯಿಂದಲೇ ಅಭಿವೃದ್ದಿಪಡಿಸಲಾಗಿದೆ ಎಂದರು.
KSRTC ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ ಅವರು ಮಾತನಾಡಿ, ಸಾರಿಗೆ ಮತ್ತು ಮುಜರಾಯಿ ಸಚಿವರು ಹೇಳಿರುವ ಕಿವಿ ಮಾತನ್ನು ಚಾಚೂ ತಪ್ಪದೆ ಪಾಲಿಸುವಂತೆ ತಿಳಿಸಿದರು. ಸರ್ಕಾರದಿಂದ ಪರಿಹಾರ ಪಡೆದ ಮೃತ ಸಾರಿಗೆ ನಿಗಮದ ಸಿಬ್ಬಂದಿ ಕುಟುಂಬಸ್ಥರು ಆ ಹಣವನ್ನು ಸದುಪಯೋಗ ಮಾಡಿಕೊಳ್ಳಬೇಕು. ಇತರರನ್ನು ನಂಬಿ ದುಡ್ಡು ಕಳೆದುಕೊಳ್ಳದಂತೆ ಕೋರಿದರು.












Click it and Unblock the Notifications