Transport: ಕರ್ನಾಟಕ ಅಪಘಾತ ರಹಿತ ಸಾರಿಗೆ ಸೇವೆಗೆ ಉತ್ತೇಜನ: ಸಿಬ್ಬಂದಿಗೆ ಭತ್ಯೆ, ವಿಶೇಷ ಪುರಸ್ಕಾರ: KSRTC
KSRTC Rewards for Drivers: ಕರ್ನಾಟಕ ರಾಜ್ಯ ಸಾರಿಗೆ ಸೇವೆಯಲ್ಲಿ ಇನ್ನಷ್ಟು ಸುರಕ್ಷತೆ, ಅಪಘಾತ ರಹಿತ ಚಾಲನೆಯ ಪ್ರವೃತ್ತಿ ಪ್ರಮಾಣ ಹೆಚ್ಚಿಸುವ ಸದುದ್ದೇಶದಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಮಹತ್ವದ ನಿರ್ಧಾರ ಮಾಡಿದೆ. ಬಸ್ ಚಾಲಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅಪಘಾತ ಮುಕ್ತ ಚಾಲನೆಗೆ ಪ್ರೇರೆಪಿಸಲು ಸಿಬ್ಬಂದಿಗೆ ವಿಶೇಷ ಪುರಸ್ಕಾರ ಮಾಡಿ ಗೌರವಿಸುವ ಬಗ್ಗೆ ಸುತ್ತೋಲೆ ಹೊರಡಿಸಿದೆ.
ಸೆಪ್ಟಂಬರ್ 16ರಂದು ಜರುಗಿದ 32 ನೇ ಕರಾರಸಾನಿಗಮ ಪ್ರಯಾಣಿಕರ ಅಪಘಾತ ಪರಿಹಾರ ನಿಧಿ ನ್ಯಾಸ ಮಂಡಳಿ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಡಿಸೆಂಬರ್ 15ರಂದು ಸೋಮವಾರ ಸುತ್ತೋಲೆ ಹೊರಡಿಸಿ ಅಧಿಕೃತ ಮಾಹಿತಿ ನೀಡಿದೆ. ಈ ಮೂಲಕ ಸಾರಿಗೆ ಸುರಕ್ಷತೆ ವಿಚಾರದಲ್ಲಿ ಪ್ರಯಾಣಿಕರಿಗೂ ಗುಡ್ ನ್ಯೂಸ್ ನೀಡಿದಂತಾಗಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ನಿಗಮದ (KSRTC) ವಾಹನಗಳಲ್ಲಿ ಪ್ರಯಾಣಿಸುವವರ ಸುರಕ್ಷತೆಗಾಗಿ ಹಲವಾರು ಯೋಜನೆಗಳನ್ನು ಕೈಗೊಳ್ಲಲಾಗಿದೆ. ಅದರಲ್ಲಿ ಮುಖ್ಯವಾಗಿ ಅಪಘಾತ ರಹಿತ ಚಾಲನೆಯ ಪ್ರವೃತ್ತಿಯನ್ನು ಹೊಂದಿರುವ ಚಾಲಕರಿಗೆ ಪ್ರೋತ್ಸಾಹಿಸಲಾಗುತ್ತದೆ. ಜೊತೆಗೆ ಅಪಘಾತ ಮುಕ್ತ ಚಾಲನೆಗೆ ಪ್ರೇರೆಪಿಸುವ ಅಪಘಾತರಹಿತ ಮತ್ತು ಅಪರಾಧರಹಿತ ಸೇವೆ ಸಲ್ಲಿಸಿರುವ ಚಾಲಕರಿಗೆ ವಿಶೇಷ ಪುರಸ್ಕಾರ ನೀಡಲಾಗುತ್ತದೆ.
ಈ ಪುರಸ್ಕಾರವು ಮುಖ್ಯಮಂತ್ರಿಗಳ ಚಿನ್ನದ ಪದಕ ಮತ್ತು ಬೆಳ್ಳಿ ಪದಕ ವಿತರಿಸುವ ಜೊತೆಗೆ ಪ್ರಶಂಸನಾ ಪತ್ರದೊಂದಿಗೆ ನಗದು ಪುರಸ್ಕಾರ ಹೊಂದಿದೆ. ನಂತರ ಪದಕ ಪಡೆದ ಚಾಲಕರಿಗೆ ಪ್ರತಿ ತಿಂಗಳು ಮಾಸಿಕ ಭತ್ಯೆ ಸಹ ನೀಡಲಾಗುತ್ತದೆ ಎಂದು ಸಾರಿಗೆ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
ಪದಕ, ನಗದು ಪುರಸ್ಕಾರ, ಮಾಸಿಕ ಭತ್ಯೆ
ಮುಖ್ಯಮಂತ್ರಿ ಚಿನ್ನದ ಪದಕ ಮತ್ತು ಬೆಳ್ಳಿ ಪದಕ ಪಡೆದ ಚಾಲಕರಿಗೆ ಪ್ರಶಂಸನಾ ಪತ್ರದೊಂದಿಗೆ ನೀಡುತ್ತಿದ್ದ ನಗದು ಪುರಸ್ಕಾರ ಮತ್ತು ಪ್ರತಿ ತಿಂಗಳು ನೀಡುತ್ತಿದ್ದ ಮಾಸಿಕ ಭತ್ಯೆಯನ್ನು ಪರಿಷ್ಕರಿಸಲಾಗಿದೆ. ಏನೆಲ್ಲ ಪರಿಷ್ಕರಣೆಗೊಂಡಿದೆ ಎಂಬ ವಿವರವಾದ ಪಟ್ಟ ಇಲ್ಲಿದೆ.
1. ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಅರ್ಹರಾದ ಚಾಲಕರಿಗೆ (ಇಲಾಖಾ ವಾಹನಗಳ ಚಾಲಕರು ಸೇರಿದಂತೆ) ನೀಡುವ ನಗದು ಪುರಸ್ಕಾರವನ್ನು ರೂ.5,000/- ಗಳನ್ನು ಪರಿಷ್ಕರಿಸಿ ರೂ.10,000 ಗೆ ಹೆಚ್ಚಿಸಲಾಗಿದೆ.
2. ಮುಖ್ಯಮಂತ್ರಿ ಚಿನ್ನದ ಪದಕ ಪಡೆದ ಚಾಲಕರಿಗೆ (ಇಲಾಖಾ ವಾಹನಗಳ ಚಾಲಕರು ಸೇರಿದಂತೆ) ನೀಡುತ್ತಿದ್ದ ಮಾಸಿಕ ಭತ್ಯೆ ರೂ.500/- ಗಳನ್ನು ಪರಿಷ್ಕರಿಸಿ ರೂ.1,000/-ನಿಗದಿಪಡಿಸಲಾಗಿದೆ.
3. ಬೆಳ್ಳಿ ಪದಕಕ್ಕೆ ಅರ್ಹರಾದ ಚಾಲಕರಿಗೆ ನೀಡುವ ನಗದು ಪುರಸ್ಕಾರವನ್ನು ರೂ.2,500/-ಗಳನ್ನು ಪರಿಷ್ಕರಿಸಿ ರೂ.5,000ಕ್ಕೆ ಏರಿಸಲಾಗಿದೆ.
4. ಬೆಳ್ಳಿ ಪದಕ ಪಡೆದ ಚಾಲಕರಿಗೆ ನೀಡುತ್ತಿದ್ದ ಮಾಸಿಕ ಭತ್ಯೆಯನ್ನು ರೂ.250/-ಗಳನ್ನು ಪರಿಷ್ಕರಿಸಿ ರೂ.500/- ನಿಗದಿಪಡಿಸಲಾಗಿದೆ.
5. ಪರಿಷ್ಕರಿಸಿರುವ ನಗದು ಪುರಸ್ಕಾರವನ್ನು 01.01.2026 ಮತ್ತು ನಂತರ ನಡೆಯುವ ಬೆಳ್ಳಿ ಮತ್ತು ಚಿನ್ನದ ಪದಕ ಸಮಾರಂಭದಲ್ಲಿ ಪದಕ ಪಡೆಯುವ ಚಾಲಕರಿಗೆ ನೀಡುವುದು.
6. ಹೆಚ್ಚಿಸಿರುವ ಮಾಸಿಕ ಭತ್ಯೆಯನ್ನು ಈಗ ಮಾಸಿಕ ಭತ್ಯೆ ಪಡೆಯುತ್ತಿರುವ ಚಾಲಕರಿಗೆ ಜನವರಿ-2026 ರ ಮಾಹೆಯಿಂದ ನೀಡುವುದು.
7. ಮುಂದಿನ ವರ್ಷಗಳಲ್ಲಿ ಪದಕಕ್ಕೆ ಅರ್ಹಗೊಂಡ ವರ್ಷದಿಂದಲೇ ಮಾಸಿಕ ಭತ್ಯೆಯನ್ನು ನೀಡುವುದು. (ಉದಾ: 2025 ನೇ ಸಾಲಿನಲ್ಲಿ ಪದಕಕ್ಕೆ ಅರ್ಹಗೊಂಡಲ್ಲಿ 2026 ನೇ ಜನವರಿಯಿಂದ ಪ್ರೋತ್ಸಾಹ ಧನ ನೀಡಲು ಅರ್ಹಗೊಳಿಸುವುದು)
ಮಾಸಿಕ ಭತ್ಯೆಯನ್ನು ನೀಡುವಾಗ ಸಾಮಾನ್ಯ ಸ್ಥಾಯಿ ಆದೇಶದಲ್ಲಿ ತಿಳಿಸಿರುವ ಎಲ್ಲಾ ಕ್ರಮಗಳನ್ನು ಅನುಸರಿಸುವುದು. ಇನ್ನುಳಿದಂತೆ ಉಲ್ಲೇಖಿತ ಸಾಮಾನ್ಯ ಸ್ಥಾಯಿ ಆದೇಶದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಸುತ್ತೋಲೆ ತಲುಪಿದ್ದಕ್ಕೆ ಸ್ವೀಕೃತಿಯನ್ನು ನೀಡುವಂತೆ ತಿಳಿಸಲಾಗಿದೆ.












Click it and Unblock the Notifications