ಭಾರತ ಬಂದ್ : ಕೆಎಸ್ಆರ್‌ಟಿಸಿ, ಬಿಎಂಟಿಸಿ ಸಂಚಾರವಿಲ್ಲ?
ಬೆಂಗಳೂರು, ಸೆಪ್ಟೆಂಬರ್ 09 : ಇಂಧನ ಬೆಲೆ ಏರಿಕೆ ವಿರೋಧಿಸಿ ಸೆ.10ರಂದು ಭಾರತ ಬಂದ್‌ಗೆ ಕರೆ ನೀಡಲಾಗಿದೆ. ಕೆಎಸ್ಆರ್‌ಟಿಸಿ ಮತ್ತು ಬಿಎಂಟಿಸಿ ನೌಕರರು ಬಂದ್‌ಗೆ ಬೆಂಬಲ ನೀಡಿದ್ದು, ಸರ್ಕಾರಿ ಬಸ್ಸುಗಳ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.
ಕೆಎಸ್ಆರ್‌ಟಿಸಿ ಮತ್ತು ಬಿಎಂಟಿಸಿ ವರ್ಕರ್ಸ್ ಫೆಡರೇಷನ್ ಬಂದ್‌ಗೆ ಬೆಂಬಲ ನೀಡಿದೆ. ಆದರೆ, ಕೆಎಸ್‌ಆರ್‌ಟಿಸಿ ಎಲ್ಲಾ ಡಿಪೋಗಳಿಗೆ ಪತ್ರ ಬರೆದಿದ್ದು, ಸೆ.10ರಂದು ಬಸ್ ಸಂಚಾರಕ್ಕೆ ಅಡಚಣೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದೆ.

ಡಿಪೋ ಮ್ಯಾನೇಜರ್‌ಗಳು ಸಹ ಎಲ್ಲಾ ನೌಕರರು ಸೋಮವಾರ ಕೆಲಸಕ್ಕೆ ಹಾಜರಾಗಬೇಕು ಎಂದು ಸೂಚನೆ ನೀಡಿದ್ದಾರೆ. ಕೆಲಸಕ್ಕೆ ಗೈರಾದರೆ 'ನೋ ವರ್ಕ್, ನೋ ಪೇ' ನಿಯಮ ಜಾರಿಗೆ ತರಲಾಗತ್ತದೆ ಎಂದು ಹೇಳಿದ್ದಾರೆ.
ಟ್ಯಾಕ್ಸಿ ಸೇವೆ ಇಲ್ಲ : ಓಲಾ, ಊಬರ್, ಟ್ಯಾಕ್ಸಿ ಫಾರ್ ಶೋರ್ ಸೇರಿದಂತೆ ಯಾವುದೇ ಟ್ಯಾಕ್ಸಿಗಳು ಸೋಮವಾರ ಸಂಚಾರ ನಡೆಸುವುದಿಲ್ಲ. ಬೆಳಗ್ಗೆ 6 ರಿಂದ ಸಂಜೆ 6 ರ ತನಕ ಸೇವೆ ನೀಡುವುದಿಲ್ಲ ಎಂದು ಟ್ಯಾಕ್ಸಿ ಮಾಲೀಕರ ಸಂಘದ ಅಧ್ಯಕ್ಷ ತನ್ವೀರ್ ಪಾಷಾ ಹೇಳಿದ್ದಾರೆ.
'ಟೌನ್ ಹಾಲ್ ಮುಂದೆ ಪ್ರತಿಭಟನೆ ನಡೆಸಲು ನಾವು ನಿರ್ಧರಿಸಿದ್ದೆವು. ಆದರೆ. ಪ್ರತಿಪಕ್ಷಗಳು ಇದೇ ಉದ್ದೇಶ ಇಟ್ಟುಕೊಂಡು ಬಂದ್‌ಗೆ ಕರೆ ನೀಡಿವೆ. ನಾವು ಅದಕ್ಕೆ ಬೆಂಬಲ ನೀಡುತ್ತಿದ್ದೇವೆ' ಎಂದು ತನ್ವೀರ್ ಪಾಷಾ ತಿಳಿಸಿದ್ದಾರೆ.
ಹಲವು ಆಟೋ ಚಾಲಕರ ಸಂಘ ಮತ್ತು ವಿಮಾನ ನಿಲ್ದಾಣದ ಟ್ಯಾಕ್ಸಿ ಮಾಲೀಕರ ಸಂಘವೂ ಭಾರತ ಬಂದ್ ಕರೆಗೆ ಬೆಂಬಲ ನೀಡಿದೆ. ಆದ್ದರಿಂದ, ಟ್ಯಾಕ್ಸಿಗಳ ಸಂಚಾರವೂ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.












Click it and Unblock the Notifications