ಒಂದೆಡೆ ಕಷ್ಟತಂದ ಮಳೆ, ಮತ್ತೊಂದೆಡೆ ಸಂತಸದ ಹೊಳೆ
ಬೆಂಗಳೂರು,ಆ.7: ರಾಜ್ಯದಲ್ಲಿ ಮಳೆ ಆರ್ಭಟ ಬುಧವಾರದಿಂದ ಮತ್ತೆ ಹೆಚ್ಚಾಗಿದೆ. ಕೊಡಗು, ಶಿವಮೊಗ್ಗ, ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದೆ.
ಕೊಡಗಿನಲ್ಲಿ ಮಳೆಯ ಜತೆ ವಿಪರೀತ ಚಳಿಗಾಳಿ ಬೀಸುತ್ತಿದ್ದು, ಗುರುವಾರ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆಯಾಗಿದೆ. ತಲಕಾವೇರಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಭಾಗಮಂಡಲ- ಮಡಿಕೇರಿ ರಸ್ತೆಯ ಮೇಲೆ ನೀರು ಹರಿಯುತ್ತಿದೆ.
ಶಿವಮೊಗ್ಗದಲ್ಲಿ ಶರಾವತಿ, ವರಾಹಿ, ಕುಮುದ್ವತಿ, ಚಕ್ರ, ಸಾವೆಹಕ್ಲು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ಚಿಕ್ಕಮಗಳೂರಿನಲ್ಲಿ ತುಂಗಾ ನದಿಯಲ್ಲಿ ಪ್ರವಾಹ ಉಂಟಾಗಿದ್ದರಿಂದ ಶೃಂಗೇರಿ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಕುರುಬಗೆರೆ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಮೂಡಿಗೆರೆ, ಕಳಸ, ಹೊರನಾಡು, ಕೊಟ್ಟಿಗೆಹಾರ, ಕೊಪ್ಪ, ಶೃಂಗೇರಿ, ಕೆರೆಕಟ್ಟೆ, ಕಿಗ್ಗಾ ಹಾಗೂ ಎನ್.ಆರ್.ಪುರ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ.
ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಅಘನಾಶಿನಿ ನದಿಯಲ್ಲಿ ನೀರಿನ ಮಟ್ಟ ಏರಿದ್ದು, ನೆರೆ ಹಾವಳಿ ಭೀತಿ ಎದುರಾಗಿದೆ.ವರದಾ ನದಿಯಲ್ಲಿ ಪ್ರವಾಹ ಹೆಚ್ಚಿದ್ದರಿಂದ ಶಿರಸಿ ತಾಲ್ಲೂಕು ಹಾಗೂ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕೆಲ ಗ್ರಾಮಗಳು ಜಲಾವೃತಗೊಂಡಿವೆ.
ದಕ್ಷಿಣಕನ್ನಡ ಬಹುತೇಕ ಕಡೆ ಮಳೆಯಾಗುತ್ತಿದೆ. ಕಡಬದಿಂದ ಉಪ್ಪಿನಂಗಡಿಗೆ ಸಂಪರ್ಕ ಕಲ್ಪಿಸುವ ಹೊಸ್ಮಠ ಸೇತುವೆ ಸೋಮವಾರ ರಾತ್ರಿಯಿಂದ ಮುಳುಗಡೆಯಾಗಿದೆ.
ಮೂವರು ಬಲಿ: ಮಳೆ ಸಂಬಂಧಿ ಅವಘಡಕ್ಕೆ ಮೂವರು ಬಲಿಯಾಗಿದ್ದಾರೆ. ಉತ್ತರಕನ್ನಡದ ಯಲ್ಲಾಪುರದಲ್ಲಿ ಶಮೀರ್ ಆದಂ ಶೇಖ್(36) ಕಾಲು ಜಾರಿ ನದಿಗೆ ಬಿದ್ದು ಮೃತಪಟ್ಟಿದ್ದಾರೆ. ಚಿಕ್ಕಮಗಳೂರಿನ ಕೊಪ್ಪದಲ್ಲಿ ಕಂಬಿನಹಳ್ಳಲು ಗ್ರಾಮದ ನಿವಾಸಿ ರಾಜೇಶ್(29) ಹಳ್ಳದಲ್ಲಿ ಕೊಚ್ಚಿಹೋಗಿದ್ದಾನೆ. ಉತ್ತರಕನ್ನಡದ ಚಾಂದೇವಾಡಿ ಎಂಬಲ್ಲಿ ಸೇತುವೆ ಮೇಲೆ ನೀರು ಹರಿಯುತ್ತಿದ್ದಾಗ ದಾಟಲು ಪ್ರಯತ್ನಿಸಿ ಜಾನೋಬಾ ಚೌಧರಿ(55) ಕೊಚ್ಚಿ ಹೋಗಿದ್ದಾರೆ.
ಸಿಎಂ ಬಾಗಿನ: 124 ಅಡಿ ಎತ್ತರದ ಕೆಆರ್‌ಎಸ್ ಜಲಾಶಯ ಭರ್ತಿಯಾದ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆ.6 ಬುಧವಾರ ಬಾಗಿನ ಅರ್ಪಿಸಿದರು. ಕಳೆದ ವರ್ಷ ಆ.1ರಂದು ಜಲಾಶಯ ಭರ್ತಿಯಾಗಿದ್ದ ಜಲಾಶಯ ಈ ಬಾರಿ ಐದು ದಿನ ತಡವಾಗಿ ಭರ್ತಿಯಾಗಿದೆ.
| ಭಾರೀ ಮಳೆ: ಯಾವ ಜಲಾಶಯದಲ್ಲಿ ಎಷ್ಟು ನೀರಿದೆ? | |||||
| ಜಲಾಶಯ | ಗರಿಷ್ಠ ಮಟ್ಟ | ಇಂದಿನ ನೀರಿನ ಮಟ್ಟ | ಕಳೆದ ವರ್ಷದ ಮಟ್ಟ | ||
| ಲಿಂಗನಮಕ್ಕಿ | 1819 | 1806.45 | 1814.20 | ||
| ತುಂಗಭದ್ರಾ | 1633.00 | 1628.96 | 1631. 59 | ||
| ಹಾರಂಗಿ | 2,859 | 2857.76 | 2853.37 | ||
| ಕೆಆರ್‌ಎಸ್ | 124.80 | 124.80 | 124.00 | ||
| ಹೇಮಾವತಿ | 2922 | 2,921.00 | 2,921.50 | ||
| ಕಬಿನಿ | 2284 | 2282.18 | 2281.00 | ||
| ಮಲಪ್ರಭಾ | 2079.50 | 2062.40 | 2067.70 | ||
| ಘಟಪ್ರಭಾ | 2175 | 2154.61 | 2174.50 | ||
* ನೀರಿನ ಮಟ್ಟ ಅಡಿಗಳಲ್ಲಿ

ಸಿಎಂ ಬಾಗಿನ:
124 ಅಡಿ ಎತ್ತರದ ಕೆಆರ್‌ಎಸ್ ಜಲಾಶಯ ಭರ್ತಿಯಾದ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆ.6 ಬುಧವಾರ ಬಾಗಿನ ಅರ್ಪಿಸಿದರು.

ಐದು ದಿನ ತಡವಾಗಿ ಭರ್ತಿ:
ಕಳೆದ ವರ್ಷ ಆ.1ರಂದು ಭರ್ತಿಯಾಗಿದ್ದ ಕೆಆರ್‌ಎಸ್ ಜಲಾಶಯ ಈ ಬಾರಿ ಐದು ದಿನ ತಡವಾಗಿ ಭರ್ತಿಯಾಗಿದೆ.

ಬಹುತೇಕ ಜಲಾಶಯಗಳು ಭರ್ತಿ:
ರಾಜ್ಯದ ಬಹುಭಾಗದಲ್ಲಿ ಉತ್ತಮ ಮಳೆಯಾಗಿದ್ದು ಬಹುತೇಕ ಎಲ್ಲ ಜಲಾಶಯಗಳು ಭರ್ತಿಯಾಗಿದೆ. ಕೆಆರ್‌ಎಸ್, ಆಲಮಟ್ಟಿ, ಭದ್ರಾ, ಹೇಮಾವತಿ, ತುಂಗಭದ್ರಾ, ಘಟಪ್ರಭ, ಮಲಪ್ರಭ, ನಾರಾಯಣಪುರ, ಕಬಿನಿ ಮತ್ತು ಹಾರಂಗಿ ಸೇರಿದಂತೆ ಎಲ್ಲ ಪ್ರಮುಖ ಜಲಾಶಯಗಳು ತುಂಬಿ ತುಳುಕುತ್ತಿವೆ.

ಒಳಹರಿವು ಹೆಚ್ಚಳ:
ಕೊಡಗು,ಮಲೆನಾಡು, ಕರಾವಳಿ,ಉತ್ತರ ಕರ್ನಾಟಕ ಭಾಗದಲ್ಲೂ ಮಳೆ ಬೀಳುತ್ತಿರುವುದರಿಂದ ಜಲಾಶಯಗಳ ಒಳಹರಿವು ಹೆಚ್ಚಿದೆ. ಬಹುತೇಕ ಅಣೆಕಟ್ಟೆಗಳಲ್ಲಿ ಹೆಚ್ಚಿನ ನೀರನ್ನು ಹೊರ ಬಿಡಲಾಗುತ್ತಿದೆ.

ತಮಿಳುನಾಡಿಗೆ 40.357 ಟಿಎಂಸಿ ನೀರು
ಕಾವೇರಿಯಿಂದ ತಮಿಳುನಾಡಿಗೆ ಜೂ.1ರಿಂದ ಜು.31ರವರೆಗೆ ಎರಡು ತಿಂಗಳಲ್ಲಿ 40.357 ಟಿಎಂಸಿ ನೀರು ಬಿಡಲಾಗಿದೆ. ಬಿಳಿಗುಂಡ್ಲುವಿನಲ್ಲಿರುವ ಕೇಂದ್ರ ಜಲ ಕೇಂದ್ರ ಮಾಪನ ದಾಖಲೆ ಅನ್ವಯ 40.357 ಟಿಎಂಸಿ ನೀರು ಹರಿದಿದೆ. ಮೆಟ್ಟೂರು ಜಲಾಶಯಕ್ಕೆ ಕಾವೇರಿಯಿಂದ ಒಟ್ಟು 42347 ಕ್ಯುಸೆಕ್ ನೀರು ಹರಿಯ ಬಿಡಲಾಗುತ್ತಿದೆ. ಹಿಂದಿನ ವರ್ಷ ಇದೇ ಅವಧಿಯಲ್ಲಿ 138513 ಕ್ಯುಸೆಕ್ ನೀರು ಹರಿಸಲಾಗಿತ್ತು












Click it and Unblock the Notifications