ಜೆಡಿಎಸ್ ನಲ್ಲಿ ಬಿರುಗಾಳಿ? ಸಿದ್ದು,ರೇವಣ್ಣ ರಹಸ್ಯ ಮಾತುಕತೆ
ಬೆಂಗಳೂರು, ಸೆ 13: ವಲಸಿಗರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ದಕ್ಕೆ ಪಕ್ಷದ ಕೆಲವು ಪ್ರಮುಖ ನಾಯಕರಿಗೆ ತೀವ್ರ ಅಸಮಾಧಾನವಾಗಿರುವ ಬೆನ್ನಲ್ಲೇ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಮುಂದೊಂದು ದಿನ ಜೆಡಿಎಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಭವಿಷ್ಯ ನುಡಿದಿದ್ದಾರೆ.
ಪಕ್ಷದಲ್ಲಿನ ಅಸಮಾಧಾನದ ಹೊಗೆಗೆ ಪೂರಕ ಎನ್ನುವಂತೆ ಜೆಡಿಎಸ್ ನಾಯಕ ದೇವೇಗೌಡ ಪುತ್ರ ಎಚ್ ಡಿ ರೇವಣ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಚೀನಾ ಪ್ರವಾಸಕ್ಕೆ ಮುನ್ನ ಭೇಟಿಯಾಗಿದ್ದರು ಎನ್ನಲಾಗುತ್ತಿದೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಉಪಚುನಾವಣೆಯಲ್ಲಿ ಸಹೋದರನ ಮೂಲಕ ದಿಗ್ವಿಜಯ ಸಾಧಿಸಿರುವ ಡಿ ಕೆ ಶಿವಕುಮಾರ್, ರೇವಣ್ಣ ಮತ್ತು ಸಿದ್ದು ರಹಸ್ಯ ಮಾತುಕತೆಯ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಜೆಡಿಎಸ್ ಪಕ್ಷದಲ್ಲಿ ಆಂತರಿಕ ಕಲಹ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಮತ್ತು ಜೆಡಿಎಸ್ ನಾಯಕ ಎಚ್ ಡಿ ರೇವಣ್ಣ ರಹಸ್ಯ ಮಾತುಕತೆ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ರಾಜಭವನದಲ್ಲಿ ನಡೆಯುವ ಕುತೂಹಲಕಾರಿ ಬೆಳವಣಿಗೆಯನ್ನು ನೋಡುತ್ತಿರಿ ಎಂದು ಜೆಡಿಎಸ್ ನಾಯಕರಿಗೆ ಗಲಿಬಿಲಿ ಹುಟ್ಟಿಸಿದ್ದಾರೆ.

ಏನಿದು ಅಸಮಾಧಾನ
ಕುಮಾರಸ್ವಾಮಿ ತೊರೆದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಎ ಕೃಷ್ಣಪ್ಪ ಅವರನ್ನು ಆಯ್ಕೆ ಮಾಡಿದ್ದು ಅಸಮಾಧಾನದ ಹೊಗೆ ಏಳಲು ಪ್ರಮುಖ ಕಾರಣ. ಕೃಷ್ಣಪ್ಪ ಕೆಲವೇ ತಿಂಗಳ ಕೆಳಗೆ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದರು.

ಎ ಕೃಷ್ಣಪ್ಪ
ಮಾಜಿ ಮುಖ್ಯಮಂತ್ರಿ ಮತ್ತು ವಿದೇಶಾಂಗ ಸಚಿವ ಎಸ್ಎಂ ಕೃಷ್ಣ ಸರ್ಕಾರದಲ್ಲಿ ಕೃಷ್ಣಪ್ಪ ಸಮಾಜ ಕಲ್ಯಾಣ ಸಚಿವರಾಗಿದ್ದರು. ಯಾದವ ಸಮುದಾಯದ ಪ್ರಭಾವಿ ನಾಯಕರೂ ಆಗಿರುವ ಕೃಷ್ಣಪ್ಪ ಕಳೆದ ಚುನಾವಣೆಯಲ್ಲಿ ಕೆಆರ್ ಪುರಂ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಬಯಸಿದ್ದರು. ಆದರೆ ಕಾಂಗ್ರೆಸ್ ಭೈರತಿ ಬಸವರಾಜ್ ಅವರನ್ನು ಕಣಕ್ಕಿಳಿಸಿತ್ತು. ಇದರಿಂದ ಬೇಸತ್ತ ಕೃಷ್ಣಪ್ಪ ಕೊನೇ ಕ್ಷಣದಲ್ಲಿ ಜೆಡಿಎಸ್ ಟಿಕೆಟ್ ಪಡೆದು ಹಿರಿಯೂರು ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಕೃಷ್ಣಪ್ಪ ಜೆಡಿಎಸ್ ಟಿಕೆಟಿನಿಂದ ಕಣಕ್ಕಿಳಿದ ಕೆಲವೇ ದಿನಗಳಲ್ಲಿ ಅವರ ಮನೆ ಮೇಲೆ ಆದಾಯ ತೆರಿಗೆ ದಾಳಿ ನಡೆದಿತ್ತು.

ಜೆಡಿಎಸ್ ನಲ್ಲಿ ಎಲ್ಲವೂ ಸರಿಯಿಲ್ಲ
ಇತ್ತೀಚೆಗೆ ನಡೆದ ಪಕ್ಷದ ಸಭೆಯಲ್ಲಿ ಪ್ರಮುಖ ನಾಯಕರಾದ ಚೆಲುವರಾಯಸ್ವಾಮಿ, ಜಮೀರ್ ಅಹಮದ್, ಯತ್ನಾಳ್ ಉದ್ದೇಶಪೂರ್ವಕವಾಗಿಯೇ ಗೈರು ಹಾಜರಾಗಿದ್ದರು ಎನ್ನಲಾಗುತ್ತಿದೆ. ಬಸವಕಲ್ಯಾಣ ಕ್ಷೇತ್ರದ ಶಾಸಕ ಮಲ್ಲಿಕಾರ್ಜುನ ಖೂಬಾ ವಲಸಿಗರಿಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ದಕ್ಕೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತ ಪಡಿಸಿ ಲಿಂಗಾಯಿತ ಸಮುದಾಯಕ್ಕೆ ಆದ್ಯತೆ ನೀಡುವಂತೆ ಕೋರಿದ್ದರು.

ದೇವೇಗೌಡ
ಯಾದವೀ ಸಮುದಾಯದ ನಾಯಕನಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿ ಆಡಳಿತ ಕಾಂಗ್ರೆಸ್ ಪಕ್ಷಕ್ಕೆ ಸಡ್ದು ಹೊಡೆಯುವಲ್ಲಿ ಗೌಡ್ರು ಯಶಸ್ವಿಯಾಗಿದ್ದರೂ, ಪಕ್ಷದ ಪ್ರಮುಖ ನಾಯಕರ ಅಸಮಾಧಾನವನ್ನು ಸರಿ ಪಡಿಸುವುದು ದೇವೇಗೌಡ ಮತ್ತು ಕುಮಾರಸ್ವಾಮಿಗೆ ದೊಡ್ಡ ತಲೆನೋವಾಗಿ ಪರಿಣಮಿಸ ಬಹುದು.

ನಮ್ಮಲ್ಲೂ ಇದ್ದಾರೆ
ಜೆಡಿಎಸ್ ನಲ್ಲೂ ಅಜೀಂ, ಕಾಶಂಪೂರ್, ಹೊರಟ್ಟಿ, ಜಮೀರ್, ಚೆಲುವರಾಯಸ್ವಾಮಿ ಮುಂತಾದ ಸಮರ್ಥ ನಾಯಕರಿದ್ದಾರೆ. ಆದರೆ ಕೃಷ್ಣಪ್ಪ ಅವರನ್ನು ಆಯ್ಕೆ ಮಾಡುವ ಮೂಲಕ ಪ್ರಮುಖವಾಗಿ ಕಾಂಗ್ರೆಸ್ಸಿಗೆ ಸಂದೇಶ ರವಾನಿಸ ಬೇಕು ಎನ್ನುವುದು ದೇವೇಗೌಡರ ಉದ್ದೇಶ ಆಗಿದ್ದರೂ ಆಗಿರಬಹುದು.












Click it and Unblock the Notifications