ನಿರುದ್ಯೋಗಿಗಳಿಗೆ ಸಿಹಿ ಸುದ್ದಿ; ಶೀಘ್ರ ಕೆಪಿಟಿಸಿಎಲ್‌ನ 1899 ಹುದ್ದೆಗಳ ಭರ್ತಿ!
ಬೆಂಗಳೂರು, ಅ. 11: ನಿರುದ್ಯೋಗಿಗಳಿಗೆ ರಾಜ್ಯ ವಿದ್ಯುತ್ ಪ್ರಸರಣ ನಿಗಮ (ಕೆಪಿಟಿಸಿಎಲ್)ವು ಸಿಹಿ ಸುದ್ದಿಯನ್ನು ಕೊಟ್ಟಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿರುವ ಇಂಧನ ಸಚಿವ ವಿ. ಸುನಿಲ್ ಕುಮಾರ್, "ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಿಂದ 1899 ಕಿರಿಯ ಪವರ್ ಮ್ಯಾನ್ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿದೆ, ಇಂದು ಅದರ ಮೊದಲ ಹಂತವಾಗಿ, ಸಾಂಕೇತಿಕವಾಗಿ 21 ಜನರಿಗೆ ನೇಮಕಾತಿ ಆದೇಶ ಪತ್ರವನ್ನು ವಿತರಿಸಲಾಗುತ್ತಿದೆ" ಎಂದು ಹೇಳಿದ್ದಾರೆ.
ಬೆಂಗಳೂರಿನ ಕಾವೇರಿ ಭವನದಲ್ಲಿರುವ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಸಭಾಂಗಣದಲ್ಲಿ ಈ ಹುದ್ದೆಗಳಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಸೋಮವಾರ ನೇಮಕಾತಿ ಆದೇಶ ಪತ್ರವನ್ನು ಕೊಟ್ಟು ಮಾತನಾಡಿದ್ದಾರೆ. ಜೊತೆಗೆ ದೇಶದಲ್ಲಿನ ಕಲ್ಲಿದ್ದಲು ಕೊರತೆ ಬಗ್ಗೆಯೂ ಸಚಿವ ಸುನಿಲ್ ಕುಮಾರ್ ಇದೇ ವೇಳೆ ಮತ್ತೊಂದು ಮಹತ್ವದ ವಿಚಾರವನ್ನು ಹಂಚಿಕೊಂಡಿದ್ದಾರೆ.

ಶೀಘ್ರದಲ್ಲೇ 1878 ಜನರಿಗೆ ನೇಮಕಾತಿ ಆದೇಶ
ಕೆಪಿಟಿಸಿಎಲ್‌ನ 1899 ಹುದ್ದೆಗಳಿಗೆ ಕಳೆದ 2019ರ ಫೆಬ್ರವರಿಯಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು. ಅಂದಿನಿಂದ ಇಂದಿನವರೆಗೂ ಈ ನೇಮಕಾತಿ ಪ್ರಕ್ರಿಯೆ ನಾನಾ ಕಾರಣಗಳಿಗಾಗಿ ನೆನೆಗುದಿಗೆ ಬಿದ್ದಿತ್ತು. ಈ ಬಗ್ಗೆ ಅನೇಕರು ನನ್ನ ಗಮನ ಸೆಳೆದಾಗ ನಾನು ಕೂಡಲೇ ಅಗತ್ಯವಾದ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿ, ಆದೇಶ ಪತ್ರ ನೀಡುವಂತೆ ಸೂಚನೆ ನೀಡಿದ್ದೆ. ಅದರಂತೆ ಇಂದು 21 ಜನ ಕಿರಿಯ ಪವರ್ ಮ್ಯಾನ್‌ಗಳಿಗೆ ನೇಮಕಾತಿ ಆದೇಶ ನೀಡಲಾಗಿದೆ. ಅತ್ಯಂತ ಶೀಘ್ರದಲ್ಲೇ ಉಳಿದ 1878 ಜನರಿಗೆ ನೇಮಕಾತಿ ಆದೇಶ ನೀಡಲಾಗುವುದು ಎಂದು ಇಂಧನ ಸಚಿವ ಸುನಿಲ್ ಕುಮಾರ್ ಇದೇ ವೇಳೆ ಹೇಳಿದ್ದಾರೆ.

ಅತಿ ದೊಡ್ಡ ಪ್ರಮಾಣದಲ್ಲಿ ನೇಮಕ ಪ್ರಕ್ರಿಯೆ
ನಮ್ಮ ಸರ್ಕಾರ ಬಂದ ನಂತರ ಅತಿ ದೊಡ್ಡ ಪ್ರಮಾಣದಲ್ಲಿ ಈ ನೇಮಕ ಪ್ರಕ್ರಿಯೆ ನಡೆದಿರುವುದು ವೈಯಕ್ತಿಕವಾಗಿ ನನಗೆ ಸಂತೋಷ ತಂದಿದೆ. ಕೆಪಿಟಿಸಿಎಲ್‌ನಲ್ಲಿ ಖಾಲಿ ಇರುವ ಇತರ ಹುದ್ದೆಗಳ ಭರ್ತಿಗೆ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಕ್ರಮ ವಹಿಸಲಾಗುತ್ತದೆ ಎಂದು ಇಂಧನ ಸಚಿವ ಸುನಿಲ್ ಕುಮಾರ್ ಭರವಸೆ ನೀಡಿದ್ದಾರೆ. ನೇಮಕಾತಿ ಪತ್ರ ವಿತರಣಾ ಸಂದರ್ಭದಲ್ಲಿ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಿ. ಕುಮಾರ ನಾಯಕ್ ಹಾಗೂ ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ. ಎಂ. ಮಂಜುಳಾ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ದೇಶದಲ್ಲಿನ ಕಲ್ಲಿದ್ದಲು ಉತ್ಪಾದನೆ ಕೊರತೆ ಬಗ್ಗೆಯೂ ಸಚಿವ ಸುನಿಲ್ ಕುಮಾರ್ ಸ್ಪಷ್ಟನೆ ಕೊಟ್ಟರು.

ರಾಜ್ಯದಲ್ಲಿ ಕಲ್ಲಿದ್ದಲು ಕೊರತೆ?
ಇಡೀ ದೇಶದಲ್ಲಿ ಕಲ್ಲಿದ್ದಲಿನ ಉತ್ಪಾದನೆ ಯಲ್ಲಿ ಕೊರತೆ ಆಗಿರೋದು ಗಮನಕ್ಕೆ ಬಂದಿದೆ. ರಾಜ್ಯಕ್ಕೆ ಬರಬೇಕಾದ ಕಲ್ಲಿದ್ದಲು ಬರುವುದು ತಡವಾದ ಹಿನ್ನಲೆಯಲ್ಲಿ, ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಷಿ ಅವರನ್ನು ಭೇಟಿ ಮಾಡಿದ್ದೇವೆ. ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ಅವರಿಗೆ ಮನವಿ ಮಾಡಿದ್ದೇವೆ. ಕಲ್ಲಿದ್ದಲು ಕೊರತೆ ವಿಚಾರ ಕೇಳಿ ಆತಂಕದಿಂದ ದೆಹಲಿಗೆ ದೌಡಾಯಿಸಿದ್ದೆವು. ಆದರೆ ಕೇಂದ್ರ ಸಚಿವರ ಸಕಾಲಿಕ ಕ್ರಮಗಳಿಂದ ಕಲ್ಲಿದ್ದಲು ಕೊರತೆ ಆತಂಕ ದೂರವಾಗಿದೆ ಎಂದು ಇಂಧನ ಸಚಿವ ಸುನಿಲ್ ಕುಮಾರ್ ತಿಳಿಸಿದ್ದಾರೆ.
Recommended Video

ಆರ್‌ಟಿಪಿಎಸ್‌ನಲ್ಲಿ ತಾತ್ಕಾಲಿಕ ಸ್ಥಗಿತ!
ಕಲ್ಲಿದ್ದಲು ಕೊರತೆ ಆಗಬಹುದು ಎಂಬ ಆತಂಕ ದಿಂದ ರಾಯಚೂರಿನ ಆರ್‌ಟಿಪಿಎಸ್‌ನಲ್ಲಿ ವಿದ್ಯುತ್ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಿದ್ದೆವು. ಆದರೆ ತಕ್ಷಣಕ್ಕೆ ಎರಡು ರೇಖುಗಳನ್ನು ಕಳಿಸಿಕೊಡಲು ಕೇಂದ್ರಕ್ಕೆ ಮನವಿ ಮಾಡಿದ್ದೇವು. ಅದರಂತೆ ಈಗಾಗಲೇ ಎರಡು ರೇಖು ಕಲ್ಲಿದ್ದಲು ರಾಜ್ಯಕ್ಕೆ ಬರುತ್ತಿದೆ. ಅದು ನಾಳೆ ಸಂಜೆ ಅಥವಾ ನಾಡಿದ್ದು ಬೆಳಗಿನ ವೇಳೆಗೆ ರಾಜ್ಯವನ್ನು ತಲುಪುವ ನಿರೀಕ್ಷೆ ಇದೆ. ಹೀಗಾಗಿ ಈಗ ಮತ್ತೆ ಆರ್‌ಟಿಪಿಎಸ್‌ನಲ್ಲಿ ವಿದ್ಯುತ್ ಉತ್ಪಾದನೆ ಆರಂಭ ಮಾಡಿದ್ದೇವೆ. ಯಾವುದೇ ರೀತಿಯ ವಿದ್ಯುತ್ ಸ್ಥಗಿತ ಆಗುವ ಆತಂಕ ಸದ್ಯಕ್ಕೆ ಇಲ್ಲ. ನವೆಂಬರ್ ಹೊತ್ತಿಗೆ ಇನ್ನೂ ಎರಡು ಕಲ್ಲಿದ್ದಲು ರೇಖುಗಳು ಸಿಗಲಿವೆ ಎಂದು ಇಂಧನ ಸಚಿವ ಸುನಿಲ್ ಕುಮಾರ್ ಭರವಸೆ ಕೊಟ್ಟಿದ್ದಾರೆ.











Click it and Unblock the Notifications