Breaking: KPSC ಆ.27ರ ಪರೀಕ್ಷೆ ಮುಂದೂಡುವಂತೆ ಬೃಹತ್ ಪ್ರತಿಭಟನೆ
ಬೆಂಗಳೂರು, ಆಗಸ್ಟ್ 24: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಆಗಸ್ಟ್ 27ರ ಮಂಗಳವಾರ ಗೆಜೆಟೆಡ್ ಪ್ರೊಬೇಷನರ್ಸ್ 384 ಹುದ್ದೆಗಳ ಪೂರ್ವಭಾವಿ ಪರೀಕ್ಷೆಯನ್ನು ನಡೆಸಲಿದೆ. ಸುಮಾರು 2,10,910 ಅಭ್ಯರ್ಥಿಗಳು ಈ ಪರೀಕ್ಷೆಯನ್ನು ಬರೆಯಬೇಕಿದೆ. ಆದರೆ ಪರೀಕ್ಷೆಯನ್ನು ಮುಂದೂಡಬೇಕು ಎಂದು ಶನಿವಾರ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ. ಪರೀಕ್ಷೆ ಮುಂದೂಡುವ ಕುರಿತು ಇನ್ನೂ ಕೆಪಿಎಸ್‌ಸಿ ಯಾವುದೇ ಆದೇಶವನ್ನು ಹೊರಡಿಸಿಲ್ಲ.
ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘ (ರಿ) ಫ್ರೀಡಂಪಾರ್ಕ್‌ನಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆಸುತ್ತಿದೆ. ಕೆಪಿಎಸ್‌ಸಿಯಿಂದ ನಿಗದಿಯಾಗಿರುವ KAS 2023-24 ಪೂರ್ವಭಾವಿ ಪರೀಕ್ಷೆಯನ್ನು ಮುಂದೂಡುವ ಕುರಿತು ಬೃಹತ್ ಪ್ರತಿಭಟನೆ ನಡೆಸುತ್ತಿದ್ದು, ಎಲ್ಲರೂ ಭಾಗವಹಿಸಿ ಎಂದು ಕರೆ ನೀಡಲಾಗಿದೆ. ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ, ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ. ವೈ. ವಿಜಯೇಂದ್ರ, ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಅನೇಕ ರಾಜಕೀಯ ನಾಯಕರು ಸಹ ಪರೀಕ್ಷೆ ಮುಂದೂಡುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಬಸನಗೌಡ ಪಾಟೀಲ್ ಯತ್ನಾಳ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ, 'ಇಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ಕೆ.ಎ.ಎಸ್ ಪರೀಕ್ಷಾರ್ಥಿಗಳ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಬಡ ಕುಟುಂಬಗಳಿಂದ ಬಂದು ಜೀವನದಲ್ಲಿ ಸಾಧಿಸಬೇಕೆಂಬ ಛಲ, ಹುಮ್ಮಸ್ಸಿನಿಂದ ಅಹರ್ನಿಶಿ ಉದ್ಯೋಗದಲ್ಲಿದ್ದುಕೊಂಡು ಓದಿಕೊಳ್ಳುತ್ತಾ ಇರುವ ಪರೀಕ್ಷಾರ್ಥಿಗಳ ಪರ ಇರಬೇಕಾದ ಸರ್ಕಾರ ತರಾತುರಿಯಲ್ಲಿ ಪರೀಕ್ಷೆ ನಡೆಸುತ್ತಿರುವುದು ಖಂಡನೀಯ'
'ಗಾಯಕ್ಕೆ ಬರೆ ಇಟ್ಟಂತೆ, ಅಭ್ಯರ್ಥಿ ಬರೆಯಬೇಕಾದ ಊರುಗಳಿಂದ ದೂರದೂರುಗಳಿಗೆ ಪರೀಕ್ಷೆಯ ಸೆಂಟರ್ ನಿಗದಿ ಮಾಡಿರುವ ತರ್ಕ ಏನೆಂದು ಸರ್ಕಾರವೇ ಬಿಡಿಸಿ ಹೇಳಬೇಕು. ವಾರಾಂತ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಇರುವ ಒಂದು ಪ್ರತೀತಿಯನ್ನು ಬದಲಿಸಿ ವಾರದ ದಿನ ಪರೀಕ್ಷೆಯನ್ನಿಟ್ಟಿರುವುದು ಖಾಸಗಿ, ಐ.ಟಿ., ವಲಯಗಳಲ್ಲಿ ಕೆಲಸ ಮಾಡುತ್ತಿರುವ ಪರೀಕ್ಷಾರ್ಥಿಗಳಿಗೆ ಸಾಕಷ್ಟು ಸಮಸ್ಯೆಯಾಗಿದೆ'
'ಇನ್ನು, ದೂರದೂರುಗಳಿಗೆ ಹೋಗಬೇಕಾದವರು ಒಂದು ದಿನ ಮುಂಗಡವಾಗಿ ಹೋಗಬೇಕು, ಒಂದು ಪರೀಕ್ಷೆ ಬರೆಯುವುದಕ್ಕೆ ಎರಡು ದಿನ ರಜೆ ಪಡೆಯುವಂತ ಅವೈಜ್ಞಾನಿಕ ವೇಳಾಪಟ್ಟಿಯನ್ನು ಮಾಡಿರುವುದು ಪ್ರಶ್ನಾರ್ಹ ಹಾಗೂ ಅತಾರ್ಕಿಕವಾಗಿದೆ. ಸರ್ಕಾರ ವಿದ್ಯಾರ್ಥಿಗಳ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ, ಭ್ರಷ್ಟಾಚಾರದ ಕೂಪವಾಗಿರುವ ಲೋಕ ಸೇವಾ ಆಯೋಗಕ್ಕೆ ಯೋಗ್ಯ, ಸಮರ್ಥ, ದಕ್ಷ ಅಧಿಕಾರಿ, ಸಿಬ್ಬಂದಿಗಳನ್ನು ನೇಮಿಸಿ ಪರೀಕ್ಷಾರ್ಥಿಗಳ ಹಿತವನ್ನು ಕಾಪಾಡಲಿ' ಎಂದು ಒತ್ತಾಯಿಸಿದ್ದಾರೆ.
ಪ್ರತಿಭಟನೆ ಏಕೆ?; ಖಾಸಗಿ ಮತ್ತು ಕೇಂದ್ರ ಸರ್ಕಾರದ ನೌಕರರಿಗೆ ರಜೆಯನ್ನು ನಿರಾಕರಿಸಿ ಅವಕಾಶ ವಂಚಿತರನ್ನಾಗಿ ಹಾಗೂ 2017-18ನೇ ಸಾಲಿನ ಅಭ್ಯರ್ಥಿಗಳಿಗೆ ಅಭ್ಯಾಸ ನಡೆಸಲು ಕನಿಷ್ಠ ಸಮಯವನ್ನು ನೀಡದೆ ಪ್ರಶ್ನೆ ಪತ್ರಿಕೆಯನ್ನು ಒಂದು ತಿಂಗಳ ಮುಂಚೆ ಮುದ್ರಣ ಮಾಡಿ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆಯುವ ಸಂಭವವಿದ್ದು ಪರೀಕ್ಷೆಯನ್ನು ಮುಂದೂಡಲು ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುತ್ತಿದೆ.
ಕೆಪಿಎಸ್‌ಸಿ ಪೂರ್ವಭಾವಿ ಪರೀಕ್ಷೆಯ ವೇಳಾಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಆನ್‌ಲೈನ್‌ನಲ್ಲಿ ಹಾಲ್ ಟಿಕೆಟ್ ಡೌನ್‌ಲೋಡ್ ಮಾಡಿಕೊಳ್ಳಲು ಅಭ್ಯರ್ಥಿಗಳಿಗೆ ಸೂಚನೆ ನೀಡಲಾಗಿದೆ. ಸದ್ಯದ ವೇಳಾಪಟ್ಟಿಯಂತೆ ಪೂರ್ವಭಾವಿ ಪರೀಕ್ಷೆಯು ಆಗಸ್ಟ್ 27ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 12ರವರೆಗೆ ಪತ್ರಿಕೆ-1 ಹಾಗೂ ಮಧ್ಯಾಹ್ನ 2 ರಿಂದ ಸಂಜೆ 4 ರವರೆಗೆ ಪತ್ರಿಕೆ-2ರ ಪರೀಕ್ಷೆ ನಡೆಯಲಿದೆ.












Click it and Unblock the Notifications