ಕೆಎಟಿ ಮೆಟ್ಟಿಲೇರಿದ ಕೆಪಿಎಸ್‌ಸಿ ನೇಮಕಾತಿ ವಿವಾದ
ಬೆಂಗಳೂರು, ಆ.22 : 2011ರ ಕೆಪಿಎಸ್‌ಸಿ ನೇಮಕಾತಿ ರದ್ದುಗೊಳಿಸಿರುವ ಸರ್ಕಾರದ ತೀರ್ಮಾನದ ವಿರುದ್ಧ ನೊಂದ ಅಭ್ಯರ್ಥಿಗಳು ಕಾನೂನು ಹೋರಾಟ ಆರಂಭಿಸಿದ್ದಾರೆ. ಗುರುವಾರ ಅಭ್ಯರ್ಥಿಗಳು ಈ ಕುರಿತು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಯ ಮೆಟ್ಟಿಲೇರಿದ್ದಾರೆ.
ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ 2011ನೇ ಸಾಲಿನ ಗೆಜೆಟೆಡ್ ಪ್ರೊಬೆಷನರ್ಸ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ 362 ಸರ್ಕಾರಿ ಹುದ್ದೆಗಳಿಗೆ ನೇಮಕಗೊಂಡಿದ್ದ ಆಯ್ಕೆ ಪಟ್ಟಿ ರದ್ದುಗೊಳಿಸಿದ ಕ್ರಮ ಪ್ರಶ್ನಿಸಿ, ಬಿ.ಎಲ್.ಆಚಾರ್ಯ ಸೇರಿದಂತೆ 120ಕ್ಕೂ ಹೆಚ್ಚು ಅಭ್ಯರ್ಥಿಗಳು ಕೆಎಟಿಯ ರಿಜಿಸ್ಟ್ರಿಯಲ್ಲಿ ಅರ್ಜಿ ಸಲ್ಲಿಸಿದ್ದು, ಮುಂದಿನ ವಾರ ವಿಚಾರಣೆಗೆ ಬರುವ ಸಾಧ್ಯತೆ ಇದೆ. [ನೇಮಕಾತಿ ರದ್ದು, ಸಿಡಿದೆದ್ದ ಅಭ್ಯರ್ಥಿಗಳು]

2011ನೇ ಸಾಲಿನ ಎ ಹಾಗೂ ಬಿ ದರ್ಜೆ ಪತ್ರಾಂಕಿತ ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದ ಆಯ್ಕೆ ಪಟ್ಟಿ ರದ್ದುಗೊಳಿಸಿ ಆ.14ರಂದು ಕೈಗೊಂಡಿರುವ ಸರ್ಕಾರದ ನಿರ್ಧಾರವನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ. 362 ಹುದ್ದೆಗಳ ನೇಮಕಕ್ಕೆ ಕೆಪಿಎಸ್‌ಸಿ 2014 ಮಾ.21ರಂದು ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿತ್ತು.[ಕೆಪಿಎಸ್ಸಿ ಹಗರಣ ಪ್ರತಿಭಟನೆ ವಾಪಸ್]
ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಯ ಮುಂದೆ ಆಯ್ಕೆಯಾಗದೆ ಇದ್ದ ಅಭ್ಯರ್ಥಿ ಡಾ.ಎಚ್.ಪಿ.ಎಸ್.ಮೈತ್ರಿ ಅಂತಿಮ ಆಯ್ಕೆ ಪಟ್ಟಿ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಇನ್ನೂ ವಿಚಾರಣೆಗೆ ಬಾಕಿ ಇದೆ. ಡಾ.ಮೈತ್ರಿ ನೀಡಿದ್ದ ದೂರಿನ ಮೇರೆಗೆ ಸಿಐಡಿ ತನಿಖೆ ನಡೆಸಿದ ನಂತರ, ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎನ್ನುವ ಕಾರಣಕ್ಕೆ ಸರ್ಕರ ನೇಮಕ ಅಧಿಸೂಚನೆಯನ್ನು ರದ್ದುಗೊಳಿಸಿತ್ತು. [ಹಗರಣದಲ್ಲಿ ಮಂಗಳಾ ಶ್ರೀಧರ್ ಪಾತ್ರವೇನು?]
ಸರ್ಕಾರದ ನಿರ್ಧಾರ ವಿರೋಧಿಸಿ ಒಂದು ತಿಂಗಳಿನಿಂದ ಫ್ರೀಡಂಪಾರ್ಕ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಅಭ್ಯರ್ಥಿಗಳು ಬುಧವಾರ ತಮ್ಮ ಪ್ರತಿಭಟನೆ ಕೈಬಿಟ್ಟಿದ್ದರು ಮತ್ತು ಕಾನೂನು ಹೋರಾಟ ಆರಂಭಿಸುವುದಾಗಿ ಹೇಳಿದ್ದರು.












Click it and Unblock the Notifications