ಇನ್ನು ಎರಡು ದಿನದಲ್ಲಿ ಸಾರಥಿ ಆಯ್ಕೆ?: ದೆಹಲಿಗೆ ಸಿದ್ದರಾಮಯ್ಯ
Recommended Video
ಬೆಂಗಳೂರು, ಜನವರಿ 13: ಕೆಪಿಸಿಸಿ ಅಧ್ಯಕ್ಷ ಸ್ಥಾನ ಮತ್ತು ವಿಪಕ್ಷ ನಾಯಕನ ಸ್ಥಾನ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಸ್ಥಾನಗಳಿಗೆ ಇನ್ನು ಎರಡು ದಿನಗಳಲ್ಲಿ ಆಯ್ಕೆ ನಡೆಯುವ ಸಾಧ್ಯತೆ ಇದೆ.
ರಾಜ್ಯ ಕಾಂಗ್ರೆಸ್‌ನಲ್ಲಿನ ಪ್ರಮುಖ ಸ್ಥಾನಗಳಿಗೆ ಪ್ರಭಾವಿಗಳನ್ನು ನೇಮಿಸುವ ಪ್ರಯತ್ನಕ್ಕೆ ಹೈಕಮಾಂಡ್ ಮುಂದಾಗಿದೆ. ಅದಕ್ಕಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಗೆ ಬರುವಂತೆ ಕರೆ ನೀಡಿದೆ. ಸಿದ್ದರಾಮಯ್ಯ ಸೋಮವಾರ ದೆಹಲಿಗೆ ತೆರಳುತ್ತಿದ್ದಾರೆ.
ಸಿದ್ದರಾಮಯ್ಯ ಅವರ ಪರ ಲಾಬಿ ನಡೆಸಲು ಅವರ ಬೆಂಬಲಿಗರ ತಂಡ ಈಗಾಗಲೇ ದೆಹಲಿಗೆ ತೆರಳಿದ್ದು, ಪ್ರಮುಖ ನಾಯಕರ ಜತೆ ಮಾತುಕತೆ ನಡೆಸುತ್ತಿದೆ ಎಂದು ಹೇಳಲಾಗಿದೆ.

ಉಪ ಚುನಾವಣೆ ಸೋಲಿನ ಬಳಿಕ ವಿಧಾನಸಭೆ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದರು. ಅದನ್ನು ಹೈಕಮಾಂಡ್ ಅಂಗೀಕರಿಸಿಲ್ಲ. ಹೀಗಾಗಿ ಈ ಸ್ಥಾನದಲ್ಲಿ ಅವರನ್ನೇ ಮುಂದುವರಿಸುವ ಸಾಧ್ಯತೆ ಹೆಚ್ಚಿದೆ. ಈ ನಡುವೆ ಸಿದ್ದರಾಮಯ್ಯ ಅವರಿಗೇ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಬೇಕು ಎಂಬ ಒತ್ತಾಯವೂ ಕೇಳಿಬಂದಿದೆ. ಹೀಗಾಗಿ ಅದರ ಕುರಿತೂ ಚರ್ಚೆ ನಡೆಯಲಿದೆ ಎನ್ನಲಾಗಿದೆ.
ಸಿದ್ದರಾಮಯ್ಯ, ಕೆಪಿಸಿಸಿ ಉಸ್ತುವಾರಿ ಕೆ.ಸಿ, ವೇಣುಗೋಪಾಲ್ ಮತ್ತು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಕೆಪಿಸಿಸಿ ಅಧ್ಯಕ್ಷರನ್ನು ಬದಲಿಸುವ ಕುರಿತು ಹೈಕಮಾಂಡ್ ಸಿದ್ದರಾಮಯ್ಯ ಅವರ ಅಭಿಪ್ರಾಯ ಪಡೆದುಕೊಳ್ಳಲಿದೆ. ಸಿದ್ದರಾಮಯ್ಯ ಸೂಚಿಸುವ ವ್ಯಕ್ತಿಯೇ ಕೆಪಿಸಿಸಿ ಗಾದಿಗೆ ಏರುವ ಸಂಭವವೂ ಇದೆ. ಅದಕ್ಕೆ ಒಪ್ಪಿಗೆಯಾದರೆ ಮಂಗಳವಾರವೇ ಕೆಪಿಸಿಸಿಗೆ ಹೊಸ ಅಧ್ಯಕ್ಷರ ನೇಮಕವಾಗಬಹುದು.
ಕೆಪಿಸಿಸಿ ಅಧ್ಯಕ್ಷ ಗಾದಿಗೆ ಡಿಕೆ ಶಿವಕುಮಾರ್ ಹೆಸರು ಮುಂಚೂಣಿಯಲ್ಲಿದ್ದು, ಕೆಎಚ್ ಮುನಿಯಪ್ಪ, ಎಂಬಿ ಪಾಟೀಲ್, ಬಿಕೆ ಹರಿಪ್ರಸಾದ್, ಈಶ್ವರ ಖಂಡ್ರೆ, ಕೃಷ್ಣ ಬೈರೇಗೌಡ ಅವರ ಹೆಸರು ಕೂಡ ಚಾಲ್ತಿಯಲ್ಲಿದೆ.












Click it and Unblock the Notifications