ಸಂತೋಷ್ ಆತ್ಮಹತ್ಯೆ: ಈಶ್ವರಪ್ಪ ವಿರುದ್ದ ಡಿಕೆಶಿ ಹೊಸ ಬಾಂಬ್
ಬೆಂಗಳೂರು, ಏಪ್ರಿಲ್ 15: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಆತ್ಮಹತ್ಯೆಯ ಹಿಂದೆ ಹಲವು ಅನುಮಾನಗಳು ಇವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಂಶಯ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯಲ್ಲಿ ಸಂತೋಷ್ ಮನೆಗೆ ಭೇಟಿ ನೀಡಿದ ಕೆಪಿಸಿಸಿ ಮುಖಂಡರು ಈಶ್ವರಪ್ಪನವರ ಬಂಧನಕ್ಕೆ ಒತ್ತಾಯಿಸಿದ್ದಾರೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ದ ತಿರುಗಿಬಿದ್ದಿದ್ದರೆ, ಕೆಪಿಸಿಸಿ ಅಧ್ಯಕ್ಷರು ವಿಧಾನಸೌಧದ ಮುಂದೆ ಧರಣಿ ಕೂತಿದ್ದರು.
ಸಂತೋಷ್ ಪಾಟೀಲ್ ಆತ್ಮಹತ್ಯೆಯ ಹಿಂದೆ, "ನನ್ನನ್ನು ಸಿಡಿ ಪ್ರಕರಣದಲ್ಲಿ ಸಿಲುಕಿ ಹಾಕಿಸಿದ ಮಹಾನ್ ನಾಯಕನ ತಂಡದ ಕೈವಾಡವಿದೆ" ಎಂದು ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ವಿರುದ್ದ ಬಿಜೆಪಿ ಮುಖಂಡ ರಮೇಶ್ ಜಾರಕಿಹೊಳಿ ಆರೋಪಿಸಿದ್ದಾರೆ.
ಇದರ ಬೆನ್ನಲ್ಲೇ ಪತ್ರಿಕಾಗೋಷ್ಠಿ ನಡೆಸಿರುವ ಡಿಕೆಶಿ, "ಈಶ್ವರಪ್ಪನವರು ಸುಳ್ಳು ಕಂಪೆನಿಯ ಚೇರ್ಮನ್, ಅವರ ರಾಜೀನಾಮೆ ಯಾರಿಗೆ ಬೇಕು"ಎಂದು ಗುಡುಗಿದ್ದಾರೆ. ಇದರ ಜೊತೆಗೆ, ಹಲವು ವಿಚಾರಗಳನ್ನು ಡಿಕೆಶಿ ಹೊರಗೆಡವಿದ್ದಾರೆ.

ತಮ್ಮ ಜೀವನದುದ್ದಕ್ಕೂ ಈಶ್ವರಪ್ಪ ಸುಳ್ಳು ಹೇಳಿಕೊಂಡು ಬಂದಿದ್ದಾರೆ
"ತಮ್ಮ ಜೀವನದುದ್ದಕ್ಕೂ ಈಶ್ವರಪ್ಪ ಸುಳ್ಳು ಹೇಳಿಕೊಂಡು ಬಂದಿದ್ದಾರೆ, ಈಗಲೂ ಅವರು ರಾಜೀನಾಮೆ ನೀಡುತ್ತಾರೆ ಎನ್ನುವ ನಂಬಿಕೆ ನನಗಿಲ್ಲ. ಅವರ ರಾಜೀನಾಮೆಯಿಂದ ನಮಗೇನೂ ಆಗಬೇಕಾಗಿಲ್ಲ. ರಾಜ್ಯದಲ್ಲಿ ಸರಕಾರ ಅನ್ನುವುದು ಇದ್ದರೆ, ಪೊಲೀಸರು ಸಕ್ರಿಯರಾಗಿದ್ದರೆ ಅವರ ಬಂಧನವಾಗಬೇಕು"ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ. ಮಾಧ್ಯಮಗೋಷ್ಠಿಯ ವೇಳೆ ಡಿಕೆಶಿ ಜೊತೆ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗ ರೆಡ್ಡಿ ಕೂಡಾ ಹಾಜರಿದ್ದರು.

ಎಫ್ ಐಆರ್ ದಾಖಲಾಗಿರುವ ಒಬ್ಬ ಆರೋಪಿಯಲ್ಲಿ ಸಿಎಂ ರಕ್ಷಿಸುತ್ತಿದ್ದಾರೆ
"ಈಶ್ವರಪ್ಪನವರು ಸುಳ್ಳು ಕಂಪೆನಿಯ ಚೇರ್ಮನ್, ಅದನ್ನು ಅವರೇ ಹೇಳಿಕೊಂಡು ಬಂದಿದ್ದಾರೆ. ಅವರ ಹಿಂದೆ ಮಾಡಿದ ಭಾಷಣದ ತುಣಕನ್ನು ಹೊರತೆಗೆಯಿರಿ, ಸತ್ಯ ಎಲ್ಲಾ ಹೊರಗೆ ಬರುತ್ತದೆ. ಮೊದಲು, ಭ್ರಷ್ಟಾಚಾರ ನಿಗ್ರಹ ಕಾಯಿದೆಯ ಅಡಿಯಲ್ಲಿ ಅವರ ವಿರುದ್ದ ಕೇಸ್ ದಾಖಲಾಗಬೇಕು. ಇದಕ್ಕೆಲ್ಲಕಿಂತ ಅವಮಾನವಾಗುವುದು ಗೌರವಾನ್ವಿತ ಮುಖ್ಯಮಂತ್ರಿಗಳ ನಡೆಯಿಂದ. ಎಫ್ ಐಆರ್ ದಾಖಲಾಗಿರುವ ಒಬ್ಬ ಆರೋಪಿಯನ್ನು ಸಿಎಂ ರಕ್ಷಿಸುತ್ತಿದ್ದಾರೆ"ಎಂದು ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.

"ಸಂತೋಷ್ ಪೋಸ್ಟ್ ಮಾರ್ಟಂ ಮಾಡಿ 36 ಗಂಟೆಯಾಗಿದೆ
"ಸಂತೋಷ್ ಪೋಸ್ಟ್ ಮಾರ್ಟಂ ಮಾಡಿ 36 ಗಂಟೆಯಾಗಿದೆ, ಅವರ ಮೃತ ದೇಹವನ್ನು ರಾತ್ರೋರಾತ್ರಿ ಉಡುಪಿಯಿಂದ ಬೆಳಗಾವಿಗೆ ಸಾಗಿಸಲು ಪ್ರಯತ್ನ ಪಡಲಾಯಿತು. ಖುದ್ದು ಮುಖ್ಯಮಂತ್ರಿಗಳೇ ಆರೋಪಿ ಈಶ್ವರಪ್ಪನವರು ತಪ್ಪು ಮಾಡಿಲ್ಲ ಅಂದರೆ, ಯಾವ ಪೊಲೀಸ್ ಆಫೀಸರ್ ತನಿಖೆ ನಡೆಸಲು ಮುಂದಾಗುತ್ತಾರೆ? ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳು ನಡೆದುಕೊಳ್ಳುವ ರೀತಿಯಾ ಇದು" ಎಂದು ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.

ಸಂತೋಷ್ ಸಾವಿನ ಹಿಂದೆ ಹಲವಾರು ಸಂಶಯಗಳಿವೆ, ಎಚ್.ಡಿ.ಕುಮಾರಸ್ವಾಮಿ
"ಸಂತೋಷ್ ಸಾವಿನ ಹಿಂದೆ ಹಲವಾರು ಸಂಶಯಗಳಿವೆ. ಜನರಲ್ಲಿ ಅನೇಕ ಪ್ರಶ್ನೆಗಳೂ ಇವೆ. ಸತ್ಯಾಂಶವನ್ನು ಹೊರ ತರಲು ತನಿಖೆಯಾಗಬೇಕು. ಇದು ಸರಕಾರದ ಜವಾಬ್ದಾರಿ . ಮೃತ ವ್ಯಕ್ತಿ ನಾಲ್ಕು ಕೋಟಿ ರೂಪಾಯಿ ಕಾಮಗಾರಿ ಸರಕಾರದ ಕಾರ್ಯಾದೇಶ ಇಲ್ಲದೆ, ವರ್ಕ್ ಎಸ್ಟಿಮೇಟ್ ಇಲ್ಲದೇ ಕೆಲಸ ಮಾಡಿದ್ದು ಹೇಗೆ. ಅವರಿಗೆ ಕಾಮಗಾರಿ ಮಾಡಲು ಅನುಮತಿ ಕೊಟ್ಟವರು ಯಾರು"ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದರು.












Click it and Unblock the Notifications