ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕೈ' ಕೊಟ್ಟ ಗುಲಾಂ ನಬಿ ಆಜಾದ್ ಬಗ್ಗೆ ಡಿಕೆ ಶಿವಕುಮಾರ್ ಸಿಡಿನುಡಿ

|
Google Oneindia Kannada News

ಬೆಂಗಳೂರು, ಆಗಸ್ಟ್ 26: ದೇಶದಲ್ಲಿ 50 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ಹಾಗೂ ಕಾಂಗ್ರೆಸ್ ಸರ್ಕಾರದ ಎಲ್ಲ ಅಧಿಕಾರ ಅನುಭವಿಸಿದ ಗುಲಾಂ ನಬಿ ಅಜಾದ್ ಪಕ್ಷಕ್ಕೆ ಶಕ್ತಿ ತುಂಬುವ ಕಾಲದಲ್ಲಿ ಉಪಕಾರ ಸ್ಮರಣೆ ಮರೆತಿರುವುದು ಖಂಡನೀಯ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಲವು ವಿಷಯಗಳನ್ನು ತಮ್ಮ ಮಾತಿನಲ್ಲಿ ಪ್ರಸ್ತಾಪಿಸಿದರು. ದೇಶ ಕಷ್ಟ ಕಾಲದಲ್ಲಿ ಇರುವಾಗ ದೇಶವನ್ನು ಒಂದುಗೂಡಿಸಿ ಐಕ್ಯತೆ, ಸಮಗ್ರತೆ, ಶಾಂತಿ ತರಲು ನಾವೆಲ್ಲ ಹೋರಾಟ ಮಾಡುವಾಗ ಗುಲಾಂ ನಬೀ ಆಜಾದ್ ತಮ್ಮ ಜವಾಬ್ದಾರಿಯಿಂದ ಹಿಂದೆ ಸರಿದಿದ್ದಾರೆ. ಆ ಮೂಲಕ ಎತ್ತ ತಾಯಿಗೆ ದ್ರೋಹ ಬಗೆದಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ಕಾಂಗ್ರೆಸ್ ತೊರೆದ ನಂತರ ಗುಲಾಂ ನಬಿ ಆಜಾದ್ ನಡೆ ಏನು?ಕಾಂಗ್ರೆಸ್ ತೊರೆದ ನಂತರ ಗುಲಾಂ ನಬಿ ಆಜಾದ್ ನಡೆ ಏನು?

ರಾಜಸ್ಥಾನದ ಉದಯಪುರದಲ್ಲಿ ನಡೆದ ಚಿಂತನಾ ಶಿಬಿರದಲ್ಲಿ 600 ಜನ ನಾಯಕರು ಚರ್ಚೆ ಮಾಡಿ ಭಾರತವನ್ನು ಯಾವ ರೀತಿ ಉಳಿಸಬೇಕು, ಮುಂದೆ ತೆಗೆದುಕೊಂಡು ಹೋಗಬೇಕು ಎಂದು ತೀರ್ಮಾನಿಸಲಾಗಿತ್ತು. ಆ ಸಭೆಯಲ್ಲಿ ಗುಲಾಂ ನಬಿ ಅಜಾದ್ ಪಾತ್ರವೂ ಪ್ರಮುಖವಾಗಿತ್ತು. ಆದರೆ ಈಗ ರಾಜೀನಾಮೆ ನೀಡಿರುವ ಅಜಾದ್ ಐದು ಪುಟಗಳ ಪತ್ರ ಬರೆದಿದ್ದು, ಅದರಲ್ಲಿ ಅನೇಕ ವಿಚಾರ ಪ್ರಸ್ತಾಪಿಸಿದ್ದಾರೆ ಎಂದು ಡಿಕೆ ಶಿವಕುಮಾರ್ ಉಲ್ಲೇಖಿಸಿದರು. ಬೆಂಗಳೂರಿನಲ್ಲಿ ಡಿಕೆ ಶಿವಕುಮಾರ್ ನಡೆಸಿದ ಸುದ್ದಿಗೋಷ್ಠಿಯ ಪ್ರಮುಖ ಅಂಶಗಳನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

KPCC President DK Shivakumar Press meet on Gulam Nabi Exit; read highlights here

50 ವರ್ಷ ಅಧಿಕಾರ ಅನುಭವಿಸಿದ ಆಜಾದ್:

ಕಾಂಗ್ರೆಸ್ ಪಕ್ಷವನ್ನು ತೊರೆದು ಹೋಗಿರುವ ಗುಲಾಂ ನಬಿ ಆಜಾದ್, ಈ ಹಿಂದೆ 1977ರಲ್ಲಿ ಕಾಂಗ್ರೆಸ್ ಸೇರಿದ್ದರು. 50 ವರ್ಷಗಳಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ರಾಜಕಾರಣ ಆರಂಭಿಸಿದ್ದು, ಎಲ್ಲ ಪ್ರಮುಖ ವಿಭಾಗದಲ್ಲಿ ಕೆಲಸ ಮಾಡಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಗಿದ್ದರು. 20 ವರ್ಷಗಳ ಕಾಲ ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ, ರಾಜ್ಯಸಭೆ ಹಾಗೂ ಲೋಕಸಭೆ ಸದಸ್ಯರಾಗಿ ಅಧಿಕಾರ ಅನುಭವಿಸಿದ್ದಾರೆ. ಇಷ್ಟಾದರೂ ಇಂದು ರಾಜೀನಾಮೆ ತೀರ್ಮಾನ ಮಾಡಿದ್ದಾರೆ. ಅವರ ಪತ್ರದಲ್ಲಿ ಹೇಳಿರುವ ಹಲವು ವಿಚಾರಗಳನ್ನು ಬೂತ್ ಮಟ್ಟದಿಂದ ರಾಷ್ಟ್ರಮಟ್ಟದವರೆಗೆ ಜಾರಿಗೊಳಿಸಲು ಪಕ್ಷದಲ್ಲಿ ಅವಕಾಶವಿತ್ತು. ಕಾಂಗ್ರೆಸ್ ಪಕ್ಷ ಅವರ 50 ವರ್ಷಗಳ ರಾಜಕೀಯ ಜೀವನದಲ್ಲಿ 40ಕ್ಕೂ ಹೆಚ್ಚು ವರ್ಷಗಳ ಕಾಲ ಅಧಿಕಾರ ನೀಡಿದೆ. ಅವರಿಗೆ ಇಷ್ಟು ಅಧಿಕಾರ ಕೊಟ್ಟಿದ್ದು ಕಾಂಗ್ರೆಸ್ ಪಕ್ಷವೋ, ಬೇರೆ ಪಕ್ಷವೋ? ಎಂದು ಡಿಕೆಶಿ ಪ್ರಶ್ನೆ ಮಾಡಿದರು.

ಇಂದಿರಾ, ರಾಜೀವ್ ಗಾಂಧಿ ಕಾಲದಲ್ಲಿ ಅಧಿಕಾರ:

ಗುಲಾಂ ನಬೀ ಆಜಾದ್ ರಾಜಕೀಯದಲ್ಲಿ ಇಷ್ಟು ದೊಡ್ಡ ಹೆಸರು ಬರಬೇಕಾದರೆ ಅದು ಕಾಂಗ್ರೆಸ್ ಪಕ್ಷ, ನೆಹರೂ, ಗಾಂಧಿ ಕುಟುಂಬವೇ ಕಾರಣವಾಗಿದೆ ಎಂದು ಡಿಕೆಶಿ ಹೇಳಿದರು. ಇಂದಿರಾ ಗಾಂಧಿ, ರಾಜೀವ್ ಗಾಂಧಿ ಕಾಲದಲ್ಲಿ ಆಜಾದ್ ಅಧಿಕಾರ ಅನುಭವಿಸಿದ್ದರು. ನಂತರ ನರಸಿಂಹ ರಾವ್ ಸರ್ಕಾರ ಹಾಗೂ ಮನಮೋಹನ್ ಸಿಂಗ್ ಕಾಲದಲ್ಲಿ ಅವರಿಗೆ ಅಧಿಕಾರ ನೀಡಿತ್ತು. ಕಾಂಗ್ರೆಸ್ ಪಕ್ಷ ವಿರೋಧ ಪಕ್ಷದಲ್ಲಿದ್ದಾಗಲೂ ಅವರಿಗೆ 7 ವರ್ಷಗಳ ಕಾಲ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಸ್ಥಾನದ ಅಧಿಕಾರ ನೀಡಿತ್ತು. ಪಕ್ಷದಲ್ಲಿ ಯಾರಿಗೂ ಅಧಿಕಾರ ಇಲ್ಲದಿದ್ದಾಗಲೂ ಅವರು ಸಾಂವಿಧಾನಿಕ ಹುದ್ದೆ ಅಲಂಕರಿಸಿದ್ದರು. ಇಷ್ಟೆಲ್ಲಾ ಅಧಿಕಾರ ಅನುಭವಿಸಿ ಈಗ ಕಾಂಗ್ರೆಸ್ ಪಕ್ಷ ಸರಿ ಇಲ್ಲ, ರಾಹುಲ್ ಗಾಂಧಿ ತೀರ್ಮಾನ ಸರಿ ಇಲ್ಲ ಎಂದು ಹೇಳಿದ್ದಾರೆ ಎಂದು ಉಲ್ಲೇಖಿಸಿದರು.

ಗುಲಾಂ ನಬೀ ಆಜಾದ್ ಪಕ್ಷ ತೊರೆಯಲು ಕಾರಣವೇನು?:

ಈ ಹಿಂದೆ ರಾಹುಲ್ ಗಾಂಧಿ ರಾಜೀನಾಮೆ ಕೊಟ್ಟಾಗಲೇ ಅಜಾದ್ ಯಾಕೆ ಪ್ರಶ್ನಿಸಲಿಲ್ಲ? ಅದನ್ನು ತಡೆಯಲಿಲ್ಲ? ಇವಾಗ ಏಕೆ ಮಾತನಾಡುತ್ತಿದ್ದಾರೆ? ನಿಮಗೆ ಹಿಂದೆ ಅಸಮಾಧಾನ ಇದ್ದಿದ್ದರೆ ಆಗಲೇ ಪಕ್ಷ ಬಿಟ್ಟು ಹೋಗಬೇಕಿತ್ತಲ್ಲವೇ? ಇಲ್ಲಿಯವರೆಗೂ ಯಾಕೆ ಸುಮ್ಮನಿದ್ದಿರಿ? ಎಂದು ಡಿಕೆಶಿ ಪ್ರಶ್ನೆ ಮಾಡಿದರು.

KPCC President DK Shivakumar Press meet on Gulam Nabi Exit; read highlights here

2013 ರಿಂದ ಪಕ್ಷದ ಪ್ರತಿ ನಿರ್ಧಾರದಲ್ಲೂ ನಿಮ್ಮ ಅಭಿಪ್ರಾಯ ಇತ್ತು. ನಿಮಗೆ ಸಿಗಬೇಕಾದ ಎಲ್ಲ ಅಧಿಕಾರವನ್ನು ಕಾಂಗ್ರೆಸ್ ಪಕ್ಷ ನೀಡಿತ್ತು. ಇದರ ಹೊರತಾಗಿ ನಿಮಗೆ ಯಾವ ಹುದ್ದೆ ಬಾಕಿ ಇತ್ತು. ದಯವಿಟ್ಟು ಹೇಳಿ. ನೀವು ಯುವಕರ ಬಗ್ಗೆ ಮಾತನಾಡುತ್ತೀರಿ. 50 ವರ್ಷಗಳ ಹಿಂದೆ ಯುವ ಕಾಂಗ್ರೆಸ್ ಸಂಘಟಿಸಿದ್ದಿರಿ. ಬಹಳ ಸಂತೋಷ. ಈಗಿನ ಯುವಕರ ಆಲೋಚನೆ ಬದಲಾಗುತ್ತಿದೆ. ಕಾಲ ಬದಲಾಗಿದೆ. ಜಗತ್ತು ಬದಲಾಗಿದೆ. ತಂತ್ರಜ್ಞಾನ ಕಾಲಘಟ್ಟದಲ್ಲಿ ಇಂದಿನ ಯುವ ಪೀಳಿಗೆ ಇದೆ. ಇಂತಹ ಸಮಯದಲ್ಲಿ ತಮ್ಮ ಅನುಭವ ಹಂಚಿಕೊಂಡು ಭಾರತ ಉಳಿಸಬೇಕಾದವರು ಈ ರೀತಿ ಮಾಡುತ್ತಿರುವುದು ನಿಮ್ಮ ಹಿರಿತನಕ್ಕೆ ಗೌರವ ತರುವುದಿಲ್ಲ ಎಂದು ಹೇಳಿದರು.

ಭಾರತ್ ಜೋಡೋ ಕಾರ್ಯಕ್ರಮದ ಬಗ್ಗೆ ಉಲ್ಲೇಖ:

ಭಾರತ್ ಜೋಡೋ ಕಾರ್ಯಕ್ರಮ ಮಾಡಬೇಕು ಎಂದು ಹೇಳಿದವರು ನಮ್ಮಂತಹ ನಾಯಕರಿಗೆ ಮಾದರಿ ಆಗಿರಬೇಕಾಗಿತ್ತು. ನಿಮಗೆ ಅಸಮಾಧಾನ ಇದ್ದರೆ ಅದನ್ನು ಚರ್ಚೆ ಮಾಡಬಹುದಿತ್ತು. ಆದರೆ ಸೋನಿಯಾ ಗಾಂಧಿ ಅನಾರೋಗ್ಯದಿಂದಾಗಿ ವಿದೇಶಕ್ಕೆ ಹೋಗಿರುವಾಗ ಈ ನಿರ್ಧಾರಕ್ಕೆ ಬಂದಿರುವುದು ಖಂಡನೀಯ.

ಅಜಾದ್ ಅವರೇ ನಿಮ್ಮಂತಹವರು, ನಮ್ಮಂತಹವರು ಕಾಂಗ್ರೆಸ್ ಪಕ್ಷ ಮುಳುಗಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ನಿಮ್ಮ ಹಾಗೂ ನಮ್ಮಂತಹ ಸಾವಿರಾರು ನಾಯಕರನ್ನು ಹುಟ್ಟು ಹಾಕಿದೆ. ಹಲವರು ಬರುತ್ತಾರೆ, ಹೋಗುತ್ತಾರೆ. ಯಾರೂ ಪಕ್ಷ ಮುಳುಗಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷ ಇರುವವರೆಗೂ ದೇಶ ಒಗ್ಗಟ್ಟಾಗಿರುತ್ತದೆ. ಗಾಂಧಿ ಕುಟುಂಬ ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷ ಒಗ್ಗಟ್ಟಾಗಿರಲು ಸಾಧ್ಯವಿಲ್ಲ. ನಾವೆಲ್ಲರೂ ಪಕ್ಷದ ಸಣ್ಣ ಕೆಲಸಗಾರರು. ನಾವೆಲ್ಲರೂ ನಮ್ಮ ಸ್ಥಾನ ಅರಿತುಕೊಳ್ಳಬೇಕಿದೆ. ನಾವು ನಮ್ಮ ಸ್ವಾರ್ಥ ಬಿಟ್ಟು, ದೇಶ ಕಷ್ಟ ಕಾಲದಲ್ಲಿ ಇರುವಾಗ ಯುವಕರಿಗೆ ಮಾರ್ಗದರ್ಶನ ನೀಡಬೇಕು. ಸಂಕಲ್ಪ ಶಿಬಿರದಲ್ಲಿ ಸೋನಿಯಾ ಗಾಂಧಿ ಪಕ್ಷ ನಿಮಗೆ ಎಲ್ಲ ಅಧಿಕಾರ ನೀಡಿದ್ದು, ಈಗ ನೀವು ಕಾಂಗ್ರೆಸ್ ಪಕ್ಷಕ್ಕೆ ಋಣ ತೀರಿಸಬೇಕು ಎಂದು ಹೇಳಿದ್ದರು. ಇಂತಹ ಸಮಯದಲ್ಲಿ ಈ ರೀತಿ ನಡೆದಿರುವುದು ದುರಾದೃಷ್ಟಕರ ಎಂದು ಡಿಕೆಶಿ ಹೇಳಿದರು.

ಕಾಂಗ್ರೆಸ್ ಪಕ್ಷಕ್ಕೆ ಏಳು ಬೀಳು ಸಹಜ: ಡಿಕೆಶಿ

ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಏಳು ಬೀಳು ಸಹಜ. ಇಂತಹ ಅನೇಕ ಸ್ಥಿತಿಯನ್ನು ಪಕ್ಷ ಕಂಡಿದೆ. ಇಂತಹ ದುರ್ಘಟನೆ ನಡೆದರೂ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿ ಬೆಳೆಯಲಿದೆ. ಯುವಕರು ಮುಂದೆ ಬಂದು ದೇಶದಲ್ಲಿ ಐಕ್ಯತೆ ಪ್ರದರ್ಶಿಸುತ್ತಾರೆ. ಈ ದೇಶಕ್ಕೆ ಕಾಂಗ್ರೆಸ್ ಪಕ್ಷ ಅನಿವಾರ್ಯವಾಗಿದೆ.

ರಾಜ್ಯದ ಯಾವುದೇ ನಾಯಕರು ಈ ರೀತಿ ಮಾಡುವುದಿಲ್ಲ. ಒಂದು ವೇಳೆ ಮಾಡಿದರೆ, ಕಾಂಗ್ರೆಸ್ ಪಕ್ಷದ ಹೊರತಾಗಿ ಅವರು ಶೂನ್ಯವಾಗುತ್ತಾರೆ. ಮುನಿಯಪ್ಪ, ಮೊಯ್ಲಿ ಹಿರಿತನವನ್ನು ಕಾಂಗ್ರೆಸ್ ಪಕ್ಷ ಗೌರವಿಸಲಿದೆ ಎಂಬ ಅರಿವಿದೆ. ಏನೇ ಭಿನ್ನಾಭಿಪ್ರಾಯಗಳಿದ್ದರೂ ಇಂತಹ ತೀರ್ಮಾನ ಕೈಗೊಳ್ಳುವುದಿಲ್ಲ. ಇದು ಕಾಂಗ್ರೆಸ್ ಪಕ್ಷಕ್ಕೆ ದುಷ್ಪರಿಣಾಮ ಬೀರುವುದಿಲ್ಲ. ಬದಲಿಗೆ ಕಾಂಗ್ರೆಸ್ ಬಲಿಷ್ಠವಾಗಿ ಬೆಳೆಯಲಿದೆ' ಎಂದು ಡಿಕೆಶಿ ತಿಳಿಸಿದರು.

ರಾಹುಲ್ ಗಾಂಧಿ ಬಗ್ಗೆ ಡಿಕೆಶಿ ಮಾತು:

ರಾಹುಲ್ ಗಾಂಧಿ ನಾಯಕತ್ವದ ಬಗ್ಗೆ ಕೇಳಿದ ಪ್ರಶ್ನೆಗೆ ಡಿಕೆ ಶಿವಕುಮಾರ್ ಉತ್ತರ ನೀಡಿದರು. ರಾಹುಲ್ ಗಾಂಧಿ ನಾಯಕತ್ವವನ್ನು ಯಾವಾ ತೆಗೆದುಕೊಂಡಿದ್ದಾರೆ. ಪ್ರಧಾನಮಂತ್ರಿ ಆಗುವ ಅವಕಾಶವನ್ನೇ ಅವರು ಕೈಬಿಟ್ಟರು. ನಾವೆಲ್ಲರೂ ಒತ್ತಾಯಿಸಿದರೂ ಉಪ ಪ್ರಧಾನಿ ಹಾಗೂ ಮಂತ್ರಿ ಸ್ಥಾನವನ್ನು ಪಡೆದುಕೊಳ್ಳಲಿಲ್ಲ. ಪಕ್ಷ ಅವರ ನೇತೃತ್ವದಲ್ಲಿ ಸೋತಾಗ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದರು. ನಾವೆಲ್ಲರೂ ಎಷ್ಟೇ ಬೇಡಿಕೊಂಡರೂ ಅವರು ಒಪ್ಪಲಿಲ್ಲ, ಹೀಗಾಗಿ ಸೋನಿಯಾ ಗಾಂಧಿರಿಗೆ ಅಧ್ಯಕ್ಷರಾಗುವಂತೆ ಮನವಿ ಮಾಡಿಕೊಂಡೆವು. ಇಂದಿಗೂ ರಾಹುಲ್ ಗಾಂಧಿ ಪಕ್ಷದ ಕಾರ್ಯಕರ್ತನಂತೆ ಕೆಲಸ ಮಾಡುತ್ತಿದ್ದಾರೆ. ದೇಶದ 3500 ಕಿ.ಮೀ ದೂರ ಪಾದಯಾತ್ರೆ ಮಾಡಿ ದೇಶ ಒಗ್ಗೂಡಿಸಲು ಬಯಸುತ್ತಿದ್ದಾರೆ. ಇದಕ್ಕಾಗಿ ಭಾರತ ಜೋಡೋ ಕಾರ್ಯಕ್ರಮ ಹಮ್ಮಿಕೊಂಡಿದೆ' ಎಂದು ಹೇಳಿದರು.

English summary
KPCC President DK Shivakumar Pressmeet in Bengaluru: read highlights here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X