ಕೊಲ್ಲೂರು ದೇವಾಲಯ ಆಡಳಿತ ಮಂಡಳಿ ಅವಧಿ ವಿಸ್ತರಣೆಗೆ ನಕಾರ
ಬೆಂಗಳೂರು, ಜನವರಿ 05: ಉಡುಪಿ ಜಿಲ್ಲೆಯ ಕೊಲ್ಲೂರು ಮೂಕಾಂಬಿಕ ದೇವಾಲಯದ ಆಡಳಿತ ಮಂಡಳಿ ಸದಸ್ಯರ ಅವಧಿ ವಿಸ್ತರಣೆಗೆ ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ಅಲ್ಲದೆ, ಕೊನೆಯ ಘಳಿಗೆಯಲ್ಲಿ ಸಮಿತಿ ಅವಧಿ ವಿಸ್ತರಿಸುವಂತೆ ಮಾಡಿರುವ ಮನವಿಯನ್ನು ಅನುಮತಿಸಲಾಗುವುದಿಲ್ಲ ಎಂದು ತಿಳಿಸಿದೆ.
ಸಮಿತಿ ಸದಸ್ಯರಾದ ಕೆರಾಡಿ ಚಂದ್ರಶೇಖರ ಶೆಟ್ಟಿ ಮತ್ತಿತರರು ದೇವಾಲಯದ ಆಡಳಿತ ಮಂಡಳಿ ಅವಧಿಯನ್ನು ವಿಸ್ತರಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಅರ್ಜಿ ತಿರಸ್ಕರಿಸಿದೆ.

ಅಲ್ಲದೆ, ಸಮಿತಿ ರಚನೆ ಮಾಡಿದ ಸಂದರ್ಭದಲ್ಲಿ ಅರ್ಜಿದಾರರು ಮೂರು ವರ್ಷಗಳ ಅವಧಿಯನ್ನು ಒಪ್ಪಿಕೊಂಡಿದ್ದಾರೆ. ಜತೆಗೆ ಅಧಿಕಾರವನ್ನೂ ಅನುಭವಿಸಿದ್ದಾರೆ. ಅವಧಿಯ ಮುಗಿಯುವ ಸಂದರ್ಭದಲ್ಲಿ ಸಮಿತಿಯ ಕಾಲಾವಧಿ ವಿಸ್ತರಿಸಲು ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದು, ಒಪ್ಪಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಸಮಿತಿ ರಚನೆ ಮಾಡಿ ಆದೇಶ ಮಾಡಿದ ದಿನದಿಂದ ಅವಧಿ ಪ್ರಾರಂಭವಾಗಿದ್ದು, ಮೂರು ವರ್ಷಗಳಿಗೆ ಅಂತ್ಯಗೊಳ್ಳಲಿದೆ ಎಂದು ಕಾಯಿದೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ ಎಂದು ಪೀಠ ತಿಳಿಸಿದೆ. ಅಷ್ಟೇ ಅಲ್ಲದೆ, ಸಮಿತಿಯ ಸದಸ್ಯರು ಸಭೆ ಕರೆಯುವುದು ಎಂದು ಕಾಯಿದೆಯಲ್ಲಿ ತಿಳಿಸಲಾಗಿದೆ.
ಆದರೆ, ಇದನ್ನು ಸಮಿತಿಯ ಅಧ್ಯಕ್ಷರನ್ನು ಆಯ್ಕೆ ಮಾಡಿದ ದಿನದಿಂದ ಸಮಿತಿ ಅವಧಿ ಪ್ರಾರಂಭವಾಗಲಿದೆ ಎಂದು ಅರ್ಥೈಸಲಾಗುವುದಿಲ್ಲ. ಸಮಿತಿ ರಚಿಸಿದ ಪ್ರಾರಂಭದ ದಿನದಿಂದಲೂ ಅವರು ಸದಸ್ಯರಾಗಿ ಅಧಿಕಾರ ಪಡೆದುಕೊಂಡಿರುತ್ತಾರೆ. ಹೀಗಾಗಿ ಅರ್ಜಿದಾರರ ವಾದವನ್ನು ಒಪ್ಪಿಕೊಂಡಲ್ಲಿ ಅದು ಕಾನೂನಿಗೆ ವಿರುದ್ಧವಾಗಿರಲಿದೆ ಎಂದು ಪೀಠ ತಿಳಿಸಿದೆ.
ಪ್ರಕರಣದ ಹಿನ್ನೆಲೆ: ಧಾಮಿಕ ದತ್ತಿ ಕಾಯಿದೆ ಸೆಕ್ಷನ್ 25ರ ಪ್ರಕಾರ ಕೊಲ್ಲೂರು ಮೂಕಾಂಬಿಕಾ ದೇವಾಲಯದ ಆಡಳಿತ ಮಂಡಳಿ ಸಮಿತಿಯನ್ನು 2020ರ ಅಕ್ಟೋಬರ್ 27ರಂದು ಕೆಲವು ಷರತ್ತುಗಳೊಂದಿಗೆ ಮೂರು ವರ್ಷಗಳ ಅವಧಿಗೆ ರಚನೆ ಮಾಡಿ ಆದೇಶಿಸಲಾಗಿತ್ತು. ಆದೇಶದಂತೆ ಅರ್ಜಿದಾರರು ಅಧಿಕಾರವನ್ನು ಸ್ವೀಕರಿಸಿ ಮೂರು ವರ್ಷಗಳನ್ನು ಪೂರ್ಣಗೊಳಿಸಿದ್ದರು.
ಈ ನಡುವೆ ಸಮಿತಿ ನಡೆಸಿದ ಮೊದಲ ಸಭೆಯಿಂದ ಸಮಿತಿ ಕಾಲವಾಧಿ ಪ್ರಾರಂಭವಾಗಲಿದೆ. ಆದ್ದರಿಂದ ಸಮಿತಿ ಸಭೆ ನಡೆದ 2021ರ ಏಪ್ರಿಲ್ 26ರ ದಿನವನ್ನು ಪರಿಗಣಿಸಿ ಮೂರು ವರ್ಷಗಳ ಅವಧಿಗೆ ಅಂದರೆ, 2024ರ ಏಪ್ರಿಲ್ 26ರ ವರೆಗೂ ಕಾಲಾವಧಿ ಇರಲಿದೆ.
ಹೀಗಾಗಿ 2020ರ ಅಕ್ಟೋಬರ್ 27ರಂದು ಮೂರು ವರ್ಷಗಳ ಅವಧಿಗೆ ಸಮಿತಿಯನ್ನು ರಚನೆ ಮಾಡಿ ಆದೇಶಿಸಿರುವ ಧಾರ್ಮಿಕ ದತ್ತಿ ಇಲಾಖೆ ಆದೇಶ ರದ್ದುಪಡಿಸಬೇಕು ಅಥಾವ ಮಾರ್ಪಡಿಸಬೇಕು ಎಂದು ಕೋರಿ ಸದಸ್ಯರಾದ ಕೆರಾಡಿ ಚಂದ್ರಶೇಖರ ಶೆಟ್ಟಿ, ಅತುಲ್ ಕುಮಾರ್ ಶೆಟ್ಟಿ, ರತ್ನಾ, ಎಚ್. ಜಯನಂದ, ಕೆ.ರಾಮಚಂದ್ರ ಅಡಿಗಾ, ಗೋಪಾಲಕೃಷ್ಣ ಎಂಬುವರು ಅರ್ಜಿ ಸಲ್ಲಿಸಿದ್ದರು.












Click it and Unblock the Notifications