Heavy Rain: ಕೊಡಗಿನಲ್ಲಿ ಒಂದೇ ದಿನ ಅತ್ಯಧಿಕ ಮಳೆ, ಶೀತ ಗಾಳಿ: ಜುಲೈ 7ರವರೆಗೆ ಮಳೆ ಆರ್ಭಟ, ಮುನ್ಸೂಚನೆ
ಕೊಡಗು, ಜುಲೈ 01: ಮಲೆನಾಡು ಸೇರಿದಂತೆ ಪಶ್ಚಿಮ ಘಟ್ಟಗಳಲ್ಲಿ ಭಾನುವಾರದಿಂದ ಮತ್ತೆ ಮಳೆ ಮುಂದುವರಿದಿದೆ. ಮುಂಗಾರು ಮಳೆ ಮತ್ತೆ ಚುರುಕಾಗಿ ಆರ್ಭಟಿಸುವ ಮುನ್ಸೂಚನೆ ಇದ್ದು, ಕಳೆದ 24 ಗಂಟೆಗಳಲ್ಲಿ ವ್ಯಾಪಕ ಮಳೆ ದಾಖಲಾಗಿದೆ.
ಹವಾಮಾನದಲ್ಲಿನ ತೀವ್ರ ರೂಪದ ಬದಲಾವಣೆಗಳಿಂದ ಕೊಡಗು, ಮಡಿಕೇರಿ, ಸೋಮವಾರ ಪೇಟೆ ಸೇರಿದಂತೆ ಅನೇಕ ಕಡೆಗಳಲ್ಲಿ ಭಾರೀ ಮಳೆ ಬಿದ್ದಿದಿದೆ. ಕಳೆದ ವಾರ ತ್ರಿವೇಣಿ ಸಂಗಮ, ಭಾಗಮಂಡಲ, ಪ್ರಮುಖ ರಸ್ತೆಗಳು, ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಜನ ಜೀವನ ಅಸ್ತವೆಸ್ತವಾಗಿತ್ತು. ಇನ್ನೇನು ಮಳೆ ಕಡಿಮೆ ಆಯಿತು ಎನ್ನುಷ್ಟರಲ್ಲಿ ಮತ್ತೆ ಅಬ್ಬರದ ಮಳೆ ಕಂಡು ಬರುತ್ತಿದೆ.

ಒಂದೇ ದಿನ 131 ಮಿಮೀ ಮಳೆ ದಾಖಲು
ಇಂದು ಸೋಮವಾರ ಬೆಳಗ್ಗೆ 7:30 ಕೊನೆಗೊಂಡಂತೆ ಹಿಂದಿನ ದಿನ ಕೊಡಗು ಜಿಲ್ಲೆಯಾದ್ಯಂತ ಮಳೆ ಆರ್ಭಟ ಕಂಡು ಬಂದಿದೆ. ವಿರಾಜಪೇಟೆ 131 ಮಿ.ಮೀ, ಬಿಟ್ಟನಾಗಲ 120 ಮಿ.ಮೀ, ಮೇಡೆ 80 ಮಿ.ಮೀ, ಕೆದ್ಮುಳ್ಳೂರು 101ಮಿ.ಮೀ, ಕಾಡನೂರು 96 ಮಿ.ಮೀ, ಗೋಣಿಕೊಪ್ಪ 89 ಮಿ.ಮೀ, ಗೋಣಿಕಪ್ಪ 82 ಮಿ.ಮೀ, ಕಡಗದಾಳು 75 ಮಿ.ಮೀ, ಬಲ್ಲಮಾವತಿ 60ಮಿ.ಮೀ
ಬೆಂಗಳೂರು 58 ಮಿ.ಮೀ ಮತ್ತು ನಾಪೋಕ್ಲು 41ಮಿ.ಮೀ. ಮಳೆ ದಾಖಲಾಗಿದೆ.
ಇದೇ ಪ್ರದೇಶಗಳು ಕಳೆದ ವಾರ ಅತ್ಯಧಿಕ ಮಳೆ ಕಂಡಿದ್ದವು. ಇಲ್ಲಿನ ಜನಜೀವನ ಅಸ್ತವ್ಯಸ್ತವಾಗಿತ್ತು. ಇನ್ನೇನು ಮಳೆ ಕಡಿಮೆ ಆಗಿ ಜನ ಜೀವನ ಸಹಜ ಸ್ಥಿತಿಯತ್ತ ಮರಳಿತು ಅನ್ನುವಷ್ಟರಲ್ಲಾಗಲೇ ಮತ್ತೆ ಮುಂಗಾರು ಚುರುಕುಗೊಂಡಿದೆ.
ಕೊಡುಗು ಸೇರಿದಂತೆ ಮಲೆನಾಡಿನ ಪ್ರದೇಶದಲ್ಲಿ ಚಳಿ ಆವರಿಸಿದ್ದು, ಇಡೀ ದಿನ ಮಬ್ಬು ವಾತಾವರಣ, ಆಗಾಗ ಭಾರೀ ಮಳೆಯ ದರ್ಶನವಾಗುತ್ತಿದೆ. ನದಿಗಳು, ಜಲಪಾತಗಳು ಉಕ್ಕಿ ಹರಿದಿವೆ.

ಕೊಡಗಿನಲ್ಲಿ ತಾಪಮಾನ ಇಳಿಕೆ, ಶೀತ ವಾತಾವರಣ
ಸದ್ಯ ಕೊಡಗು ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 24ರಿಂದ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಕನಿಷ್ಠ ತಾಪಮಾನ 20-19 ಡಿಗ್ರಿ ಸೆಲ್ಸಿಯಸ್‌ನಷ್ಟು ಇಳಿಕೆ ಆಗಿದೆ. ಹೀಗಾಗಿ ಇಲ್ಲೆಲ್ಲ ಬಿಸಿಲಿನ ದರ್ಶನವೇ ಅಪರೂಪ ಎಂಬಂತಾಗಿದೆ.
ಇಂದಿನಿಂದ ಜುಲೈ 07ರವರೆಗೆ ಕೊಡಗಿನಲ್ಲಿ ಅತ್ಯಧಿಕ ಮಳೆ ಬರುವ ಮುನ್ಸೂಚನೆ ಇದೆ. ಭಾನುವಾರ ಮಳೆ ಮುಂದಿನ ಒಂದು ವಾರ ಮುಂದುವರಿಯಲಿದ್ದು, ಅಗತ್ಯ ಎಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ, ವಿಪತ್ತು ನಿರ್ವಹಣಾ ಪ್ರಾಧಿಕಾರಿಗಳು ಮಾಹಿತಿ ನೀಡಿವೆ.
ಒಂದು ವಾರ ಕೊಡಗಿಗೆ ಭಾರೀ ಮಳೆ
ಜುಲೈ 07ರವರೆಗೆ ಇಡೀ ದಿನ ಮೋಡ ಕವಿದ ವಾತಾವರಣ, ಗುಡುಗು ಸಹಿತ ಧಾರಾಕಾರ ಮಳೆಯ ಆಗಮಿಸಲಿದೆ. ಹೀಗಾಗಿ ಇಲ್ಲಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಮಳೆಯ ಪ್ರಭಾವದಿಂದಾಗಿ ಈ ರೀತಿ ಪಶ್ಚಿಮ ಘಟ್ಟದ ಪ್ರದೇಶಗಳಲ್ಲಿ ಮತ್ತೆ ಮಳೆ ಆವರಿಸಿದೆ ಎಂದು ಐಎಂಡಿ ಮಾಹಿತಿ ನೀಡಿದೆ.
ಕೊಡಗು ಜೊತೆಗೆ ಚಾಮರಾಜನಗರ, ಬೆಳಗಾವಿ, ಮೈಸೂರು, ಹಾಸನ, ಧಾರವಾಡ ಶಿವಮೊಗ್ಗ ಹಾಗೂ ಇನ್ನಿತರ ಕಡೆಗಳಲ್ಲಿ ವ್ಯಾಪಕ ಮಳೆ ಆಗುತ್ತಿದೆ. ಮುಂದಿನ ಒಂದು ವಾರ ಇಡೀ ರಾಜ್ಯಾದ್ಯಂತ ಮಳೆ ಆವರಿಸುವ ಲಕ್ಷಣ ಕಾಣುತ್ತಿದೆ.












Click it and Unblock the Notifications