ನಂದಿನಿ ಹಾಲಿನ ದರ 4 ರೂ. ಏರಿಕೆ?
ಬೆಂಗಳೂರು, ಜೂ. 02 : ನಂದಿನಿ ಹಾಲಿನ ದರವನ್ನು 4 ರೂ.ಹೆಚ್ಚಿಸಲು ಅನುಮತಿ ನೀಡುವಂತೆ ಕೋರಿ ಕೆಎಂಎಫ್ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. 2015ರ ಜನವರಿ ನಂತರ ಎರಡನೇ ಬಾರಿಗೆ ದರ ಏರಿಕೆ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಬೆಂಗಳೂರಿನಲ್ಲಿ ಸೋಮವಾರ ಮಾತನಾಡಿದ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ವ್ಯವಸ್ಥಾಪಕ ನಿರ್ದೇಶಕ ಎಸ್.ಎನ್. ಜಯರಾಮ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ನಿರ್ವಹಣೆ ಸೇರಿದಂತೆ ವಿವಿಧ ವೆಚ್ಚಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ 4 ರೂ. ದರ ಹೆಚ್ಚಳಕ್ಕೆ ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ. [ಕ್ಷೀರಭಾಗ್ಯ ಯೋಜನೆ 5 ದಿನಗಳಿಗೆ ವಿಸ್ತರಣೆ]

ಪ್ರಸ್ತುತ ಪ್ರತಿ ಲೀಟರ್ ಹಾಲಿಗೆ 29 ರೂ. ಇದೆ. ಉಳಿದ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಹಾಲಿನ ದರ ಕಡಿಮೆ ಇದೆ. ನಿರ್ವಹಣಾ ವೆಚ್ಚ ಅಧಿಕವಾಗಿರುವುದರಿಂದ ದರ ಹೆಚ್ಚಳಕ್ಕೆ ಅನುಮತಿ ನೀಡುವಂತೆ ಮನವಿ ಮಾಡಲಾಗಿದೆ ಎಂದು ಜಯರಾಮ್ ವಿವರಣೆ ನೀಡಿದರು. [ಆನ್ ಲೈನ್ ಮೂಲಕ ನಂದಿನಿ ಹಾಲಿಗೆ ಬುಕ್ ಮಾಡಿ]
2014ರ ಡಿಸೆಂಬರ್‌ನಲ್ಲಿ ಹಾಲಿನ ದರ ಹೆಚ್ಚಳದ ಪ್ರಸ್ತಾಪ ಕೇಳಿಬಂದಿತ್ತು. ಆಗ ಹಾಲಿನ ದರ ಹೆಚ್ಚಳದ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ಕೆಎಂಎಫ್‌ಗೆ ಬಜೆಟ್‌ನಲ್ಲಿ ಒದಗಿಸಲಾದ ಅನುದಾನದ ಬಳಕೆ ಪರಿಶೀಲನೆಗೆ ಉನ್ನತ ಮಟ್ಟದ ಸಭೆ ನಡೆಸಲಾಗುತ್ತಿದೆ ಎಂದು ಪಶು ಸಂಗೋಪನೆ ಮತ್ತು ಕಾನೂನು ಸಚಿವ ಟಿ.ಬಿ. ಜಯಚಂದ್ರ ಸ್ಪಷ್ಟಪಡಿಸಿದ್ದರು. [ಮೊಸರಿನ ದರ ಸದ್ದಿಲ್ಲದೇ ಏರಿಕೆ]
2015ರ ಮಾರ್ಚ್ ಅಂತ್ಯದಲ್ಲಿ ಹಾಲಿನ ದರವನ್ನು ಏರಿಕೆ ಮಾಡಲು ಕರ್ನಾಟಕ ಹಾಲು ಮಹಾಮಂಡಳ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಿತ್ತು. ಲೀಟರ್ ಹಾಲಿನ ದರವನ್ನು 3 ರಿಂದ 4 ರೂ. ಹೆಚ್ಚಳ ಮಾಡಲು ಒಪ್ಪಿಗೆ ನೀಡಬೇಕೆಂದು ಮನವಿ ಮಾಡಲಾಗಿತ್ತು. ಸದ್ಯ, ಮತ್ತೊಮ್ಮೆ ದರ ಏರಿಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.












Click it and Unblock the Notifications