ಮನೆ ಬಾಗಿಲಿಗೆ ಬರಲಿದೆ 'ನಂದಿನಿ' ಇಡ್ಲಿ ಮತ್ತು ದೋಸೆ ಹಿಟ್ಟು
ಬೆಂಗಳೂರು, ಮಾರ್ಚ್ 22: ಕೆಎಂಎಫ್ ತನ್ನ 'ನಂದಿನಿ' ಬ್ರಾಂಡ್ ಮೂಲಕ ಇಡ್ಲಿ ಮತ್ತು ದೋಸೆ ಹಿಟ್ಟನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಸದ್ಯ ಬೆಂಗಳೂರು ನಗರದಲ್ಲಿ ಮಾತ್ರ ಇದು ಮಾರುಕಟ್ಟೆಯಲ್ಲಿ ಲಭ್ಯವಿದೆ. 2024ರ ಡಿಸೆಂಬರ್ 25ರಂದು ಇದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದ್ದು, ಸದ್ಯ ಭಾರೀ ಬೇಡಿಕೆ ಇದೆ. ಆದ್ದರಿಂದ ಹೊಸ ಪ್ರಯತ್ನಕ್ಕೆ ಕೆಎಂಎಫ್ ಮುಂದಾಗಿದೆ.
ಈಗಾಗಲೇ ಬೆಂಗಳೂರು ನಗರದಲ್ಲಿ ಜನಪ್ರಿಯವಾಗಿರುವ ಉತ್ಪನ್ನದ ಮಾರಾಟವನ್ನು ಇತರ ಜಿಲ್ಲೆಗಳಿಗೂ ವಿಸ್ತರಣೆ ಮಾಡಲು ಮುಂದಾಗಿದೆ. ಇದಕ್ಕಾಗಿ ಇಡ್ಲಿ ಮತ್ತು ದೋಸೆ ಹಿಟ್ಟಿನ ಉತ್ಪಾದನೆ ಹೆಚ್ಚಿಸಲಿದೆ ಮತ್ತು ಇ-ಕಾಮರ್ಸ್ ಕಂಪನಿಗಳ ಮೂಲಕವೂ ಜನರ ಮನೆ ಬಾಗಿಲಿಗೆ ತಲುಪಿಸಲು ಯೋಜನೆ ರೂಪಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ 'ನಂದಿನಿ ವೇ' ಪ್ರೋಟಿನ್ ಆಧಾರಿತ ಇಡ್ಲಿ ಮತ್ತು ದೋಸೆ ಹಿಟ್ಟನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದರು. ಪ್ರಸ್ತುತ ಬೆಂಗಳೂರಿನಲ್ಲಿ ಮಾತ್ರ ಇದು ಲಭ್ಯವಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಜನರ ಬೇಡಿಕೆಯಂತೆ ಇತರ ಜಿಲ್ಲೆಗಳಲ್ಲಿಯೂ ಈ ಉತ್ಪನ್ನ ಮಾರಾಟ ಮಾಡಲು ಕೆಎಂಎಫ್ ನಿರ್ಧರಿಸಿದೆ. ಅದಕ್ಕಾಗಿ ಮೊದಲ ಹಂತದಲ್ಲಿ ಉತ್ಪಾದನೆಯನ್ನು ಹೆಚ್ಚಳ ಮಾಡಲಿದೆ.
ಏಪ್ರಿಲ್‌ನಿಂದ ಮನೆಗೆ ಬರಲಿದೆ: ಬೆಂಗಳೂರು ಸೇರಿದಂತೆ ವಿವಿಧ ನಗರದಲ್ಲಿ ಇ-ಕಾಮರ್ಸ್ ಮೂಲಕ ವಹಿವಾಟು ಹೆಚ್ಚಾಗುತ್ತಿದೆ. ಆದರೆ ಈಗ 'ನಂದಿನಿ' ಇಡ್ಲಿ ಮತ್ತು ದೋಸೆ ಹಿಟ್ಟು ಆನ್‌ಲೈನ್‌ನಲ್ಲಿ ಲಭ್ಯವಿಲ್ಲ. ಕೇವಲ ಬೂತ್‌ಗಳಲ್ಲಿ ಖರೀದಿ ಮಾಡಬೇಕಿದೆ. ಆದ್ದರಿಂದ ಏಪ್ರಿಲ್‌ನಿಂದ ಪ್ರಮುಖ ಇ-ಕಾಮರ್ಸ್ ಕಂಪನಿಗಳಿಗೆ ಇದನ್ನು ಮಾರಾಟ ಮಾಡಲು ಅನುಕೂಲ ಮಾಡಿಕೊಡಲಾಗುತ್ತದೆ. ಆಗ ಗ್ರಾಹಕರ ಮನೆ ಬಾಗಿಲಿಗೆ ದೋಸೆ, ಇಡ್ಲಿ ಹಿಟ್ಟು ಬರಲಿದೆ.
ಪ್ರಸ್ತುತ ಸುಮಾರು 4,600 ಕೆಜಿ 'ನಂದಿನಿ' ಇಡ್ಲಿ ಮತ್ತು ದೋಸೆ ಹಿಟ್ಟು ಮಾರಾಟವಾಗುತ್ತಿದೆ. ಈ ಉತ್ಪನ್ನಕ್ಕೆ ಬೇಡಿಕೆ ಸಹ ಹೆಚ್ಚುತ್ತಿದ್ದು, ಕೆಎಂಎಫ್ ಮುಂದಿನ ಮೂರು ತಿಂಗಳಿನಲ್ಲಿ ಮಾರಾಟವನ್ನು 15,000 ಕೆಜಿಗೆ ಹೆಚ್ಚಿಸಲು ತಯಾರಿ ನಡೆಸಿದೆ. ಈ ಉತ್ಪನ್ನದ 450 ಗ್ರಾಂ ಪ್ಯಾಕೇಟ್ 40 ಮತ್ತು 900 ಗ್ರಾಂ ಪ್ಯಾಕೆಟ್‌ಗೆ 80 ರೂ. ದರವಿದೆ.
ಕೆಎಂಎಫ್ ಅಧಿಕಾರಿಗಳು ಮಾತನಾಡಿ, ಪ್ರಸ್ತುತ 'ನಂದಿನಿ' ಇಡ್ಲಿ ಮತ್ತು ದೋಸೆ ಹಿಟ್ಟು ಬೆಂಗಳೂರು ನಗರದ 750 ನಂದಿನಿ ಬೂತ್‌ಗಳಲ್ಲಿ ಲಭ್ಯವಿದೆ. ಏಪ್ರಿಲ್ ತಿಂಗಳಿನಿಂದ ಇ-ಕಾಮರ್ಸ್ ಮೂಲಕ ಮತ್ತು ನಗರದ ಪ್ರಮುಖ ರಿಟೇಲ್ ಶಾಪ್‌ಗಳಲ್ಲಿ ಇದನ್ನು ಮಾರಾಟ ಮಾಡುವ ವ್ಯವಸ್ಥೆ ಮಾಡಲಿದ್ದೇವೆ ಎಂದು ಹೇಳಿದ್ದಾರೆ.
ಬ್ಲಿಂಕ್ ಇಟ್, ಬಿಗ್ ಬಾಸ್ಕೆಟ್, ಝೊಪೆಟೋ ಇ-ಕಾಮರ್ಸ್‌ಗಳಲ್ಲಿ ಏಪಿಲ್‌ನಿಂದ 'ನಂದಿನಿ' ಇಡ್ಲಿ ಮತ್ತು ದೋಸೆ ಹಿಟ್ಟು ಸಿಗಲಿದೆ. ಅಲ್ಲದೇ ಬೆಂಗಳೂರು ನಗರದ ಪ್ರಮುಖ ರಿಟೇಲ್ ಮಳಿಗೆಗಳಲ್ಲಿಯೂ ಲಭ್ಯವಾಗಲಿದೆ. ಪ್ರತಿದಿನ 10,000 ಕೆಜಿ ಹಿಟ್ಟು ಉತ್ಪಾದನೆ ಮಾಡಲು ನಾವು ಚಿಂತನೆ ನಡೆಸಿದ್ದೇವೆ. ಇದಕ್ಕಾಗಿ ಹೆಚ್ಚುವರಿ ಉತ್ಪಾದನಾ ಘಟಕಗಳನ್ನು ಸಹ ಪ್ರಾರಂಭ ಮಾಡುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಎಂಎಫ್ 'ನಂದಿನಿ' ಇಡ್ಲಿ ಮತ್ತು ದೋಸೆ ಹಿಟ್ಟು ಮಾರಾಟವನ್ನು ಮೈಸೂರು, ಮಂಗಳೂರು, ತುಮಕೂರು ಮತ್ತು ಹುಬ್ಬಳ್ಳಿಗೆ ವಿಸ್ತರಣೆ ಮಾಡಲು ಮುಂದಾಗಿದೆ. ಮುಂದಿನ ಎರಡು ತಿಂಗಳಿನಲ್ಲಿ ಈ ಪ್ರಕ್ರಿಯೆ ನಡೆಯಲಿದೆ. ಇದಕ್ಕಾಗಿ ಸ್ಥಳೀಯ ಹಿಟ್ಟು ಉತ್ಪಾದನಾ ಘಟಕಗಳನ್ನು ಸಹ ಗುರುತಿಸಲಾಗುತ್ತಿದೆ.
ನಗರ ಪ್ರದೇಶದಲ್ಲಿ ಕೆಲಸಕ್ಕೆ ಹೋಗುವ ಬ್ಯುಸಿಯಲ್ಲಿರುವ ಜನರು ರೆಡಿ ಟು ಈಟ್ ಮಾದರಿ ಆಹಾರಗಳನ್ನು ಇಷ್ಟಪಡುತ್ತಾರೆ. ಅವರನ್ನು ಗುರಿಯಾಗಿಸಿಕೊಂಡು ಖಾಸಗಿ ಕಂಪನಿಗಳಿಗೆ ಪೈಪೋಟಿ ನೀಡಲು 'ನಂದಿನಿ' ಇಡ್ಲಿ ಮತ್ತು ದೋಸೆ ಹಿಟ್ಟು ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಇದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಹ ಸಿಕ್ಕಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications