7th Pay Commission: ಕೆಎಂಎಫ್ ನೌಕರರ ಮುಷ್ಕರ, ಹಾಲು, ಮೊಸರು ಪೂರೈಕೆ?
ಬೆಂಗಳೂರು, ಜನವರಿ 29: ಕರ್ನಾಟಕ ಸರ್ಕಾರ ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ಶಿಫಾರಸುಗಳನ್ನು ಒಪ್ಪಿಕೊಂಡಿದೆ. ಸರ್ಕಾರಿ ನೌಕರರಿಗೆ ವೇತನ ಆಯೋಗದ ವರದಿ ಅನ್ವಯ ವೇತನ, ಭತ್ಯೆಗಳನ್ನು ನೀಡುವ ಕುರಿತು ಆದೇಶವನ್ನು ಹೊರಡಿಸಿದೆ. ಆದರೆ ಕೆಎಂಎಫ್ ನೌಕರರು ಶೇ 8ರಷ್ಟು ವೇತನ ಹೆಚ್ಚಳ ಬಾಕಿ ಇದೆ ಎಂದು ಹೇಳಿದ್ದು, ಮುಷ್ಕರದ ಎಚ್ಚರಿಕೆ ಕೊಟ್ಟಿದ್ದಾರೆ.
ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಅಧಿಕಾರಿ/ ನೌಕರರು 7ನೇ ವೇತನ ಆಯೋಗದ ಶಿಫಾರಸಿನ ಅನ್ವಯ ಪರಿಷ್ಕೃತ ವೇತನ ನೀಡದಿದ್ದರೆ ಫೆಬ್ರವರಿ 1 ರಿಂದ ಮುಷ್ಕರ ನಡೆಸುತ್ತೇವೆ ಎಂದು ಹೇಳಿದ್ದಾರೆ. ಒಂದು ವೇಳೆ ಮುಷ್ಕರ ಆರಂಭಿಸಿದರೆ ನಂದಿನಿ ಹಾಲು, ಮೊಸರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ನಿರೀಕ್ಷೆ ಇದೆ.

ಫೆಬ್ರವರಿ 1ರೊಳಗೆ 7ನೇ ರಾಜ್ಯ ವೇತನ ಆಯೋಗ ಶಿಫಾರಸು ಮಾಡಿರುವ ಪೂರ್ಣ ಪ್ರಮಾಣದ ವೇತನ ನೀಡಬೇಕು. ವೇತನ ನೀಡದಿದ್ದರೆ ಮುಷ್ಕರ ನಡೆಸುತ್ತೇವೆ ಎಂದು ಆಡಳಿತ ಮಂಡಳಿಗೆ ಅಧಿಕಾರಿ/ ನೌಕರರು ಎಚ್ಚರಿಕೆ ನೀಡಿದ್ದಾರೆ.
ವೇತನ ಜಾರಿಯಾಗಿದೆ: ಕರ್ನಾಟಕದ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿ/ ನೌಕರರಿಗೆ ಈಗಾಗಲೇ ವೇತನ ಆಯೋಗದ ಶಿಫಾರಸಿನ ಅನ್ವಯ ಪೂರ್ಣ ಪ್ರಮಾಣದ ವೇತನ ನೀಡಲಾಗುತ್ತಿದೆ.
ಆದರೆ ಕೆಎಂಎಫ್ ನೌಕರರಿಗೆ ಕೇವಲ ಶೇ 17ರಷ್ಟು ಮಾತ್ರ ವೇತನ ಹೆಚ್ಚಳ ಮಾಡಿದ್ದು, ಶೇ 8ರಷ್ಟು ವೇತನ ಹೆಚ್ಚಳ ಬಾಕಿ ಇದೆ ಎಂದು ಆರೋಪಿಸಲಾಗಿದೆ. ರಾಜ್ಯದ 16 ಹಾಲು ಒಕ್ಕೂಟಗಳಲ್ಲಿ 6 ಸಾವಿರಕ್ಕೂ ಅಧಿಕ ಅಧಿಕಾರಿ/ ನೌಕರರು ಇದ್ದಾರೆ. ಎಲ್ಲರಿಗೂ ಪೂರ್ಣ ಪ್ರಮಾಣದ ವೇತನ ಜಾರಿಗೊಳಿಸಬೇಕು ಎಂದು ಒತ್ತಾಯಿಸಲಾಗಿದೆ.
ಪರಿಷ್ಕೃತ ವೇತನದಂತೆ ಎಲ್ಲಾ ನೌಕರರಿಗೆ ವೇತನ ನೀಡಬೇಕು ಎಂದು ನೌಕರರು ಆಡಳಿತ ಮಂಡಳಿಗೆ ಮನವಿ ಸಲ್ಲಿಕೆ ಮಾಡಿದ್ದೇವೆ. ಫೆಬ್ರವರಿ 1ರೊಳಗೆ ವೇತನ ನೀಡದಿದ್ದರೆ ಮುಷ್ಕರ ನಡೆಸುತ್ತೇವೆ ಎಂದು ಕೆಎಂಎಫ್ ನೌಕರರ ಸಂಘದ ಅಧ್ಯಕ್ಷ ಗೋವಿಂದೇಗೌಡ ಹೇಳಿದ್ದಾರೆ.
ಸ್ಯದ ಫೆಬ್ರವರಿ 1ರಿಂದ ಯಾವುದೇ ಮುಷ್ಕರ, ಪ್ರತಿಭಟನೆ ಘೋಷಣೆ ಮಾಡಿಲ್ಲ. ಆಡಳಿತ ಮಂಡಳಿಗೆ ಎಚ್ಚರಿಕೆಯನ್ನು ಮಾತ್ರ ನೀಡಿದ್ದೇವೆ. ಪೂರ್ಣ ಪ್ರಮಾಣದಲ್ಲಿ ವೇತನ ನೀಡದಿದ್ದರೆ ಹೋರಾಟ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಹಾಲು ಪೂರೈಕೆ ಸಮಸ್ಯೆ ಇಲ್ಲ: ಕೆಎಂಎಫ್ ಅಧಿಕಾರಿ/ ನೌಕರರು ಮುಷ್ಕರ ನಡೆಸಿದರೆ ಹಾಲು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಅಂದಾಜಿಸಲಾಗಿದೆ. ಫೆಬ್ರವರಿ 1 ರಿಂದ ನಂದಿನಿ ಹಾಲು, ಮೊಸರು, ಉತ್ಪನ್ನಗಳ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಆಗುವುದಿಲ್ಲ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಸಹಕಾರ ಸಚಿವರಾದ ಕೆ. ಎನ್. ರಾಜಣ್ಣ ಕೆಎಂಎಫ್ ಅಧಿಕಾರಿಗಳು ಮತ್ತು ನೌಕರರಿಗೆ ಬಾಕಿ ಇರುವ ವೇತನವನ್ನು ಹೆಚ್ಚಳ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಈ ಕುರಿತು ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಚರ್ಚಿಸಲಿದ್ದಾರೆ. ಸಮಸ್ಯೆ ಇತ್ಯರ್ಥ ಪಡಿಸುತ್ತಾರೆ, ಫೆಬ್ರವರಿ 1ರಿಂದ ಯಾವುದೇ ಮುಷ್ಕರ ಇರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications