ಚೆನ್ನಮ್ಮ ಶಾಲೆಯಲ್ಲಿ ಅಡುಗೆ ಭಟ್ಟನ ಲೈಂಗಿಕ ದೌರ್ಜನ್ಯ
ಬಿಜಾಪುರ, ಆ.20 : ಬಿಜಾಪುರದ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯಲ್ಲಿ ಅಸಹ್ಯಕರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಶಾಲೆಯ ಅಡುಗೆ ಸಹಾಯಕ ವಸತಿ ಶಾಲೆಯ ಸುಮಾರು 56 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಕುರಿತು ದೂರು ದಾಖಲಾಗಿದೆ.
ಬಿಜಾಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಆಲಮೇಲ್ ಗ್ರಾಮದಲ್ಲಿರುವ ವಸತಿ ಶಾಲೆಯ ಅಡುಗೆ ಸಹಾಯಕ ವಿಜಯಕುಮಾರ್ ಎಂಟಮಾನೆ ಎಂಬ ಕಾಮುಕ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಹಲವು ವಿದ್ಯಾರ್ಥಿನಿಯರಿಗೆ ಗರ್ಭನಿರೋಧಕ ಮಾತ್ರೆ ನೀಡಿ ಅತ್ಯಾಚಾರ ನಡೆಸಿರುವ ಆಘಾತಕಾರಿ ಸಂಗತಿಯೂ ಹೊರಬಂದಿದೆ.

ಸ್ಥಳೀಯ ರಾಜಕೀಯ ಪ್ರಭಾವದೊಂದಿಗೆ ಶಾಲೆಯ ಸಿಬ್ಬಂದಿಗಳನ್ನು ಬೆದರಿಸಿ ಇಟ್ಟುಕೊಂಡಿರುವ ಈತ, ಶಾಲೆಯ ವಾರ್ಡನ್ ಶೋಭಾ ಸಹಕಾರದಿಂದ ಮಕ್ಕಳ ಮೇಲೆ ದೌರ್ಜನ್ಯ ನಡೆಸುತ್ತಿದ್ದ ಎಂದು ಶಾಲೆಯ ವಿದ್ಯಾರ್ಥಿನಿಯರು ದೂರು ನೀಡಿದ್ದಾರೆ. ಪ್ರತಿದಿನ ರಾತ್ರಿ 12 ಗಂಟೆಗೆ ಹಾಸ್ಟೆಲ್‌ಗೆ ನುಗ್ಗುತ್ತಿದ್ದ ಈತ ಮಕ್ಕಳನ್ನು ಕೋಲಿನಿಂದ ಬಡಿದು ಎಬ್ಬಿಸುತ್ತಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ. [ಭಾರತದ ಹೆಮ್ಮೆಯ ವಿಜಾಪುರ ಸೈನಿಕ ಶಾಲೆ]
ಕಾಲು ಒತ್ತಿಸಿಕೊಳ್ಳುತ್ತಿದ್ದ : ತನ್ನ ಅಡುಗೆ ಕೆಲಸ ಮುಗಿದ ಮೇಲೆಯೂ ವಸತಿ ಶಾಲೆಯಲ್ಲಿ ಇರುತ್ತಿದ್ದ ವಿಜಯಕುಮಾರ್ ಮಕ್ಕಳಿಂದ ಕಾಲು, ಕೈ ಒತ್ತಿಸಿಕೊಳ್ಳುತ್ತಿದ್ದ. ಇದಕ್ಕೆ ಮಕ್ಕಳು ನಿರಾಕರಿಸಿದರೆ, ಅವರ ಮೇಲೆ ಹಲ್ಲೆ ನಡೆಸುತ್ತಿದ್ದ. ಶಾಲೆಯ ವಿದ್ಯಾರ್ಥಿನಿಯರಿಗೆ ಗರ್ಭನಿರೋಧಕ ಮಾತ್ರೆ ನೀಡಿ, ಕೆಲವು ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ನಡೆಸಿದ್ದ ಎಂದು ತಿಳಿದುಬಂದಿದೆ.
ಈತನ ಕಾಟ ತಾಳಲಾರದೆ ವಿದ್ಯಾರ್ಥಿನಿಯರು ಮಹಿಳಾ ಸಾಂತ್ವಾನ ಕೇಂದ್ರಕ್ಕೆ ಕರೆ ಮಾಡಿ ದೂರು ನೀಡಿದ್ದಾರೆ. ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ವಿಜಯಕುಮಾರ್ ವಿರುದ್ಧ ಆಲಮೇಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಚಿವರ ಪ್ರತಿಕ್ರಿಯೆ : ಘಟನೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಬೆಂಗಳೂರಿನಿಂದ ಶಾಲೆಗೆ ಅಧಿಕಾರಿಗಳ ತಂಡವನ್ನು ಕಳಿಸುತ್ತಿದ್ದು, ಅವರು ಘಟನೆ ಬಗ್ಗೆ ತನಿಖೆ ನಡೆಸಿ ವರದಿ ನೀಡಲಿದ್ದಾರೆ ಎಂದು ಆಂಜನೇಯ ಅವರು ಹೇಳಿದ್ದಾರೆ.
ವಿಜಯಕುಮಾರ್ ಬಂಧನ : ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ವಿಜಯಕುಮಾರ್ ಅವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಹೇಳಿದ್ದಾರೆ. ಪ್ರಕರಣದಲ್ಲಿ ಶಾಮೀಲಾಗಿರುವ ಅಧಿಕಾರಿಗಳನ್ನು ಅಮಾನತು ಮಾಡಿ ತನಿಖೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.












Click it and Unblock the Notifications