ಬಾಯ್ತಪ್ಪಿ ಹೇಳಿದೆ ಎನ್ನುವ ವಯಸಲ್ಲ, ಆರಗ ಜ್ಞಾನೇಂದ್ರ ತೀರ್ಥಹಳ್ಳಿಗೆ ಕಳಂಕ-ಕಿಮ್ಮನೆ ರತ್ನಾಕರ್
ಬೆಂಗಳೂರು, ಆಗಸ್ಟ್ 03: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಮಾಜಿ ಸಚಿವ ಆರಗ ಜ್ಞಾನೇಂದ್ರ ನೀಡಿರುವ ಹೇಳಿಕೆ ವಿರುದ್ಧ ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ಕಿಡಿಕಾರಿದ್ದು, ಗೃಹಚಿವರಾಗಿ, ಎಂಪಿಎಂ ಅಧ್ಯಕ್ಷರಾಗಿ ಮತ್ತು ಅನೇಕ ಜವಾಬ್ದಾರಿಯುತ ಸ್ಥಾನಗಳನ್ನು ಅರಗ ಜ್ಞಾನೇಂದ್ರ ಅವರು ನಿಭಾಯಿಸಿದ್ದಾರೆ. ಇಂತಹ ವ್ಯಕ್ತಿ ಬಾಯಿ ತಪ್ಪಿನಿಂದ ಹೇಳಿದೆ, ಕಣ್ತಪ್ಪಿನಿಂದ ಹೇಳಿದೆ ಎನ್ನುವ ವಯಸ್ಸು ಅಲ್ಲ ಜ್ಞಾನವೂ ಅಲ್ಲ ಎಂದಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಯ ಯಾವುದೇ ನಾಯಕರು ಆರಗ ಜ್ಞಾನೇಂದ್ರ ಅವರ ಈ ಹೇಳಿಕೆಯನ್ನು ಏಕೆ ಖಂಡಿಸುತ್ತಿಲ್ಲ, ಅವರ ಮನಸ್ಸಿನಲ್ಲಿಯೂ ಅದೇ ಆಲೋಚನೆ ಇದೆಯೇ? ಮೋದಿಯವರು ಸಹ ಇದೇ ಮನಸ್ಥಿತಿ ಹೊಂದಿರುವವರೆ, ಏಕೆಂದರೆ ಅವರ ಸಂಪುಟದ ಅನೇಕ ಸದಸ್ಯರು ಈ ತರಹದ ಹೇಳಿಕೆ ನೀಡಿದಾಗಲೂ ಸುಮ್ಮನಿದ್ದರು ಎಂದರು.

ಅನಂತ್ ಕುಮಾರ್ ಹೆಗಡೆ ನಾವು ಸಂವಿಧಾನ ಬದಲಾಯಿಸಲು ಬಂದಿದ್ದೇವೆ ಹೇಳಿಕೆಯಿಂದ ಹಿಡಿದು ಯತ್ನಾಳರ ತನಕ ಇಂತಹ ಸಂವಿಧಾನ ವಿರೋಧಿ ಹೇಳಿಕೆ ನೀಡಿದರು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಆರಗ ಜ್ಞಾನೇಂದ್ರ ಅವರು ಕ್ಷಮೆ ಕೇಳಿ ಉಪಯೋಗವಿಲ್ಲ, ಅವರಿಂದ ರಾಜಿನಾಮೆ ಪಡೆಯಬೇಕು. ಖರ್ಗೆಯವರ ಹಾಗೂ ಈಶ್ವರ ಖಂಡ್ರೆ ಅವರ ಬಗ್ಗೆ ಹಗುರವಾಗಿ ಮಾತನಾಡಿರುವದರ ಜೊತೆಗೆ ಬಣ್ಣವೂ ಸೇರಿಕೊಂಡಿದೆ, ಇದಕ್ಕಿಂತ ದೊಡ್ಡ ಅಪರಾಧ ಇನ್ನಿಲ್ಲ. ಮನುಷ್ಯನ ಬಣ್ಣದ ಬಗ್ಗೆ ಮಾತನಾಡಿರುವುದು ಘೋರ ಅಪರಾಧ ಎಂದು ಹೇಳಿದರು.
ಆರಗ ಜ್ಞಾನೇಂದ್ರ ನಾನು ಖರ್ಗೆಯವರ ಹೆಸರು ತೆಗೆದುಕೊಂಡಿಲ್ಲ ಎಂದು ಸುಳ್ಳು ಹೇಳಿದ್ದಾರೆ. ಈ ಬಗ್ಗೆ ಸ್ಪೀಕರ್‌ಗೆ ದೂರು ಸಲ್ಲಿಸಲಾಗುವುದು, ಕೋರ್ಟಿಗೂ ಹೋಗಲಾಗುವುದು, ನಂದಿತಾ ಅವರ ಕೇಸಿನಲ್ಲೂ ಅತ್ಯಾಚಾರ ಎಂದು ಸುಳ್ಳು ಬಿಂಬಿಸಿದವರು ಆರಗ, ಪೊಲೀಸರನ್ನು ನಾಯಿಗಳು ಎಂದವರು, ಹೆಣ್ಣು ಮಕ್ಕಳು 7 ಗಂಟೆ ನಂತರ ಏಕೆ ಓಡಾಡಬೇಕು ಎಂದಂತಹ ವ್ಯಕ್ತಿ ಇವರು. ಖರ್ಗೆಯವರ ವಿಚಾರದಲ್ಲಿ ಕೇವಲ ವಿಷಾದ ವ್ಯಕ್ತಪಡಿಸುವುದು ಬೇಕಿಲ್ಲ, ನೇರವಾಗಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಬೃಹತ್ ಪತ್ರಿಭಟನೆ ಹಾಗೂ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮಾತು ಮುಂದುವರಿಸಿದ ಕಿಮ್ಮನೆ ರತ್ನಾಕರ್ ಅವರು, ಆರಗ ಜ್ಞಾನೇಂದ್ರ ಅವರು ತೀರ್ಥಹಳ್ಳಿಗೆ ಕಳಂಕ. ಕುವೆಂಪು ಅವರು, ಅನಂತಮೂರ್ತಿ, ಗೋಪಾಲಗೌಡರು, ಬದ್ರಿನಾರಾಯಣ್ ಅವರಂತಹ ಸಂಸದೀಯ ಪಟುಗಳು ಗೆದ್ದುಬಂದಂತಹ ಕ್ಷೇತ್ರ ಇಂತಹ ಕ್ಷೇತ್ರಕ್ಕೆ ಅವಮಾನ ಮಾಡುತ್ತಿದ್ದಾರೆ. ಕಸ್ತೂರಿ ರಂಗನ್ ವಿಚಾರಕ್ಕೆ ರಾಷ್ಟ್ರಮಟ್ಟದಲ್ಲಿ ಬಿಜೆಪಿಯವರೇ ಒಪ್ಪಿಗೆ ನೀಡಿದ್ದಾರೆ. ನಮ್ಮ ಕಾಂಗ್ರೆಸ್ ಸರ್ಕಾರ ಇದಕ್ಕೆ ವಿರೋಧ ಮಾಡಿತ್ತು. ತೀರ್ಥಹಳ್ಳಿಯ ಜನರನ್ನು ಮಂಗ ಮಾಡಲು ಇಲ್ಲಿ ವಿರೋಧ ಮಾಡುವುದು, ಕೇಂದ್ರದಲ್ಲಿ ಒಪ್ಪಿಗೆ ನೀಡುವ ಕಣ್ಣಾಮುಚ್ಚಲೆ ಆಡುತ್ತಿದೆ ಎಂದು ಆರೋಪಿಸಿದರು.












Click it and Unblock the Notifications