ಸ್ನೇಹಿತನ ಅಪಹರಣ, ಕೊಲೆ: ನಾಲ್ವರಿಗೆ ಜೀವಾವಧಿ ಶಿಕ್ಷೆ ಕಾಯಂ
ಬೆಂಗಳೂರು, ಜನವರಿ 04; ಹಣಕ್ಕಾಗಿ ಸ್ನೇಹಿತನನ್ನೇ ಅಪಹರಿಸಿ ಕೊಲೆಗೈದ ಪ್ರಕರಣದಲ್ಲಿ ಮುಂಬೈನ ಇಬ್ಬರು ಯುವತಿರು ಸೇರಿ ನಾಲ್ವರಿಗೆ ಕರ್ನಾಟಕ ಹೈಕೋರ್ಟ್ ಜೀವಾವಧಿ ಶಿಕ್ಷೆಯನ್ನು ಕಾಯಂಗೊಳಿಸಿದೆ.
ವಿಚಾರಣಾ ನ್ಯಾಯಾಲಯದ ಆದೇಶ ರದ್ದು ಕೋರಿ ಆರೋಪಿಗಳಾದ ಜಾರ್ಖಾಂಡ್‌ನ ರೋಹಿತ್ ಕುಮಾರ್, ಮುಂಬೈ ಮೂಲದ ಶಿವಾನಿ ಠಾಕೂರ್, ಪ್ರೀತಿ ರಾಜ್ ಮತ್ತು ಬಿಹಾರದ ವಾರೀಶ್ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಬಿ. ವೀರಪ್ಪ ಅವರ ನೇತೃತ್ವದ ವಿಭಾಗೀಯ ಪೀಠ, ವಜಾಗೊಳಿಸಿ ನಾಲ್ವರ ಜೀವಾವಧಿ ಶಿಕ್ಷೆ ಎತ್ತಿಹಿಡಿದಿದೆ.
ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಈ ನಾಲ್ವರು ಆರೋಪಿಗಳು ಜೊತೆಗೂಡದಿದ್ದರೆ ತುಷಾರ್ ಅನ್ನು ಅಪಹರಿಸಿ ಕೊಲೆ ಮಾಡಲಾಗುತ್ತಿರಲಿಲ್ಲ. ಆರೋಪಿಗಳು ಕೇವಲ ಕೊಲೆ ಮಾಡಿಲ್ಲ. ಮೃತದೇಹವನ್ನು ವಿಲೇವಾರಿ ಮಾಡಿ ಸಾಕ್ಷ್ಯ ನಾಶಕ್ಕೂ ಯತ್ನಿಸಿದ್ದಾರೆ ಎಂದು ಹೇಳಿದೆ.

ಲಭ್ಯವಿರುವ ದಾಖಲೆ ಗಮನಿಸಿದರೆ ಇಬ್ಬರು ಯುವತಿಯರು ಮೃತನೊಂದಿಗೆ ಸ್ನೇಹ ಬೆಳೆಸಿ ಹತ್ತಿರವಾಗಿದ್ದಾರೆ. ರೋಹಿತ್ ಮತ್ತು ವಾರೀಶ್ ಜೊತೆಗೂಡಿ ತುಷಾರ್ ಅನ್ನು ಅಪಹರಿಸಿದ್ದಾರೆ ಎಂದು ಆದೇಶಿಸಿದೆ.
ಜತೆಗೆ, ವಾರಿಶ್ ಸೂಚನೆ ಮೇರೆಗೆ ರೋಹಿತ್ ಮೃತನ ತಂದೆಯಿಂದ ಹಣ ಪಡೆಯಲು ರೈಲ್ವೇ ನಿಲ್ದಾಣಕ್ಕೆ ಹೋಗಿದ್ದಾನೆ. ಈ ವೇಳೆ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ಹೇಳಿಕೆ ಆಧರಿಸಿ ಮೃತದೇಹವನ್ನು ಪತ್ತೆ ಹಚ್ಚಲಾಗಿತ್ತು. ಆದ್ದರಿಂದ ಎಲ್ಲರೂ ಪ್ರಕರಣಕ್ಕೆ ಒಳಸಂಚು ರೂಪಿಸಿದ್ದ ಎಂಬುದನ್ನು ಪ್ರಾಸಿಕ್ಯೂಷನ್ ಸಾಬೀತುಪಡಿಸಿದೆ ಅದನ್ನು ಪರಿಗಣಿಸಿ ನಾಲ್ವರಿಗೆ ಆರೋಪಿಗೆ ವಿಚಾರಣಾ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ಎಲ್ಲಾ ಸಾಕ್ಷ್ಯಧಾರಗಳನ್ನು ಮರು ಪರಿಶೀಲಿಸಿದರೆ ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಹೈಕೋರ್ಟ್ ಮಧ್ಯಪ್ರವೇಶ ಮಾಡುವ ಅಗತ್ಯ ಕಂಡುಬರುತ್ತಿಲ್ಲ ಎಂದು ಅಭಿಪ್ರಾಯಪಟ್ಟು ಮೇಲ್ಮನವಿಯನ್ನು ವಜಾಗೊಳಿಸಿದೆ.
ಪ್ರಕರಣದ ಹಿನ್ನೆಲೆ: ವಾರಿಶ್ ಮತ್ತು ತುಷಾರ್ ರಾಜಸ್ಥಾನದಲ್ಲಿ ಒಟ್ಟಿಗೆ ಓದಿದ್ದರು. ಇಂಜಿನಿಯರಿಂಗ್ ವ್ಯಾಸಂಗ ಮಾಡಲು ತುಷಾರ್ ಬೆಂಗಳೂರಿಗೆ ಬಂದಿದ್ದ. ಶ್ರೀಮಂತ ಕುಟುಂಬದ ಹಿನ್ನೆಲೆ ಹೊಂದಿರುವ ಹಿನ್ನೆಲೆಯಲ್ಲಿ ತುಷಾರ್‌ನನ್ನು ಅಪಹರಿಸಿ ಹಣಕ್ಕೆ ವಸೂಲಿ ಮಾಡಲು ಯೋಜಿಸಿ ವಾರಿಶ್ ಬೆಂಗಳೂರಿಗೆ ಬಂದಿದ್ದ.
ನಂತರ ಇಂಜಿನಿಯರಿಂಗ್ ಕೋರ್ಸ್ ಅನ್ನು ಅರ್ಧಕ್ಕೆ ಬಿಟ್ಟು ನಗರದಲ್ಲಿ ಉದ್ಯೋಗ ಮಾಡುತ್ತಿದ್ದ ತಮ್ಮ ಸಂಬಂಧಿಕರಾದ ಪ್ರೀತಿ ಮತ್ತು ಶಿವಾನಿಯನ್ನು ತುಷಾರ್‌ಗೆ ವಾರೀಶ್ ಪರಿಚಯ ಮಾಡಿಕೊಟ್ಟಿದ್ದ. 2011ರ ಜ.14ರಂದು ತುಷಾರ್ ಕಾಣೆಯಾಗಿದ್ದ. ಇದಾದ ಏಳು ದಿನಗಳ ನಂತರ ಆತನ ಮೃತ ದೇಹ ವೀರಸಾಗರ ರಸ್ತೆಯ ನೀಲಗಿರಿ ತೋಪಿನಲ್ಲಿ ಪತ್ತೆಯಾಗಿತ್ತು.
ಜ.16ರಂದು ತುಷಾರ್ ಮೊಬೈಲ್‌ನಿಂದಲೇ ಆತನ ತಂದೆಗೆ ಕರೆ ಮಾಡಿದ ಆರೋಪಿಗಳು, ನಿಮ್ಮ ಮಗನನ್ನು ಅಪಹರಣ ಮಾಡಿದ್ದು, 10 ಲಕ್ಷ ನೀಡಿ ಬಿಡಿಸಿಕೊಂಡು ಹೋಗುವಂತೆ ಸೂಚಿಸಿದ್ದರು. ಇದರಿಂದ ತುಷಾರ್ ತಂದೆ ಬಿಹಾರದಿಂದ ಬೆಂಗಳೂರಿಗೆ ಬಂದು ಪೊಲೀಸರಿಗೆ ದೂರು ನೀಡಿದ್ದರು.
ನಂತರ ಸಿಕ್ಕಿಬಿದ್ದ ಆರೋಪಿಗಳು ಜ.14ರಂದೇ ತುಷಾರ್ ನನ್ನು ಅಪಹರಿಸಿ, ಕೊಲೆ ಮಾಡಿರುವುದಾಗಿ ತಿಳಿಸಿದ್ದರು. ನಂತರ ಪೊಲೀಸರು ಶಿವಾನಿ ಮತ್ತು ಪ್ರೀತಿಯನ್ನು ಬಂಧಿಸಿದ್ದರು. ತನಿಖೆ ಪೂರ್ಣಗೊಳಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಆರೋಪಿಗಳೇ ಹಣಕ್ಕಾಗಿ ತುಷಾರ್ ಅನ್ನು ಅಪಹರಿಸಿ ಕೊಲೆ ಮಾಡಿರುವುದಾಗಿ ಪ್ರಾಸಿಕ್ಯೂಷನ್ ಸಾಬೀತುಪಡಿಸಿದೆ ಎಂದು ಅಭಿಪ್ರಾಯಪಟ್ಟಿದ್ದ ಬೆಂಗಳೂರಿನ 15ನೇ ತ್ವರಿತಗತಿ ನ್ಯಾಯಾಲಯ ನಾಲ್ವರು ಆರೋಪಿಗಳಿಗೂ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ತೀರ್ಪು ರದ್ದು ಕೋರಿ ಆರೋಪಿಗಳು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.












Click it and Unblock the Notifications