ಸಂಪುಟ ವಿಸ್ತರಣೆ ಜೊತೆ ಹಲವು ಸಚಿವರ ಖಾತೆ ಬದಲಾವಣೆ
ಬೆಂಗಳೂರು, ಸೆಪ್ಟೆಂಬರ್ 30 : ಕರ್ನಾಟಕದ ಕಾಂಗ್ರೆಸ್ ನಾಯಕರು ಸಚಿವ ಸಂಪುಟ ವಿಸ್ತರಣೆ ಮಾಡಲೇಬೇಕು ಎಂದು ಪಣ ತೊಟ್ಟಿದ್ದಾರೆ. ಅಕ್ಟೋಬರ್ 10ರೊಳಗೆ ಸಂಪುಟ ವಿಸ್ತರಣೆಯಾಗಲಿದೆ. ವಿಸ್ತರಣೆ ಜೊತೆಗೆ ಕೆಲವು ಸಚಿವರು ಖಾತೆಗಳು ಬದಲಾವಣೆಯಾಗಲಿದೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸಂಪುಟದಲ್ಲಿ 7 ಸಚಿವ ಸ್ಥಾನಗಳು ಖಾಲಿ ಇವೆ. ಇವುಗಳಲ್ಲಿ 6 ಕಾಂಗ್ರೆಸ್ ಪಕ್ಷಕ್ಕೆ, 1 ಜೆಡಿಎಸ್ ಪಕ್ಷಕ್ಕೆ ಸಿಗಲಿದೆ. ಆದರೆ, ಕಾಂಗ್ರೆಸ್‌ನಲ್ಲಿ ಯಾರು ಸಚಿವರಾಗಲಿದ್ದಾರೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಸಭೆ ನಡೆಸಿ ಸಂಪುಟ ಸೇರುವ ಶಾಸಕರ ಹೆಸರನ್ನು ಅಂತಿಮಗೊಳಿಸಲಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಜೊತೆಗೆ ಹಲವು ಸಚಿವರ ಖಾತೆಗಳು ಮರು ಹಂಚಿಕೆ ಆಗಲಿವೆ. ಹೊಸದಾಗಿ ಸೇರುವ ಸಚಿವರಿಗೆ ಪ್ರಮುಖ ಖಾತೆಗಳು ಸಿಗುವ ಸಾಧ್ಯತೆ ಇದೆ. ಯಾರ-ಯಾರ ಖಾತೆ ಬದಲಾಗಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.....

ಯಾವ-ಯಾವ ಖಾತೆ ಬದಲಾವಣೆ
ಬೆಂಗಳೂರು ನಗರಾಭಿವೃದ್ಧಿ, ನಗರಾಭಿವೃದ್ಧಿ, ಕನ್ನಡ ಮತ್ತು ಸಂಸ್ಕೃತಿ, ಮುಜರಾಯಿ, ಕಾರ್ಮಿಕ ಖಾತೆಗಳು ಬದಲಾವಣೆಯಾಗಲಿವೆ. ಶಿಕ್ಷಣ ಮತ್ತು ಉನ್ನತ ಶಿಕ್ಷಣ ಖಾತೆಗಳನ್ನು ಬದಲಾವಣೆ ಮಾಡಲಾಗುತ್ತದೆ ಎಂಬ ಸುದ್ದಿ ಕಾಂಗ್ರೆಸ್ ಪಕ್ಷದಲ್ಲಿ ಹಬ್ಬಿದೆ.
ಕೆಲವು ಹಿರಿಯ ಶಾಸಕರು ಸಂಪುಟ ವಿಸ್ತರಣೆ ಸಮಯದಲ್ಲಿ ಸೇರ್ಪಡೆಯಾಗಲಿದ್ದು, ಸಹಜವಾಗಿ ಅವರಿಗೆ ಪ್ರಬಲ ಖಾತೆ ನೀಡಬೇಕಾಗಿದೆ. ಆದ್ದರಿಂದ, ಖಾತೆಗಳಲ್ಲಿಯೂ ಬದಲಾವಣೆ ಯಾಗಲಿದೆ.

ಯಾರು ಸಂಪುಟ ಸೇರಲಿದ್ದಾರೆ?
* ಎಂ.ಬಿ.ಪಾಟೀಲ್ (ಬಬಲೇಶ್ವರ)
* ಸಿ.ಎಸ್.ಶಿವಳ್ಳಿ (ಕುಂದಗೋಳ)
* ಬಿ.ಸಿ.ಪಾಟೀಲ್ (ಹಿರೇಕೆರೂರು)
* ಈ.ತುಕಾರಾಂ (ಸಂಡೂರು)
* ಬಿ.ಕೆ.ಸಂಗಮೇಶ್ವರ (ಭದ್ರಾವತಿ)

ಅಕ್ಟೋಬರ್ 5 ರಿಂದ 10
ಅಕ್ಟೋಬರ್ 5 ಅಥವ 6ರಂದು ದೆಹಲಿಯಲ್ಲಿ ರಾಜ್ಯ ನಾಯಕರು ಮಹತ್ವದ ಸಭೆ ನಡೆಸಲಿದ್ದು, ಸಭೆಯಲ್ಲಿ ಸಂಪುಟ ಸೇರುವ ಶಾಸಕರ ಹೆಸರು ಅಂತಿಮಗೊಳ್ಳಲಿದೆ. ಅಕ್ಟೋಬರ್ 6ರಂದು ನಿಗಮ-ಮಂಡಳಿಗಳ ನೇಮಕದ ಪಟ್ಟಿ ಸಿದ್ಧವಾಗಲಿದೆ. ಅಕ್ಟೋಬರ್ 10ರೊಳಗೆ ಸಂಪುಟ ವಿಸ್ತರಣೆ ಪ್ರಕ್ರಿಯೆ ಪೂರ್ಣಗೊಳಿಸಿ ಪಕ್ಷ ಲೋಕಸಭೆ ಚುನಾವಣೆ ತಯಾರಿಯತ್ತ ಗಮನ ಹರಿಸಲಿದೆ.

5 ಸ್ಥಾನ ಮಾತ್ರ ಭರ್ತಿ
ಖಾಲಿ ಇರುವ 6 ಸ್ಥಾನಗಳ ಪೈಕಿ ಐದನ್ನು ಮಾತ್ರ ಭರ್ತಿ ಮಾಡಲು ಕಾಂಗ್ರೆಸ್ ನಿರ್ಧರಿಸಿದೆ. ಅಸಮಾಧಾನ ಉಂಟಾದರೆ ಭರ್ತಿ ಮಾಡಲು ಎಂಬಂತೆ ಒಂದು ಸ್ಥಾನವನ್ನು ಹಾಗೆಯೇ ಉಳಿಸಿಕೊಳ್ಳಲಾಗುತ್ತದೆ. ಎರಡು ವರ್ಷದ ಬಳಿಕ ಸಂಪುಟ ಪುನಾರಚನೆ ಮಾಡಲು ಪಕ್ಷ ನಿರ್ಧರಿಸಿದೆ.












Click it and Unblock the Notifications