KEA: ಪಿಜಿ ಮೆಡಿಕಲ್ ಸೀಟು ಹಂಚಿಕೆ ಅಂತಿಮ ಫಲಿತಾಂಶ ಡಿ.24ಕ್ಕೆ ಬಿಡುಗಡೆ
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ (PGMedical 2025) ಪ್ರವೇಶ ಸಂಬಂಧ ಎರಡನೇ ಸುತ್ತಿನ ಸೀಟು ಹಂಚಿಕೆಯ ಅಪ್ಡೇಟ್ ನೀಡಿದೆ. ತಾತ್ಕಾಲಿಕ ಫಲಿತಾಂಶವನ್ನು ಇದೇ ಡಿಸೆಂಬರ್ 23ರ ಬದಲಿಗೆ ಡಿಸೆಂಬರ್ 22 ರಂದು ಮಂಗಳವಾರ ಬಿಡುಗಡೆ ಮಾಡಲಾಗುವುದು ಎಂದು ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ಕೆಲವು ಅಭ್ಯರ್ಥಿಗಳಿಗೆ ಅಖಿಲ ಭಾರತ ಮಟ್ಟದ ಎಂಸಿಸಿ ಎರಡನೇ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿದೆ. ಅಂತಹವರು ಒಂದು ವೇಳೆ ಅಲ್ಲಿಯೇ ಹೋಗಿ ಪ್ರವೇಶ ಪಡೆಯುವುದಿದ್ದರೆ ಅವರಿಗೆ ಅನುಕೂಲ ಆಗಲಿ ಎಂದು ಈ ತೀರ್ಮಾನ ಮಾಡಲಾಗಿದೆ. ಅಂದು ಡಿಸೆಂಬರ್ 22ರ ಸಂಜೆ 6 ಗಂಟೆ ನಂತರ ತಾತ್ಕಾಲಿಕ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದರು.

ಡಿಸೆಂಬರ್ 24ರಂದು ಅಂತಿಮ ಫಲಿತಾಂಶ
ಮೆಡಿಕಲ್ ಕೌನ್ಸೆಲಿಂಗ್ ಸಮಿತಿ (MCC) ಸೀಟಿಗೆ ಪ್ರವೇಶ ಪಡೆಯುವ ಕಾರಣದಿಂದ ಪ್ರಾಧಿಕಾರದಲ್ಲಿ ಎರಡನೇ ಸುತ್ತಿನಲ್ಲಿ ತಾತ್ಕಾಲಿಕವಾಗಿ ಹಂಚಿಕೆಯಾಗಿ ರದ್ದುಗೊಳ್ಳುವ ಪಿಜಿ ಸೀಟುಗಳನ್ನು ಅದೇ ಸುತ್ತಿನಲ್ಲೇ ಅರ್ಹರಿಗೆ ಸಿಗುವ ಹಾಗೆ ಮಾಡಲಾಗುವುದು. ಬಳಿಕ ಡಿಸೆಂಬರ್ 24ರಂದು ಅಂತಿಮ ಫಲಿತಾಂಶ ಪ್ರಕಟಿಸಲಾಗುವುದು. ಅಭ್ಯರ್ಥಿಗಳು ಈ ಮೊದಲು ದಾಖಲಿಸಿದ್ದ ಇಚ್ಛೆ/ಆಯ್ಕೆಗಳ ಆಧಾರದ ಮೇಲೆಯೇ ಅಂತಿಮವಾಗಿ ಸೀಟು ಹಂಚಿಕೆ ಮಾಡಲಾಗುತ್ತದೆ ಎಂದು ಹೇಳಿದರು.
ಶುಲ್ಕ ಕಡಿತ, ಬಾಕಿ ಹಣ ಹಿಂಪಾವತಿ
ಎಂಸಿಸಿ ಸೀಟಿಗಳಿಗೆ ಪ್ರವೇಶ ಪಡೆಯಲು ಇಚ್ಛಿಸುವ ಮೆಡಿಕಲ್ ಅಭ್ಯರ್ಥಿಗಳು ತಮ್ಮ ಮೂಲ ದಾಖಲೆಗಳನ್ನು ಡಿಸೆಂಬರ್ 23ರಂದು ಸಂಜೆ 4 ಗಂಟೆಯೊಳಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಗೆ ಬಂದು ಪಡೆಯಬಹುದು. ಈ ಸುತ್ತಿನಲ್ಲಿ ಭಾಗವಹಿಸಲು ಕಟ್ಟಿರುವ ಶುಲ್ಕದಲ್ಲಿ 25 ಸಾವಿರ ರೂಪಾಯಿ ಕಡಿತ ಮಾಡಿಕೊಂಡು ಉಳಿದ ಹಣವನ್ನು ಒಂದೇ ದಿನದಲ್ಲಿ ಹಿಂದಿರುಗಿಸಲಾಗುತ್ತದೆ.
ಎರಡನೇ ಸುತ್ತಿನಲ್ಲಿ ಸೀಟು ಹಂಚಿಕೆಯಾದವರು ಕಡ್ಡಾಯವಾಗಿ ಪ್ರವೇಶ ಪಡೆಯಬೇಕು. ಹಾಗೆಯೇ ಇತ್ತೀಚಿನ ಹೈಕೋರ್ಟ್ ಆದೇಶದಲ್ಲಿ ಉಲ್ಲೇಖಿಸಿರುವಂತೆ ಎರಡನೇ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿ, ಪ್ರವೇಶ ಪಡೆದ ಅಭ್ಯರ್ಥಿಗಳಿಗೂ 3ನೇ ಸುತ್ತಿನಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
ಇನ್ನೂ ಎರಡನೇ ಸುತ್ತಿನ ಅಂತಿಮ ಫಲಿತಾಂಶ ಪ್ರಕಟಣೆಯ ನಂತರವು ಕೆಲವು ಅಭ್ಯರ್ಥಿಗಳು ವಿವಿಧ ಕಾರಣಗಳಿಂದ ತಮಗೆ ಹಂಚಿಕೆಯಾದ ಸೀಟುನ್ನು ರದ್ದುಪಡಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಕೌನ್ಸೆಲಿಂಗ್ ಷರತ್ತುಗಳು ಹಾಗೂ ಹಿಂದಿನ ವರ್ಷಗಳ ಕೌನ್ಸೆಲಿಂಗ್ ಪ್ರಕ್ರಿಯೆ ಅನ್ವಯ ಸದರಿ ಸೀಟುಗಳನ್ನು ಮೂರನೇ ಸುತ್ತಿಗೆ ಪರಿಗಣಿಸಲಾಗುತ್ತದೆ. ಆದರೆ ಎರಡನೇ ಸುತ್ತಿನಲ್ಲಿನ ಕ್ಲಿನಿಕಲ್ ಸೀಟು ಹಂಚಿಕೆ ಆದ ಅಭ್ಯರ್ಥಿಗಳನ್ನು ಮೂರನೇ ಸುತ್ತಿಗೆ ಪರಿಗಣಿಸುತ್ತಿರಲಿಲ್ಲ. ಹೈಕೋರ್ಟ್ ಸೂಚನೆ ಮೇರೆಗೆ ಪರಿಗಣಿಸಲಾಗುವುದು ಎಂದು ಪ್ರಾಧಿಕಾರ ಪ್ರಕಟಣೆಯಲ್ಲಿ ವಿವರಿಸಿದೆ.












Click it and Unblock the Notifications