KEA: ವೈದ್ಯಕೀಯ ಅಭ್ಯರ್ಥಿಗಳಿಗೆ ಗುಡ್‌ನ್ಯೂಸ್: ಜ.6 ರಂದು ಪಶು ವೈದ್ಯಕೀಯ ಸೀಟು ಹಂಚಿಕೆ
ಬೆಂಗಳೂರು: ವೈದ್ಯಕೀಯ ವೃತ್ತಿಪರ ಕೋರ್ಸ್‌ಗಳಿಗೆ ಸಂಬಂಧಿಸಿದಂತೆ ಸೀಟು ಹಂಚಿಕೆ ಪ್ರಕ್ರಿಯೆ ಮುಂದುವರಿಸಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಯಾವುದೇ ಸುತ್ತಿನಲ್ಲಿ ಸೀಟು ಹಂಚಿಕೆ ಆಗದ ವೈದ್ಯಕೀಯ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್ ನೀಡಿದೆ. ಕರ್ನಾಟಕದ ರಾಜ್ಯದ ವಿವಿಧ ಕಾಲೇಜುಗಳಲ್ಲಿ ಇನ್ನೂ 24 ಪಶು ವೈದ್ಯಕೀಯ (UG Veterinary 2025) ಸೀಟುಗಳು ಹಂಚಿಕೆಗೆ ಲಭ್ಯ ಇವೆ. ಅವುಗಳ ಹಂಚಿಕೆಯಲ್ಲಿ ನೀವು ಪಾಲ್ಗೊಳ್ಳಬಹುದೆಂದು ತಿಳಿಸಿದೆ.
ರಾಜ್ಯದಲ್ಲಿ ಹಂಚಿಕೆ ಆಗದ ಉಳಿದ 24 ಪಶು ವೈದ್ಯಕೀಯ ಸೀಟುಗಳು ಭರ್ತಿಗೆ ಇದೇ ಜನವರಿ 6ರಂದು ಅಂತಿಮ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ನಡೆಸಲಾಗುತ್ತದೆ. ಇದುವರೆಗೂ ಯಾವುದೇ ಸುತ್ತಿನಲ್ಲಿ ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್, ಪಶು ವೈದ್ಯಕೀಯ ಸೀಟು ಹಂಚಿಕೆಯಾಗದಿರುವ ಅಭ್ಯರ್ಥಿಗಳು ಈ ಪಶುವೈದ್ಯಕೀಯ ಸುತ್ತಿನ ಸೀಟು ಹಂಚಿಕೆಯಲ್ಲಿ ಭಾಗವಹಿಸಬಹುದೆಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ತಿಳಿಸಿದ್ದಾರೆ.

ಆಸಕ್ತ ಅಭ್ಯರ್ಥಿಗಳು ಕೋರ್ಸ್ ಶುಲ್ಕದ ಡಿ.ಡಿ ಜತೆಗೆ ಮೂಲ ದಾಖಲೆಗಳೊಂದಿಗೆ ಜನವರಿ 6ರಂದು ಬೆಳಗ್ಗೆ 10 ಗಂಟೆಯಿಂದ 11ಗಂಟೆಯವರೆಗೆ ಪ್ರಾದಿಕಾರ (ಕೆಇಎ) ಕಚೇರಿಗೆ ಬಂದು ಖುದ್ದು ಸಲ್ಲಿಸಬೇಕು. ಬಳಿಕ ಮಧ್ಯಾಹ್ನ 12ರಿಂದ 1ಗಂಟೆವರೆಗೆ ಆಪ್ಷನ್ಸ್ ದಾಖಲಿಸಲು ಅವಕಾಶ ನೀಡಲಾಗುತ್ತದೆ. ಅದೇ ದಿನ ಮಧ್ಯಾಹ್ನ 2ಗಂಟೆಗೆ ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಬಿಎಸ್ ಸಿ ಕೃಷಿ, ರೇಷ್ಮೆ ಕೃಷಿ ಇತ್ಯಾದಿ ಫಾರ್ಮ್ ಸೈನ್ಸ್ ಕೋರ್ಸ್ ಗಳಿಗೆ ಸೀಟು ಹಂಚಿಕೆ ಮಾಡಿಕೊಂಡು ನಂತರ ರದ್ದುಪಡಿಸಿಕೊಂಡವರು ಈ ಸುತ್ತಿಗೆ ಅರ್ಹರಾಗುವುದಿಲ್ಲ. ಇತರೆ ಅಭ್ಯರ್ಥಿಗಳು, ಲಭ್ಯ ಪಶು ವೈದ್ಯಕೀಯ ಸೀಟುಗಳಲ್ಲಿ ಆಸಕ್ತಿ ಇದ್ದಲ್ಲಿ ಪ್ರಸಕ್ತ ಕಾಲೇಜಿನಿಂದ ಕಡ್ಡಾಯವಾಗಿ ಎನ್ ಓ ಸಿ (ನಿರಾಕ್ಷೇಪಣಾ ಪ್ರಮಾಣಪತ್ರ) ಪಡೆದು, ಪೋಷಕರೊಡನೆ ಚರ್ಚಿಸಿ, ಸೀಟು ಹಂಚಿಕೆಯಲ್ಲಿ ಭಾಗವಹಿಸುವಂತೆ ತಿಳಿಸಿದ್ದಾರೆ.
ಪ್ರಾಧಿಕಾರವು ಈಗಾಗಲೇ ಆಯಾ ಕಾಲೇಜುಗಳಿಗೆ ಶುಲ್ಕ ವರ್ಗಾವಣೆ ಮಾಡಿರುವುದರಿಂದ ಈ ಹಿಂದೆ ಹಂಚಿಕೆಯಾಗಿದ್ದ ಸೀಟಿಗೆ ಪಾವತಿಸಿರುವ ಶುಲ್ಕವನ್ನು ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಯುಜಿನೀಟ್ ಬಾಕಿ ಸೀಟು ಹಂಚಿಕೆ, ಫಲಿತಾಂಶ ಪ್ರಕಟ
ಇನ್ನೂ ಯುಜಿನೀಟ್ (UGNEET 2025) ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ವಿಶೇಷ ಸ್ಟ್ರೇ ವೇಕೆನ್ಸಿ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶ ಪ್ರಕಟಿಸಲಾಗಿದೆ. ಬಾಕಿ ಉಳಿದಿದ್ದ ಆರು ಸೀಟುಗಳನ್ನು ನೆನ್ನೆ ಬುಧವಾರ (ಡಿಸೆಂಬರ್ 31) ರಂದು ಹಂಚಿಕೆ ಮಾಡಲಾಗಿದೆ. ಈ ಸೀಟು ಹಂಚಿಕೆಯಲ್ಲಿ ಒಟ್ಟು 64 ಮಂದಿ ಅಭ್ಯರ್ಥಿಗಳು ಭಾಗವಹಿಸಿದ್ದರು. ಯಾರಿಗೆಲ್ಲ ಈ ಸುತ್ತಿನಲ್ಲಿ ಸೀಟಿ ಹಂಚಿಕೆ ಆಗಿದೆಯೋ ಅವರೆಲ್ಲೂ ಇಂದು ಜನವರಿ 1ರಂದು ಸಂಬಂಧಪಟ್ಟ ಕಾಲೇಜುಗಳಲ್ಲಿ ವರದಿ ಮಾಡಿಕೊಂಡಿದ್ದಾರೆ ಎಂದು ಕೆಇಎ ಮೂಲಗಳು ಮಾಹಿತಿ ನೀಡಿವೆ.












Click it and Unblock the Notifications