5 ವರ್ಷ ನಾನೇ ಸಿಎಂ ಎಂದ ಸಿದ್ದರಾಮಯ್ಯ: ಮಹತ್ವದ ನಿರ್ಧಾರ ತಿಳಿಸಿದ ಕೆ ಸಿ ವೇಣುಗೋಪಾಲ್
ಬೆಂಗಳೂರು, ಅಕ್ಟೋಬರ್ 04: ರಾಜ್ಯ ಕಾಂಗ್ರೆಸ್‌ನಲ್ಲಿ ಮತ್ತೆ ಮುಖ್ಯಮಂತ್ರಿ ಬದಲಾವಣೆ ಕುರಿತು ಚರ್ಚೆ ನಡೆಯುತ್ತಿದೆ. ಸರ್ಕಾರ ರಚನೆಯ ಸಂದರ್ಭದಲ್ಲಿ ಅಧಿಕಾರ ಹಂಚಿಕೆ ಕುರಿತು ಚರ್ಚೆ ನಡೆದಿದೆ ಎಂದು ಈ ಹಿಂದೆ ಡಿ ಕೆ ಶಿವಕುಮಾರ್ ಹೇಳಿಕೆ ನೀಡಿದ್ದು, ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ನಂಬರ್ ತಿಂಗಳಿಗೆ ಎರಡೂವರೆ ವರ್ಷ ಪೂರೈಸಲಿದೆ. ಹೀಗಾಗಿ ಕೈ ಪಾಳಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ಡಿ ಕೆ ಶಿವಕುಮಾರ್ ಬಣದ ಶಾಸಕರು ಬಹಿರಂಗವಾಗಿ ಹೇಳಿಕೆ ನೀಡಿದ್ದು, ಇದೀಗ ಮತ್ತೆ ಐದು ವರ್ಷ ನಾನೇ ಸಿಎಂ ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐದು ವರ್ಷ ತಾವೇ ಸಿಎಂ ಎಂದು ಪ್ರತಿಪಾದಿಸುತ್ತಿದ್ದಂತೆ ಮುಖ್ಯಮಂತ್ರಿ ಹುದ್ದೆಯ ಪ್ರಮುಖ ಆಕಾಂಕ್ಷಿಯಾಗಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು, ಅದಕ್ಕೆ ತಮ್ಮ ಅಭ್ಯಂತರವಿಲ್ಲ ಮತ್ತು ಮುಖ್ಯಮಂತ್ರಿಯನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವೇ ಐದು ವರ್ಷ ಸಿಎಂ ಆಗಿರುವುದಾಗಿ ತಿಳಿಸಿರುವ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಮಾತನಾಡಿ, ನಾನು ಪ್ರತಿ ಬಾರಿ ಕರ್ನಾಟಕಕ್ಕೆ ಬಂದಾಗಲೂ ಇದೇ ಪ್ರಶ್ನೆ, ಇದೇ ಅಜೆಂಡಾ ಇರುತ್ತದೆ. ನಮ್ಮ ಪಕ್ಷದಲ್ಲಿ ಏನಾಗಬೇಕು ಎಂಬ ತೀರ್ಮಾನ ಮಾಡುವ ಸಾಮರ್ಥ್ಯ ಕಾಂಗ್ರೆಸ್ ಪಕ್ಷಕ್ಕೆ ಇದೆ. ಈ ತೀರ್ಮಾನ ಮಾಡುವ ಅಧಿಕಾರವನ್ನು ನಮಗೆ ಬಿಡಿ. ಅಗತ್ಯ ಬಿದ್ದಾಗ ಪಕ್ಷ ತೀರ್ಮಾನ ಮಾಡಲಿದೆ ಎಂದು ತಿಳಿಸಿದರು.

ಇನ್ನೂ ಮಲ್ಲಿಕಾರ್ಜುನ ಖರ್ಗೆ ಅವರ ಆರೋಗ್ಯ ವಿಚಾರಿಸಿದ ವೇಣುಗೋಪಾಲ್ ಅವರು, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಆರೋಗ್ಯ ಸುಧಾರಿಸುತ್ತಿದೆ. ಶ್ರಮಜೀವಿಯಾದ ಅವರು ವಿಶ್ರಾಂತಿ ಪಡೆಯಲು ಮನವಿ ಮಾಡಿದ್ದೇವೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ತಿಳಿಸಿದರು.
ಆರೋಗ್ಯ ಸಮಸ್ಯೆಯಿಂದ ಚಿಕಿತ್ಸೆ ಪಡೆದಿರುವ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಆರೋಗ್ಯ ವಿಚಾರಿಸಲು ಭೇಟಿಯಾಗಿದ್ದೇವು. ಈಗ ಅವರ ಆರೋಗ್ಯ ಸುಧಾರಿಸುತ್ತಿದೆ. ನಮ್ಮ ಅಧ್ಯಕ್ಷರು ಶ್ರಮಜೀವಿ. ದಿನದ 24 ತಾಸು ಕೂಡ ಪಕ್ಷಕ್ಕಾಗಿ ದುಡಿಯುತ್ತಾರೆ. ಎಲ್ಲೇ ಅವರ ಉಪಸ್ಥಿತಿ ಬಯಸಿದರೂ ಅವರು ಪಕ್ಷದ ಕಾರ್ಯಕ್ರಮಗಳಿಗೆ ತೆರಳುತ್ತಿದ್ದರು. ಅದು ಈಶಾನ್ಯ ರಾಜ್ಯಗಳಾಗಲಿ, ಯಾವುದೇ ಮೂಲೆ ಇದ್ದರೂ ಅವರು ತೆರಳುತ್ತಿದ್ದರು ಎಂದರು.
ಅವರು ಮತ್ತೆ ಪಕ್ಷದ ಕೆಲಸದಲ್ಲಿ ತೊಡಗಿಸಿಕೊಳ್ಳಲು ಉತ್ಸುಕರಾಗಿದ್ದು, ಆರೋಗ್ಯ ಗಮನಿಸಿಕೊಂಡು ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳುವಂತೆ ನಾವು ಮನವಿ ಮಾಡಿದ್ದೇವೆ. ಸೋನಿಯಾ ಗಾಂಧಿ ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪ್ರತಿನಿತ್ಯ ಖರ್ಗೆ ಅವರ ಸಂಪರ್ಕದಲ್ಲಿ ಇದ್ದಾರೆ. ಅವರ ಆರೋಗ್ಯ ವಿಚಾರಿಸುತ್ತಿದ್ದಾರೆ ಎಂದು ತಿಳಿಸಿದರು.












Click it and Unblock the Notifications