Government Employees:ತಕ್ಷಣ ಸ್ಪಂದಿಸಲು ಸರ್ಕಾರಕ್ಕೆ ಸರ್ಕಾರಿ ನೌಕರರ ಸಂಘ ಆಗ್ರಹ!
ಬೆಂಗಳೂರು, ನವೆಂಬರ್ 13: KASS ಯೋಜನೆಗೆ ಒಳಪಡುವ ನೌಕರರಿಗೆ ನೋಂದಾಯಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪ್ರಾರಂಭಿಸಲು ಆಸ್ಪತ್ರೆಗಳಿಂದ ಸಲ್ಲಿಸಲಾಗುವ ಪ್ರಸ್ತಾವನೆಗಳಿಗೆ KASS ನಿಂದ ಅನುಮೋದನೆ ನೀಡುವಲ್ಲಿ ವಿಳಂಬವಾಗುತ್ತಿರುವ ಕುರಿತು ರಾಜ್ಯಾಧ್ಯಕ್ಷರಾದ ಸಿ.ಎಸ್. ಷಡಾಕ್ಷರಿ ಅವರು ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.
ಕರ್ನಾಟಕ ಸರ್ಕಾರವು ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಕುಟುಂಬ ಸದಸ್ಯರ ಆರೋಗ್ಯ ರಕ್ಷಣೆಗಾಗಿ 2025 ಅಕ್ಟೋಬರ್ 1ರಿಂದ "ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ" (KASS) ಅನ್ನು ಜಾರಿಗೆ ತಂದಿದೆ. ಆದರೆ, ಈ ಯೋಜನೆಯಡಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಆರಂಭಿಸಲು ಅಗತ್ಯವಿರುವ ಪೂರ್ವಾನುಮತಿಯು 24 ರಿಂದ 48 ಗಂಟೆಗಳವರೆಗೆ ವಿಳಂಬವಾಗುತ್ತಿರುವುದು ತೀವ್ರ ಗೊಂದಲಕ್ಕೆ ಕಾರಣವಾಗಿದೆ. ತುರ್ತು ಚಿಕಿತ್ಸೆ ಅಗತ್ಯವಿರುವ ಸಂದರ್ಭಗಳಲ್ಲಿ ನೌಕರರು ಮತ್ತು ಅವರ ಕುಟುಂಬಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಆರೋಪಿಸಿದೆ.

KASS ಯೋಜನೆಗೆ ನೋಂದಾಯಿಸಿಕೊಂಡಿರುವ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಸರ್ಕಾರಿ ನೌಕರರು ದಾಖಲಾದ ಸಂದರ್ಭಗಳಲ್ಲಿ ಚಿಕಿತ್ಸೆ ಪ್ರಾರಂಭಿಸುವ ಪೂರ್ವದಲ್ಲಿ KASS ನ ಅನುಮೋದನೆಗೆ ಪಡೆಯಬೇಕಾಗಿರುತ್ತದೆ.
ಚಿಕಿತ್ಸೆಗೆ ಅನುಮೋದನೆ ಕೋರಿ ಸಲ್ಲಿಸಲ್ಪಡುವ ಪ್ರಸ್ತಾವನೆಗಳಿಗೆ KASS ಅನುಮೋದನೆ ನೀಡುವಲ್ಲಿ ಕನಿಷ್ಠ 24 ರಿಂದ 48 ಗಂಟೆಗಳ ಕಾಲಾವಕಾಶವನ್ನು ತೆಗೆದುಕೊಳ್ಳಲಾಗುತ್ತಿದೆ. ಇದರಿಂದಾಗಿ ತುರ್ತು ಸಂದರ್ಭದಲ್ಲಿ ಚಿಕಿತ್ಸೆ ಪಡೆಯಲು ನೌಕರರಿಗೆ ತೊಂದರೆಯಾಗುತ್ತಿರುವುದಲ್ಲದೆ, ಅನಗತ್ಯ ಕಾಯುವಂತಹ ಪರಿಸ್ಥಿತಿ ಇದೆ.
ತಾಂತ್ರಿಕ ಕಾರಣಗಳಿಂದಾಗಿ ಈ ಯೋಜನೆಗೆ ನೋಂದಾಯಿಸಿಕೊಳ್ಳಲು ಸಾಧ್ಯವಾಗದೇ ಇರುವ ನೌಕರರಿಗೂ ಸಹ ತುರ್ತು ಸಂದರ್ಭಗಳಲ್ಲಿ ಚಿಕಿತ್ಸೆಗೆ ಅವಕಾಶ ನೀಡಿ, ಚಿಕಿತ್ಸೆ ಪಡೆಯುತ್ತಿರುವಾಗಲೇ ಯೋಜನೆಗೆ ನೋಂದಾಯಿಸಿಕೊಳ್ಳುವ ವ್ಯವಸ್ಥೆ ಕಲ್ಪಿಸುವುದು ಅವಶ್ಯವಿರುತ್ತದೆ. ಆದ್ದರಿಂದ, ರಾಜ್ಯ ಸರ್ಕಾರದ ನೋಂದಾಯಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ದಾಖಲಾಗುವ ನೌಕರರ ಚಿಕಿತ್ಸೆಗೆ ಸಂಬಂಧಿಸಿದಂತೆ ಆಸ್ಪತ್ರೆಗಳಿಂದ ಸಲ್ಲಿಸಲಾಗುವ ಪ್ರಸ್ತಾವನೆಗಳಿಗೆ ಅನಗತ್ಯ ವಿಳಂಬ ಮಾಡದೆ ಪ್ರಸ್ತಾವನೆ ಸಲ್ಲಿಸಿದ ಒಂದು ಗಂಟೆಯೊಳಗೆ KASS ನಿಂದ ಅನುಮೋದನೆ ನೀಡುವಂತೆ ಸಂಬಂಧಪಟ್ಟವರಿಗೆ ನಿರ್ದೇಶನ ನೀಡಲು ತಮ್ಮಲ್ಲಿ ಕೋರಿದೆ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ ಎಸ್ ಷಡಾಕ್ಷರಿ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕರ್ನಾಟಕ ಸರ್ಕಾರವು ಸರ್ಕಾರಿ ನೌಕರರ ಹಿತದೃಷ್ಟಿಯಿಂದ ಅಕ್ಟೋಬರ್ 1, 2025 ರಿಂದ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೆ ತಂದಿದ್ದರೂ, ಅನುಷ್ಠಾನದಲ್ಲಿನ ಈ ರೀತಿಯ ವಿಳಂಬ ನೀತಿಯು ಯೋಜನೆಯ ಮೂಲ ಉದ್ದೇಶವನ್ನೇ ವಿಫಲಗೊಳಿಸುತ್ತಿದೆ ಎಂದು ಸಂಘವು ಪತ್ರದಲ್ಲಿ ಬೇಸರ ವ್ಯಕ್ತಪಡಿಸಿದೆ.












Click it and Unblock the Notifications