Karwar assembly elections: ಈ ಬಾರಿ ಗೆಲ್ತಾರಾ ಸತೀಶ್ ಸೈಲ್?
ಹಳಿಯಾಳ, ಮಾರ್ಚ್ 29: ಉತ್ತರ ಕನ್ನಡ ಜಿಲ್ಲೆ ಪ್ರಮುಖ ವಿಧಾನಸಭಾ ಕ್ಷೇತ್ರವಾದ ಕಾರವಾರದಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆ ಬಿರುಸಾಗಿದೆ. ಸದ್ಯ ಇಲ್ಲಿ ಕಾಂಗ್ರೆಸ್‌ನಿಂದ ಸತೀಶ್ ಕೃಷ್ಣ ಸೈಲ್ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಕ್ಕಿದೆ. ಬಿಜೆಪಿ ಇನ್ನಷ್ಟೇ ಟಿಕೆಟ್ ಘೋಷಣೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಕ್ಷೇತ್ರದ ಚಿತ್ರಣ ಇಲ್ಲಿದೆ.
ಸದ್ಯ ಕಾರವಾರದಲ್ಲಿ ಶಾಸಕಿ ರೂಪಾಯಿ ನಾಯ್ಕ್ ಶಾಸಕಿಯಾಗಿ ಅಧಿಕಾರ ನಡೆಸುತ್ತಿದ್ದಾರೆ. ಕಾರವಾರ ಅಂಕೋಲಾದಲ್ಲಿ ಒಮ್ಮೆ ಗೆದ್ದವರು ಮತ್ತೆ ಗೆದ್ದಿರುವುದು ಕಡಿಮೆ. ಆದರೆ ಮತ್ತೊಮ್ಮೆ ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿ ಹಾಲಿ ಶಾಸಕಿ ರೂಪಾಲಿ ನಾಯ್ಕ ಓಡಾಟ ನಡೆಸಿ, ಸಭೆ ಚುರುಕುಗೊಳಿಸಿದ್ದಾರೆ. ಇವರೇ ಈ ಬಾರಿಯೂ ಬಿಜೆಪಿಯಿಂದ ನಿಂತರೆ ಪ್ರಬಲ ಪೈಪೋಟಿ ಏರ್ಪಡುತ್ತದೆ.

ಕ್ಷೇತ್ರ ಮಾಜಿ ಶಾಸಕ ಸತೀಶ್ ಸೈಲ್ ಮತ್ತೆ ಕಾಂಗ್ರೆಸ್‌ನಿಂದ ಸ್ಪರ್ಧೆಗೆ ಮುಂದಾಗಿದ್ದು, ಹಲವು ಆಕಾಂಕ್ಷಿಗಳ ನಡುವೆ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಆದರೆ ಕಳೆದ ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿ ವೈಯಕ್ತಿಕ ವರ್ಚಸ್ಸಿನೊಂದಿಗೆ ರೂಪಾಲಿ ನಾಯ್ಕ ವಿರುದ್ಧ 15 ಸಾವಿರ ಮತಗಳ ಅಂತರದಿಂದ ಆನಂದ್ ಅಸ್ನೋಟಿಕರ್ ಪರಾಜಿತಗೊಂಡಿದ್ದರು.
ಕಳೆದ ಬಾರಿ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತಾದರೂ ಬಿಜೆಪಿ ಹಿಂದೂಪರ ಅಲೆಯಲ್ಲಿ ಕಾಂಗ್ರೆಸ್ ಜೆಡಿಎಸ್ ವಿರುದ್ಧ ಭರ್ಜರಿ ಜಯ ಸಾಧಿಸಿತ್ತು. ಆದರೆ ಈ ಬಾರಿ ಬಿಜೆಪಿಗೆ ಅಷ್ಟು ಸುಲಭದಲ್ಲಿ ಕ್ಷೇತ್ರವಿಲ್ಲ. ಶಾಸಕಿ ರೂಪಾಲಿ ನಾಯ್ಕ ಅವರಿಗೆ ಟಿಕೆಟ್ ನೀಡಿದರೂ ಜಿಲ್ಲೆಯ ಸ್ವಪಕ್ಷೀಯ ಮುಖಂಡರುಗಳೊಂದಿಗಿನ ಅಂತರ, 40% ಕಮಿಷನ್ ಆರೋಪ, ಆಡಳಿತ ವಿರೋಧಿ ಅಲೆ ಹಾಗೂ ಸ್ವಪಕ್ಷೀಯರ ಕಡೆಗಣನೆ ಮುಳ್ಳಾಗುವ ಸಾಧ್ಯತೆ ಇದೆ.
2018ರ ವಿಧಾನಸಭಾ ಚುನಾವಣೆಯಲ್ಲಿ ಪರೇಶ್ ಮೇಸ್ತ ಸಾವಿನ ವಿಚಾರ, ಅಂಕೋಲಾದ ಬಂಡಿಹಬ್ಬದಲ್ಲಿ ಹರಕೆ ಅರ್ಪಿಸಲು ಆದ ಅಡ್ಡಿ ಬಿಜೆಪಿಯ ದೊಡ್ಡ ಅಂತರದ ಗೆಲುವಿಗೆ ಕಾರಣವಾಗಿತ್ತು. ಇವೆರಡೂ ವಿಷಯಗಳನ್ನು ಭಾವನಾತ್ಮಕವಾಗಿ ಬಳಕೆ ಮಾಡಿಕೊಂಡ ಬಿಜೆಪಿ ಗೆಲುವು ಸಾಧಿಸಿತ್ತು. 2013ರ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿಯೂ ದೊಡ್ಡ ಮಟ್ಟದ ಗೆಲುವು ಸಾಧಿಸಿದ್ದ ಸತೀಶ್ ಸೈಲ್ ಬಳಿಕ ಕಾಂಗ್ರೆಸ್ ಸೇರಿದ್ದರು. 2018ರ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿ ಮೂರನೆ ಸ್ಥಾನವನ್ನಷ್ಟೆ ಪಡೆದುಕೊಂಡಿದ್ದರು.

ಇನ್ನು ಜೆಡಿಎಸ್ ಮುಖಂಡ ಆನಂದ್ ಅಸ್ನೋಟಿಕರ್ ಕಳೆದ ಬಾರಿ ಸೋತ ಬಳಿಕ ಕ್ಷೇತ್ರದಲ್ಲಿ ಕಾಣಿಸಿಕೊಂಡಿರಲಿಲ್ಲ. ಆಗೊಮ್ಮೆ ಈಗೊಮ್ಮೆ ಪತ್ರಿಕಾ ಹೇಳಿಕೆ ನೀಡಿ ಇರುವಿಕೆ ಸಾಬಿತುಪಡಿಸುತ್ತಿದ್ದ ಅವರು ಕಳೆದ ಕೆಲ ತಿಂಗಳುಗಳ ಹಿಂದೆ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿ ಮತ್ತೆ ತೆರೆ ಮರೆಗೆ ಜಾರಿದ್ದಾರೆ. ಇದರಿಂದ ಅವರ ಬೆಂಬಲಿಗರು ಇನ್ನೂ ಗೊಂದಲದಲ್ಲಿಯೇ ಇದ್ದಾರೆ.
ಕಾರವಾರ ವಿಧಾನಸಭಾ ಕ್ಷೇತ್ರದಲ್ಲಿ ಹಾಲಕ್ಕಿ ಸಮುದಾಯ, ಕೋಮಾರಪಂಥ, ಮೀನುಗಾರರು ಪ್ರಬಲ ಸಮುದಾಯವಾಗಿದೆ. ಕ್ಷೇತ್ರದಲ್ಲಿ ಪ್ರತಿ ಬಾರಿ ಜಾತಿ ಲೆಕ್ಕಾಚರವು ಮುನ್ನೆಲೆಗೆ ಬಂದರೂ ಈವರೆಗೂ ಜಾತಿ ಆಧಾರದ ಮೇಲೆ ಆಯ್ಕೆಯಾದವರು ಇಲ್ಲ ಎನ್ನುವ ವಿಚಾರ ಮುಖ್ಯವಾಗಿದೆ. 2018 ವಿಧಾನಸಭಾ ಚುನಾವಣೆಯಲ್ಲಿ ರೂಪಾಲಿ ನಾಯ್ಕ ಬಿಜೆಪಿಯಿಂದ ಸ್ಪರ್ಧಿಸಿ 60,339 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸತೀಶ್ ಸೈಲ್ 45,071 ಮತಗಳನ್ನು ಪಡೆದಿದ್ದರು. ಇನ್ನು ಬಿಜೆಪಿಗೆ ಜಿದ್ದಾಜಿದ್ದಿಯ ಪೈಪೋಟಿ ನೀಡಿದ್ದ ಜೆಡಿಎಸ್ ಅಭ್ಯರ್ಥಿ 46,275 ಮತಗಳನ್ನು ಪಡೆದಿದ್ದರು.












Click it and Unblock the Notifications