'ಒಕ್ಕಲಿಗ ವಿರೋಧಿ' ಆರೋಪಕ್ಕೆ ಕಾಂಗ್ರೆಸ್ ಕೊಟ್ಟ ಖಡಕ್ ಉತ್ತರವೇನು?
ಜೆಡಿಎಸ್ ಪಕ್ಷವು ಕಾಂಗ್ರೆಸ್ ಅನ್ನು ಒಕ್ಕಲಿಗರ ವಿರೋಧಿ ಎಂದು ಕರೆದಿದೆ. ಇದರಿಂದ ಕೆಂಡಾಮಂಡಲವಾಗಿರುವ ಕಾಂಗ್ರೆಸ್, ಒಕ್ಕಲಿಗರಿಗಾಗಿ ಏನು ಮಾಡಿದೆ ಎಂದು ಟ್ವೀಟ್‌ನಲ್ಲಿ ಪಟ್ಟಿ ಮಾಡಿ ಕೌಂಟರ್ ನೀಡಿದೆ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರು ನಾಮಕರಣ ಮಾಡಿದ್ದು ಕಾಂಗ್ರೆಸ್ ಸರ್ಕಾರ ತಿರುಗೇಟು ನೀಡಿದೆ.
ಜೆಡಿಎಸ್‌ನವರೇ, ಯಾರು ಒಕ್ಕಲಿಗರ ವಿರೋಧಿಗಳು? ಸಿದ್ದರಾಮಯ್ಯ ಅವರ ಅಧ್ಯಕ್ಷತೆ ಹಾಗೂ ಡಿ.ಕೆ.ಶಿವಕುಮಾರ್ ಅವರಿಂದಲೇ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ರಚನೆ ಮಾಡಿದ್ದು ಕಾಂಗ್ರೆಸ್ ಸರ್ಕಾರ. ಕೆಂಪೇಗೌಡ ಪ್ರಾಧಿಕಾರಕ್ಕೆ ಮೆಯೋಹಾಲ್‌ನಲ್ಲಿ ಕಚೇರಿ ನೀಡಿದ್ದು ನಮ್ಮ ಕಾಂಗ್ರೆಸ್ ಸರ್ಕಾರ ಎಂದು ಹೇಳಿದೆ.

ಹೊಸದಾಗಿ ಬೆಳಕಿಗೆ ಬಂದ ಕೆಂಪೇಗೌಡರ ಸಮಾಧಿಯನ್ನು ಸಂರಕ್ಷಿತ ಸ್ಮಾರಕ ಎಂದು ಘೋಷಣೆ ಮಾಡಿದ್ದು ಕಾಂಗ್ರೆಸ್ ಸರ್ಕಾರ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಪ್ರಥಮ ಬಾರಿಗೆ ಸರ್ಕಾರದಿಂದ ಕೆಂಪೇಗೌಡರ ಜಯಂತಿ ಆಚರಣೆ ಮಾಡಿದ್ದು ಕಾಂಗ್ರೆಸ್ ಸರ್ಕಾರ. ರಾಜ್ಯದ ಎಲ್ಲ ತಾಲ್ಲೂಕು, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೆಂಪೇಗೌಡರ ಜಯಂತಿ ಆಚರಿಸುವಂತೆ ಆದೇಶಿಸಿದ್ದು ಕಾಂಗ್ರೆಸ್ ಸರ್ಕಾರ ಎಂದು ಜೆಡಿಎಸ್ ಆರೋಪಕ್ಕೆ ಉತ್ತರ ನೀಡಿದೆ.
ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸುಮನಹಳ್ಳಿಯ ಬಳಿ 5 ಎಕರೆ ಜಮೀನು ಮಂಜೂರು ಮಾಡಿದ್ದು ಕಾಂಗ್ರೆಸ್ ಸರ್ಕಾರ. ಬಜೆಟ್‌ನಲ್ಲಿ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರಕ್ಕೆ 2 ವರ್ಷಗಳಲ್ಲಿ ₹10 ಕೋಟಿ ಮೀಸಲಿಟ್ಟಿದ್ದು ಕಾಂಗ್ರೆಸ್ ಸರ್ಕಾರ. ಬೆಂಗಳೂರು ವಿ.ವಿ ಆವರಣದಲ್ಲಿ ಕೆಂಪೇಗೌಡ ಅಧ್ಯಯನ ಪೀಠಕ್ಕೆ ₹50 ಕೋಟಿ ಬಿಡುಗಡೆ ಮಾಡಿದ್ದು ಕಾಂಗ್ರೆಸ್ ಸರ್ಕಾರ ಎಂದು ತಮ್ಮ ಕೆಲಸಗಳನ್ನು ಸಮರ್ಥಿಸಿಕೊಂಡಿದೆ.

ಈಗ ಹೇಳಿ ಯಾರು ಒಕ್ಕಲಿಗ ವಿರೋಧಿಗಳು? ಒಕ್ಕಲಿಗ ಸಮುದಾಯವನ್ನು ಬಳಸಿಕೊಂಡು ರಾಜ್ಯ, ರಾಷ್ಟ್ರ ಮಟ್ಟದ ಎಲ್ಲ ಅಧಿಕಾರ ಅನುಭವಿಸಿ ಸಮುದಾಯಕ್ಕೆ ಶೂನ್ಯ ಕೊಡುಗೆ ನೀಡಿದ ಸೋಕಾಲ್ಡ್ ಸೆಕ್ಯೂಲರ್ ಪಕ್ಷಕ್ಕೆ ಕಾಂಗ್ರೆಸ್ ಪಕ್ಷದ ಕಡೆ ಬೆರಳು ಮಾಡುವ ಯಾವ ಅರ್ಹತೆ ಇದೆ? ಎಂದು ಹರಿಹಾಯ್ದಿದೆ.
ಜೆಡಿಎಸ್ ಮಾಡಿದ್ದ ಆರೋಪವೇನು?: ಡಿ.ಕೆ.ಶಿವಕುಮಾರ್ ಅವರನ್ನು ಜೆಡಿಎಸ್ ಒಕ್ಕಲಿಗ ವಿರೋಧಿ ಎಂದು ಕರೆದಿತ್ತು. ಒಕ್ಕಲಿಗ ಸಮುದಾಯ ಮತ್ತು ಪೂಜ್ಯ ಸ್ವಾಮೀಜಿ ಅವರಿಗೆ ನಿಮ್ಮ ಸರ್ಕಾರ ಮಾಡಿಬಿಟ್ಟ ಅಪಚಾರ ಮುಚ್ಚಿಟ್ಟುಕೊಳ್ಳಲು ಯಾಕೆ ಇನ್ನೊಬ್ಬರ ಮೇಲೆ ಕೆಸರೆರೆಚುತ್ತಿದ್ದೀರಿ? ಎಂದು ಪ್ರಶ್ನಿಸಿತ್ತು.

ಸ್ವಾಮೀಜಿ ಅವರ ಮೇಲೆ ನೀವು ಎಫ್ಐಆರ್ ಹಾಕಿದ್ದು ಈಗ ಸಮುದಾಯದ ಸಿಟ್ಟಿಗೆ ಕಾರಣವಾಗಿದೆ. ಒಕ್ಕಲಿಗರ ಆಕ್ರೋಶಕ್ಕೆ ನೀವು ಗುರಿಯಾಗಿದ್ದೀರಿ. ಬೀಸುವ ದೊಣ್ಣೆಯಿಂದ ಪಾರಾಗಲು ಜೆಡಿಎಸ್ ಬಗ್ಗೆ ಹೊಸ ಹುಳುಕು ಹುಡುಕುತ್ತಿದ್ದೀರಿ ಎಂದು ಕಿಡಿಕಾರಿತ್ತು.
ಜೆಡಿಎಸ್ ಸರ್ಕಾರವಿದ್ದಾಗ ಪರಮಪೂಜ್ಯರಾದ ಬಾಲಗಂಗಾಧರನಾಥ ಸ್ವಾಮೀಜಿ ಅವರ ಮೇಲೆ ಕೇಸು ಹಾಕಲಾಗಿತ್ತು ಎಂದು ನೀವು ಬಡಬಡಿಸಿದ್ದೀರಿ! ಹಳೆಯ ವಿಷಯ ಕೆದಕಿದ ನಿಮಗೆ ಆ ಪ್ರಕರಣ ಏನು? ಅದು ಮುಂದೇನಾಯಿತು? ಎನ್ನುವ ಮಾಹಿತಿ ಇಲ್ಲವೇ? ಆ ಪ್ರಕರಣಕ್ಕೂ ಜೆಡಿಎಸ್ ಪಕ್ಷಕ್ಕೂ ಸಂಬಂಧ ಏನು? ಮುಂದೆ ಆ ಪ್ರಕರಣ ರದ್ದಾಯಿತು, ನಿಮಗೆ ಗೊತ್ತಿಲ್ಲವೇ? ಎಂದು ಹಳೆಯ ಪ್ರಕರಣವನ್ನು ಉಲ್ಲೇಖಿಸಿತ್ತು. ಇದಕ್ಕೆ ಕಾಂಗ್ರೆಸ್ ಕೂಡ ತಿರುಗೇಟು ನೀಡಿದೆ.












Click it and Unblock the Notifications