ಮತ್ತೆ ಆಪರೇಷನ್ ಕಮಲ, ನಾಲ್ವರು ಶಾಸಕರು ಬಿಜೆಪಿಗೆ?

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 14 : ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯಾಧ್ಯಕ್ಷರಾಗಿ ನೇಮಕವಾಗುತ್ತಿದ್ದಂತೆ ಆಪರೇಷನ್ ಕಮಲ ಆರಂಭವಾಗಿದೆ?. ಮೂವರು ಜೆಡಿಎಸ್ ಮತ್ತು ಒಬ್ಬರು ಕಾಂಗ್ರೆಸ್ ಶಾಸಕರು ಕಮಲ ಪಕ್ಷ ಸೇರಲು ತಯಾರಿ ನಡೆಸಿದ್ದಾರೆ ಎಂಬುದು ಗುರುವಾರ ಬೆಳಗ್ಗೆಯ ಬ್ರೇಕಿಂಗ್ ನ್ಯೂಸ್.

ಗುರುವಾರ ಬೆಳಗ್ಗೆ ಹೊರ ಬಂದಿರುವ ಈ ಸುದ್ದಿ ಭಾರೀ ಚರ್ಚೆ ಹುಟ್ಟು ಹಾಕಿದೆ. ಡಾಲರ್ಸ್ ಕಾಲೋನಿಯ ತಮ್ಮ ನಿವಾಸದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿರುವ ಯಡಿಯೂರಪ್ಪ ಅವರು, 'ಯಾರೇ ಪಕ್ಷಕ್ಕೆ ಬಂದರೂ ಸ್ವಾಗತ. ಎಲ್ಲಾ ನಾಯಕರ ಜೊತೆ ಚರ್ಚಿಸಿ, ಪಕ್ಷಕ್ಕೆ ಸೇರಿಸಿಕೊಳ್ಳಲಾಗುತ್ತದೆ' ಎಂದು ಹೇಳಿದರು. ['ಪರಿಷತ್ ಚುನಾವಣೆ ಸೋಲಿನ ಹೊಣೆ ಹೊರುವುದಿಲ್ಲ']

bjp

ಸದ್ಯದ ಮಾಹಿತಿ ಪ್ರಕಾರ ಬುಧವಾರ ರಾತ್ರಿ ಬೆಂಗಳೂರಿನ ಪ್ರಭಾವಿ ಬಿಜೆಪಿ ನಾಯಕರ ನಿವಾಸದಲ್ಲಿ ಆಪರೇಷನ್ ಕಮಲದ ಕುರಿತು ಮೊದಲ ಹಂತದ ಮಾತುಕತೆ ನಡೆದಿದೆ. ಶಾಸಕರು ಪಕ್ಷ ಸೇರ್ಪಡೆ ಬಗ್ಗೆ ಒಲವು ಹೊಂದಿದ್ದಾರೆ. ಆದರೆ, ಈ ಕುರಿತು ಅಂತಿಮ ತೀರ್ಮಾನವಾಗಿಲ್ಲ. [ಎಚ್ಡಿಕೆ 'ಕಾಂಗ್ರೆಸ್ ಏಜೆಂಟ್' ಹೇಳಿಕೆ ವಿರೋಧಿಸಿದ ಬಾಲಕೃಷ್ಣ]

ಯಾವ ಶಾಸಕರು? : ಮೂವರು ಜೆಡಿಎಸ್ ಶಾಸಕರು ಮತ್ತು ಒಬ್ಬರು ಕಾಂಗ್ರೆಸ್ ಪಕ್ಷದ ಶಾಸಕರು ಬಿಜೆಪಿಗೆ ಬರುವ ಸಾಧ್ಯತೆ ಇದೆ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದ ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ, ನಾಗಮಂಗಲ ಶಾಸಕ ಚೆಲುವರಾಯಸ್ವಾಮಿ ಮತ್ತು ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಅವರು ಬಿಜೆಪಿಯತ್ತ ಬರಲಿದ್ದಾರೆ ಎಂಬುದು ಗುರುವಾರ ಬೆಳಗ್ಗೆಯ ಸುದ್ದಿ. [ಯಡಿಯೂರಪ್ಪ ಮುಂದಿರುವ 6 ಪ್ರಮುಖ ಸವಾಲುಗಳು]

2013ರ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಸಿ.ಪಿ.ಯೋಗೇಶ್ವರ ಅವರು ನಂತರ ಕಾಂಗ್ರೆಸ್ ಸೇರಿದ್ದರು. ಅವರು ಸಹ ಬಿಜೆಪಿಗೆ ಬರಲು ಸಿದ್ಧರಾಗಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ.

operation kamala

ಆದರೆ, ಯಾವುದೇ ಶಾಸಕರು ಈ ಕುರಿತು ಪ್ರತಿಕ್ರಿಯೆ ನೀಡಿಲ್ಲ. ರಾಜ್ಯದಲ್ಲಿ ಈಗ ಯಾವುದೇ ಚುನಾವಣೆಗಳು ಇಲ್ಲ. ವಿಧಾನಸಭೆ ಚುನಾವಣೆ ಇರುವುದು 2018ಕ್ಕೆ ಆದ್ದರಿಂದ, ಶಾಸಕರು ಈಗ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಲಿದ್ದಾರೆಯೇ? ಎಂಬುದು ಸದ್ಯದ ಪ್ರಶ್ನೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former CM B.S.Yeddyurappa has appointed as Karnataka BJP president. The party begins operation Kamal again. 3 JDS and 1 Congress MLA's may join BJP.
Please Wait while comments are loading...