Winter Session: ಸರ್ಕಾರಿ ಹುದ್ದೆಗಳ ನೇಮಕಾತಿ, ಪರೀಕ್ಷಾ ಶುಲ್ಕದ ಬಗ್ಗೆ ಬಿಗ್ ಗುಡ್‌ನ್ಯೂಸ್
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರ ವಿಳಂಬ ತೋರುತ್ತಿದೆ ಎಂದು ಇತ್ತೀಚೆಗೆ ಹಲವು ಜಿಲ್ಲೆಗಳಲ್ಲಿ ಬೃಹತ್ ಪ್ರತಿಭಟನೆ ಮೂಲಕ ಅಭ್ಯರ್ಥಿಗಳು ಬಿಸಿ ಮುಟ್ಟಿಸಿದ್ದರು. ಇಂದು ಬೆಳಗಾವಿಯಲ್ಲಿ ಆರಂಭವಾಗಿರುವ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರಿ ಹುದ್ದೆಗಳ ನೇಮಕಾತಿ ಹಾಗೂ ಪರೀಕ್ಷಾ ಅರ್ಜಿ ಶುಲ್ಕದ ಬಗ್ಗೆ ಮಹತ್ವದ ಚರ್ಚೆ ನಡೆದಿದೆ. 'ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ವಿವಿಧ ಹುದ್ದೆಗಳ ನೇಮಕಾತಿಯ ಪರೀಕ್ಷೆಗಳ ಸಂದರ್ಭದಲ್ಲಿ ಬಡ ಹಾಗೂ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಆರ್ಥಿಕವಾಗಿ ಹೊರೆಯಾಗದಂತೆ ಪರೀಕ್ಷಾ ಶುಲ್ಕವನ್ನು ನಿಗದಿಪಡಿಸಿದೆ' ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಸದನಕ್ಕೆ ಉತ್ತರಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ನಿರಾಣಿ ಹನುಮಂತಪ್ಪ ರುದ್ರಪ್ಪ ಅವರ ಪ್ರಶ್ನೆಗೆ ಸಚಿವ ಸುಧಾಕರ್ ಅಂಕಿ ಅಂಶ ಸಮೇತ ಉತ್ತರ ನೀಡಿದ್ದಾರೆ. '2024ನೇ ಸಾಲಿನಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ರಾಜ್ಯ ಸರ್ಕಾರದ ವಿವಿಧ ಹುದ್ದೆಗಳ ನೇಮಕಾತಿಗಾಗಿ 17 ನೇಮಕಾತಿ ಅಧಿಸೂಚನೆಗಳನ್ನು ಪೂರ್ಣಗೊಳಿಸಿಲ್ಲ. ಕೆಲವೇ ಅಧಿಸೂಚನೆಗಳನ್ನು ಹೊರಡಿಸಿ, ಶುಲ್ಕ ಸಂಗ್ರಹಿಸಿದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಸರ್ಕಾರ ಯಾವುದೇ ಅನುದಾನ ನೀಡುವುದಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

'ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲು ಪರೀಕ್ಷಾ ಕೇಂದ್ರಗಳಿಗೆ ತಗುಲುವ ವೆಚ್ಚಗಳು, ಗೌಪ್ಯತಾ ವೆಚ್ಚ, ಮುದ್ರಣ, ಗೌಪ್ಯತಾ ಬಂಡಲುಗಳನ್ನು ಆಯಾ ಪರೀಕ್ಷಾ ಕೇಂದ್ರಗಳಿಗೆ ರವಾನಿಸುವುದು, ಪರೀಕ್ಷೆ ಮುಗಿದ ನಂತರ ಬಂಡಲುಗಳನ್ನು ಪ್ರಾಧಿಕಾರಕ್ಕೆ ತೆಗೆದುಕೊಂಡು ಬರುವುದು, ಪರೀಕ್ಷಾ ಕಾರ್ಯಗಳಲ್ಲಿ ನಿರತರಾಗುವ ಅಧಿಕಾರಿ, ಸಿಬ್ಬಂದಿಗೆ ಗೌರವಧನ ಭರಿಸುವುದು ಮುಂತಾದ ಎಲ್ಲಾ ವೆಚ್ಚಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವೇ ಭರಿಸುತ್ತದೆ' ಎಂದು ವಿವರಿಸಿದ್ದಾರೆ.
'ಕೆಇಎಗೆ ಯಾವುದೇ ಲಾಭ ಇಲ್ಲ'
'ಇತ್ತೀಚಿನ ದಿನಗಳಲ್ಲಿ ಪರೀಕ್ಷೆಗಳನ್ನು ಹೆಚ್ಚಿನ ಪಾರದರ್ಶಕವಾಗಿ ನಡೆಸಲು ಆಧುನಿಕ ತಂತ್ರಜ್ಞಾನ ಬಳಕೆ ಮಾಡುವುದು ಅನಿವಾರ್ಯವಾಗಿದೆ. ಹೀಗಾಗಿ ಅರ್ಜಿಗೆ ನಿಗದಿಪಡಿಸಿರುವ ಅರ್ಜಿ ಶುಲ್ಕದಲ್ಲಿ ಎಲ್ಲ ವೆಚ್ಚಗಳನ್ನು ಭರಿಸುವುದು ಕಷ್ಟಸಾಧ್ಯ. ಅಭ್ಯರ್ಥಿಗಳಿಗೆ ಹೆಚ್ಚಿನ ಆರ್ಥಿಕ ಹೊರೆಯಿಲ್ಲದೆ ಪ್ರಾಧಿಕಾರವು ಪರೀಕ್ಷೆಯನ್ನು ನಡೆಸಲು ಕನಿಷ್ಠ ಮೊತ್ತವನ್ನು ನಿಗದಿಪಡಿಸಿದೆ. ಹೀಗಾಗಿ ಅಭ್ಯರ್ಥಿಗಳಿಂದ ನಿಗದಿಪಡಿಸಿರುವ ಶುಲ್ಕ ಪಡೆಯುವುದು ಅನಿವಾರ್ಯ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುವುದರಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಯಾವುದೇ ಆರ್ಥಿಕ ಲಾಭ ಇರುವುದಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.
'ಶುಲ್ಕ ಹೆಚ್ಚಳವಾಗಿಲ್ಲ'
'ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2022ರಿಂದಲೂ ಇಷ್ಟೇ ನಿಗದಿ ಶುಲ್ಕವನ್ನು ವಿಧಿಸುತ್ತಿದೆ. ಪರೀಕ್ಷೆ ನಡೆಸುವ ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚಾದರೂ ಸಹ ಬಡ ಹಾಗೂ ಗ್ರಾಮೀಣ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಶುಲ್ಕವನ್ನು ಹೆಚ್ಚಿಸಿಲ್ಲ. ಆರ್ಥಿಕ ಹೊರೆಯನ್ನು ತಪ್ಪಿಸಲು ಒಂದೇ ಪಠ್ಯಕ್ರಮವಿರುವ ವಿವಿಧ ಇಲಾಖೆಯ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದರೆ, ಮೊದಲ ಹುದ್ದೆಗೆ ಮಾತ್ರ ಅವರಿಗೆ ಅನ್ವಯಿಸುವ ಪೂರ್ಣ ಅರ್ಜಿ ಶುಲ್ಕ ಪಾವತಿಸಲು ಹಾಗೂ ಹೆಚ್ಚುವರಿ ಹುದ್ದೆಗೆ ಕೇವಲ 100 ರೂಪಾಯಿ ವಿಧಿಸಲಾಗುತ್ತಿದೆ. ರಾಜ್ಯ ಸರ್ಕಾರದಿಂದ ಯಾವುದೇ ಅನುದಾನವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ನೀಡಲಾಗುತ್ತಿಲ್ಲ. ಆದ್ದರಿಂದ, ಕೆಪಿಎಸ್‌ಸಿ ಅಥವಾ ಯುಪಿಎಸ್‌ಸಿ ಮಾದರಿಯಲ್ಲಿ ಶುಲ್ಕ ವಿಧಿಸಲು ಸಾಧ್ಯವಾಗುವುದಿಲ್ಲ' ಎಂದು ಸಚಿವ ಸುಧಾಕರ್ ಮಾಹಿತಿ ನೀಡಿದ್ದಾರೆ.












Click it and Unblock the Notifications