Karnataka Rain: ಭಾರೀ ಮಳೆಗೆ ಕಾರಣವಾದ ವಾಯುಭಾರ ಕುಸಿತ, ಅದರ ಪ್ರಭಾವ-ಚಲನೆ ಈಗ ಹೇಗಿದೆ?
ಬೆಂಗಳೂರು, ಜುಲೈ 21: ಕರ್ನಾಟಕ ರಾಜ್ಯದಲ್ಲಿ ಕಳೆದ ಸುಮಾರು ಎರಡು ವಾರಗಳಿಂದ ಅತ್ಯಧಿಕ ಮಳೆ ಆಗುತ್ತಿದೆ. ದಕ್ಷಿಣ ಒಳನಾಡು ಹೊರತುಪಡಿಸಿದರೆ ಉಳಿದೆಲ್ಲ ಕಡೆ ಮುಂಗಾರು ಆರ್ಭಟ ಜೋರಾಗಿಯೇ ಇದೆ. ನದಿಗಳು ಪ್ರವಾಹ ರೂಪ ತಾಳಿದ್ದು, ಜಲಾಶಯಗಳು ಮೈದುಂಬಿಕೊಂಡಿವೆ. ರಸ್ತೆ, ಸೇತುವೆಗಳು ನೆಲಕಚ್ಚುತ್ತಿವೆ. ಹೆದ್ದಾರಿಗಳಲ್ಲಿ ಸಂಚಾರ ಕಷ್ಟವಾಗುತ್ತಿದೆ. ಇದಕ್ಕೆ ಕಾರಣ, ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿಯಲ್ಲಿ ಉಂಟಾದ ಹವಾಮಾನ ವೈಪರಿತ್ಯ.
ಹಾಗಾದರೆ ಸದ್ಯದ ಪರಿಸ್ಥಿತಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ, ವೈಪರಿತ್ಯದ ಸ್ಥಿತಿ ಹೇಗಿದೆ?, ಯಾವ ಕಡೆಯಿಂದ ಜೋರು ಗಾಳಿ ಬೀಸುತ್ತಿದೆ?, ಹವಾಮಾನ ವೈಪರಿತ್ಯಗಳ ಪ್ರಭಾವ ತಗ್ಗುವುದು ಯಾವಾಗ ಎಂಬ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ..

ಎರಡು ವಾರದ ಹಿಂದೆ ಒಡಿಶಾ ರಾಜ್ಯ ವಾಯುವ್ಯ ಮತ್ತು ಪಕ್ಕದ ಪಶ್ಚಿಮ ಬಂಗಾಳ ಕೊಲ್ಲಿಯ ಸಮುದ್ರ ಮೇಲೆ ವಾಯುಭಾ ಕುಸಿತ ಉಂಟಾಗಿತ್ತು. ಇದರ ತೀವ್ರ ಗಾಳಿಯು ಉತ್ತರ ಆಂಧ್ರಪ್ರದೇಶದ ಕರಾವಳಿ ಮೂಲಕ ಶನಿವಾರ 6 ಗಂಟೆಗಳಲ್ಲಿ ಸುಮಾರು 3 ಕಿಮೀ ವೇಗದಲ್ಲಿ ಪಶ್ಚಿಮ ವಾಯುವ್ಯಕ್ಕೆ ಚಲಿಸಿತು. ಈ ಬದಲಾವಣೆಯು ಸೋಮವಾರವರೆಗೆ ಒಡಿಶಾ ಕರಾವಳಿಯ ಮೇಲೆ ಕೇಂದ್ರೀಕೃತವಾಗಿರಲಿದೆ.
ಹೀಗಾಗಿ ಈ ಎರಡು ರಾಜ್ಯಗಳಲ್ಲಿ ಮಳೆ ಬರುವ ಜೊತೆಗೆ ಬೆಂಗಳೂರು, ಹಳೇ ಮೈಸೂರು ಭಾಗದವರೆಗೆ ಮಳೆ, ಚಳಿ ವಾತಾವರಣ ಕಂಡು ಬರಲಿದೆ.
ಕರ್ನಾಟಕದ ಮೇಲೆ ಅರಬ್ಬಿ ಸಮುದ್ರದ ಸ್ಟ್ರಫ್ ಎಫೆಕ್ಟ್
ಇನ್ನೂ ಒಡಿಶಾ ಪುರಿಯಿಂದ 40 ಕಿಮೀ ವೇಗದ ಗಾಳಿಯು ದಕ್ಷಿಣ-ನೈಋತ್ಯದ ಕಡೆಗೆ ಮತ್ತು 70 ಕಿಮೀ ವೇಗದಲ್ಲಿ ಮತ್ತೊಂದು ಸುಳಿಗಾಳಿಯು ಒಡಿಶಾ ಪೂರ್ವ-ಈಶಾನ್ಯ ಭಾಗದಿಂದ ಛತ್ತೀಸ್‌ಗಢದತ್ತ ಚಲಿಸುವ ಸಾಧ್ಯತೆ ಇದೆ. ಇದು ಸೋಮವಾರದ ಹೊತ್ತಿಗೆ ದುರ್ಬಲಗೊಳ್ಳುತ್ತದೆ ಎಂದು ಐಎಂಡಿ ಬೆಂಗಳೂರು ವಿಜ್ಞಾನಿ ಡಾ.ಸಿ.ಎಸ್ ಪಾಟೀಲ್ ಮಾಹಿತಿ ನೀಡಿದ್ದಾರೆ.

ಕರ್ನಾಟಕಕ್ಕೆ ಈ ಬಾರಿ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವೈಪರಿತ್ಯಗಳಿಗಿಂತಲೂ ಅರಬ್ಬಿ ಸಮುದ್ರದಲ್ಲಿ ಎರಡು ವಾರದಿಂದ ನಿರಂತರವಾಗಿ ಉಂಟಾಗಿರುವ ಸುಳಿಗಾಳಿ (ಸ್ಟ್ರಫ್) ವಾತಾವರಣ ತೀವ್ರಗೊಳ್ಳುತ್ತಲೇ ಇದೆ. ಇದು ವಾಯುಭಾರ ಕುಸಿತವಾಗಿ ಬದಲಾಗಿದೆ.
ವಿಪರೀತ ಮಳೆಗೆ ರಾಜ್ಯ ಸಾಕ್ಷಿ
ದಕ್ಷಿಣ ಗುಜರಾತ್-ಉತ್ತರ ಕೇರಳದ ಕರಾವಳಿಯುದ್ದಕ್ಕೂ (ಗುಜರಾತ್, ಮಹಾರಾಷ್ಟ್ರ, ಕರ್ನಾಟಕ ಮತ್ತು ಕೇರಳ) ನಾಲ್ಕು ರಾಜ್ಯ ಒಳಗೊಂಡು ಸಮುದ್ರ ಮಟ್ಟದಲ್ಲಿ ತೀವ್ರಗೊಂಡಿದೆ. ಇದು ಕರ್ನಾಟಕ ಕರಾವಳಿಗೆ ಸಮೀಪವೇ ಇರುವ ಕಾರಣ ರಾಜ್ಯದ ಪಶ್ಚಿಮ ಘಟ್ಟ, ಮಲೆನಾಡು, ಹಾಗೂ ಉತ್ತರ ಕರ್ನಾಟಕದ ಒಂದಷ್ಟು ಭಾಗದಲ್ಲಿ ಕಳೆದ ಎರಡು ವಾರಗಳಿಂದ ವಿಪರೀತ ಮಳೆ ಆಗುತ್ತಿದೆ.
ಅರಬ್ಬಿ ಸಮುದ್ರದಲ್ಲಿನ ವೈಪರಿತ್ಯಗಳಿಂದಲೇ ಅರ್ಧ ರಾಜ್ಯದಲ್ಲಿ ಭಾರೀ ಮಳೆ, ಉಳಿದೆಡೆ ಹಗುರದಿಂದ ಸಾಧಾರಣ ಮಳೆ ಕಂಡು ಬರುತ್ತಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯಲ್ಲಿ ತಿಳಿಸಲಾಗಿದೆ. ಆದರೆ ಸದ್ಯಕ್ಕೆ ಅರಬ್ಬಿ ಸಮುದ್ರದಲ್ಲಿ ವೈಪರಿತ್ಯ ಕಡಿಮೆ ಆಗುವ ಲಕ್ಷಣಗಳು ಇಲ್ಲವಾಗಿದ್ದು, ಕ್ರಮೇಣ ತಗ್ಗುವ ಸಾಧ್ಯತೆಗಳಿವೆ.
ಕರ್ನಾಟಕಕ್ಕೆ ಮುಂದಿನ 07 ದಿನದ ಮಳೆ ಮುನ್ಸೂಚನೆ
ವಾಯುಭಾರ ಕುಸಿತದಿಂದಾಗಿ ರಾಜ್ಯದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಭಾರೀಯಿಂದ ಅತಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಇಲ್ಲಿ ಗಾಳಿಯ ವೇಗವು ಪ್ರತಿ ಗಂಟೆಗೆ 40-50 ಕಿಮೀ ಕಂಡು ಬರಲಿದೆ.
ಒಳನಾಡಿನ ಬೆಳಗಾವಿ, ಬೀದರ್, ಕಲಬುರ್ಗಿ, ಯಾದಗಿರಿ ಮತ್ತು ಹಾಸನ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಒಳನಾಡಿನ ಉಳಿದ ಜಿಲ್ಲೆಗಳ ಬಹುತೇಕ ಸ್ಥಳಗಳಲ್ಲಿ ಗಾಳಿಯ ವೇಗವು (40-50 kmph) ತಲುಪುವ ಸಾಧ್ಯತೆ ಇದೆ. ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಲಾಗಿದೆ.












Click it and Unblock the Notifications