ಕಳಸಾ-ಬಂಡೂರಿ : ನ್ಯಾಯಾಧೀಕರಣದ ಮುಂದೆ ಮಧ್ಯಂತರ ಅರ್ಜಿ
ಬೆಂಗಳೂರು, ನವೆಂಬರ್ 03 : 'ಕಳಸಾ-ಬಂಡೂರಿ ಯೋಜನೆ ಜಾರಿಗಾಗಿ ಮಹದಾಯಿ ನ್ಯಾಯಾಧೀಕರಣದ ಮುಂದೆ ಮಧ್ಯಂತರ ಅರ್ಜಿ ಸಲ್ಲಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಮುಖ್ಯಮಂತ್ರಿಗಳು ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್ ಮತ್ತು ರೈತ ಮುಖಂಡರೊಂದಿಗೆ ಹಿರಿಯ ವಕೀಲ ಫಾಲಿ ಎಸ್. ನಾರಿಮನ್ ಅವರನ್ನು ಸೋಮವಾರ ದೆಹಲಿಯಲ್ಲಿ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಕಳಸಾ ಬಂಡೂರಿ ಯೋಜನೆ ಜಾರಿಗಾಗಿ ಮುಂದೆ ಕೈಗೊಳ್ಳಬಹುದಾದ ಕಾನೂನು ಕ್ರಮಗಳ ಕುರಿತು ಚರ್ಚೆ ನಡೆಸಿದರು. [ಏನಿದು ಕಸಳಾ-ಬಂಡೂರಿ ಯೋಜನೆ]

ಈ ಸಂದರ್ಭದಲ್ಲಿ ಮಹದಾಯಿ ನ್ಯಾಯಾಧೀಕರಣದ ಮುಂದೆ ಅರ್ಜಿ ಸಲ್ಲಿಸುವಾಗ ತುರ್ತು ಅಗತ್ಯಗಳು ಮತ್ತು ಸೂಕ್ತ ಆಧಾರಗಳನ್ನು ಸಲ್ಲಿಸಬೇಕಾಗಿದ್ದು ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಲು ಫಾಲಿ ನಾರಿಮನ್ ಅವರು ಸರ್ಕಾರಕ್ಕೆ ಸಲಹೆ ನೀಡಿದರು. [ಅಮ್ಮಾ,, ನಮ್ಮೂರಲ್ಲಿ 15 ದಿನಕ್ಕೊಮ್ಮೆ ಯಾಕೆ ನೀರು ಬಿಡ್ತಾರೆ?]
'ಖ್ಯಾತ ನೀರಾವರಿ ತಜ್ಞ ಮತ್ತು ಕೇಂದ್ರ ಜಲ ಆಯೋಗದ ನಿವೃತ್ತ ಅಧ್ಯಕ್ಷ ಎ.ಕೆ.ಬಜಾಜ್ ಅವರೂ ಕೂಡ ಈ ಯೋಜನೆಯ ಮಹತ್ವವನ್ನು ರಾಜ್ಯಕ್ಕೆ ತಿಳಿಸಿದ್ದಾರೆ. ಹೀಗಾಗಿ ನ್ಯಾಯಾಧೀಕರಣದ ಮುಂದೆ ಅರ್ಜಿ ಸಲ್ಲಿಸಲು ನಿರ್ಧರಿಸಲಾಗಿದೆ' ಎಂದು ನಾರಿಮನ್ ತಿಳಿಸಿದ್ದಾರೆ. [ಉತ್ತರ ಕರ್ನಾಟಕದ ಸಮಸ್ಯೆ ತಿಳಿಸಲಿದೆ 'ಮಹಾಮರಣ' ಸಾಕ್ಷ್ಯಚಿತ್ರ]
ಸುಮಾರು 7.56 ಟಿಎಂಸಿ ಪ್ರಮಾಣದಷ್ಟು ಮಹದಾಯಿ ನದಿಯ ನೀರನ್ನು ಕಳಸಾ-ಬಂಡೂರಿ ನಾಲಾ ಮೂಲಕ ನವಲಗುಂದ, ನರಗುಂದ ಮತ್ತು ಹುಬ್ಬಳ್ಳಿ-ಧಾರವಾಡ ನಗರಗಳಿಗೆ ಹರಿಸಬೇಕೆಂದು ನಡೆಯುತ್ತಿರುವ ಈ ಹೋರಾಟ ಮುಂದಿನ ದಿನಗಳಲ್ಲಿ ಉಗ್ರ ಸ್ವರೂಪ ಪಡೆಯಲಿದೆ ಎಂದು ರೈತ ಮುಖಂಡರು ಈ ಸಂದರ್ಭದಲ್ಲಿ ಹೇಳಿದರು.
'ಬರಗಾಲದಿಂದ ಕಂಗೆಟ್ಟಿರುವ ಉತ್ತರ ಕರ್ನಾಟಕದ ಪ್ರದೇಶಗಳಿಗೆ ಅನುಕೂಲವಾಗಲೆಂದು ಸದ್ಯ ಕೇವಲ 3 ಟಿಎಂಸಿ ಗಳಷ್ಟು ನೀರನ್ನು ಏತದ ಮೂಲಕ ಮಲಪ್ರಭಾ ನದಿಗೆ ಹರಿಸಬೇಕು. ನಂತರ ಮುಂದಿನ ದಿನಗಳಲ್ಲಿ 4 ಟಿಎಂಸಿ ಗಳಷ್ಟು ನೀರನ್ನು ನಾಲಾ ಮೂಲಕ ಹರಿಸಲು ನ್ಯಾಯಾಧೀಕರಣದ ಮುಂದೆ ಅರ್ಜಿ ಸಲ್ಲಿಸಲು ನಿರ್ಧರಿಸಲಾಗಿದೆ' ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ದೆಹಲಿಗೆ ತೆರಳಿದ ನಿಯೋಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಸಚಿವರಾದ ಎಂ.ಬಿ.ಪಾಟೀಲ್, ಟಿ.ಬಿ.ಜಯಚಂದ್ರ, ಎಚ್.ಕೆ.ಪಾಟೀಲ್, ವಿನಯ ಕುಲಕರ್ಣಿ, ಶಾಸಕರಾದ ಬಸವರಾಜ ಬೊಮ್ಮಾಯಿ, ಎನ್.ಎಚ್.ಕೋನರೆಡ್ಡಿ ಮುಂತಾದವರಿದ್ದರು.












Click it and Unblock the Notifications