ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕಕ್ಕೆ ಹೆಚ್ಚಿನ ಸಹಕಾರ: ನಿರ್ಮಲಾ ಸೀತಾರಾಮನ್
ಬೆಂಗಳೂರು, ಜು. 02: "ಜೈವಿಕ ವಿಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಇನ್ನಷ್ಟು ಹೆಚ್ಚಿನ ಸಾಧನೆ ಮಾಡುವ ದಿಸೆಯಲ್ಲಿ ಕರ್ನಾಟಕಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲು ಕೊಡಲಾಗುವುದು" ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ರಾಜ್ಯದ ಐಟಿ, ಬಿಟಿ ಮತ್ತು ವಿಜ್ಞಾನ & ತಂತ್ರಜ್ಞಾನ ಇಲಾಖೆಯು ಜೈವಿಕ ತಂತ್ರಜ್ಞಾನ ಉದ್ಯಮಿಗಳು ಹಾಗೂ ಸ್ಟಾರ್ಟ್‌ಅಪ್ ಪ್ರಮುಖರೊಂದಿಗೆ ಎಲೆಕ್ಟ್ರಾನಿಕ್ ಸಿಟಿಯ ಜೈವಿಕ ತಂತ್ರಜ್ಞಾನ ಪಾರ್ಕ್‌ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
"ವಿಜ್ಞಾನ, ವ್ಯಾಪಾರ, ಉದ್ಯಮಶೀಲತೆ ಹಾಗೂ ಶೈಕ್ಷಣಿಕ ವಲಯಗಳ ನಡುವಿನ ಸಮನ್ವಯತೆಯಿಂದ ಜನರ ಬದುಕಿನ ಮಟ್ಟ ಸುಧಾರಿಸಲು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಒತ್ತು ನೀಡಿದೆ ಎಂದರು. ಯಾವುದೇ ವೈಜ್ಞಾನಿಕ ಸಾಧನೆಗೆ ಜೀವ ವಿಜ್ಞಾನಗಳೇ ಬುನಾದಿ. ಇದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ಜೀವ ವಿಜ್ಞಾನ ಹಾಗೂ ಜೈವಿಕ ತಾಂತ್ರಿಕತೆಯ ಬೆಳವಣಿಗೆಗೆ ದೇಶದಲ್ಲೇ ಮಾದರಿ ಎನ್ನಿಸುವಂತಹ ವಾತಾವರಣ ಸೃಷ್ಟಿಸಿದೆ" ಎಂದರು.

ತಾಂತ್ರಿಕ ಸಂಶೋಧನೆಗೆ ಕೇಂದ್ರದ ಪ್ರೋತ್ಸಾಹ
"ವಿವಿಧ ಇಲಾಖೆಗಳಡಿ ನಡೆಯುತ್ತಿರುವ ವೈಜ್ಞಾನಿಕ ಸಂಶೋಧನೆಗಳ ನಡುವೆ ಸಮನ್ವಯತೆ ಉಂಟುಮಾಡುವುದು ಕೇಂದ್ರ ಸರ್ಕಾರದ ಆದ್ಯತೆಯಾಗಿದೆ. ಇದೇ ವೇಳೆ, ಯಾವುದೇ ಅಭಿಪ್ರಾಯ, ಸಲಹೆಗಳನ್ನು ಮುಕ್ತವಾಗಿ ಸ್ವೀಕರಿಸಲಾಗುವುದು. ವೈಜ್ಞಾನಿಕ ಹಾಗೂ ತಾಂತ್ರಿಕ ಸಂಶೋಧನೆಗಳನ್ನು ಪ್ರೋತ್ಸಾಹಿಸುವುದೇ ಸರ್ಕಾರದ ಅಂತಿಮ ಉದ್ದೇಶ" ಎಂದು ಇದೇ ಸಂದರ್ಭದಲ್ಲಿ ನಿರ್ಮಲಾ ಸೀತಾರಾಮನ್ ಅವರು ಭರವಸೆ ನೀಡಿದರು.

ಜೈವಿಕ ತಂತ್ರಜ್ಞಾನದ ತವರು
ಐಟಿ, ಬಿಟಿ ಸಚಿವ ಡಾ. ಸಿ. ಎನ್. ಅಶ್ವಥ್ ನಾರಾಯಣ ಅವರು ಸಂವಾದದಲ್ಲಿ ಭಾಗವಹಿಸಿ ಮಾತನಾಡಿ, "ಕರ್ನಾಟಕವು ಮಾಹಿತಿ ತಂತ್ರಜ್ಞಾನ ರಾಜಧಾನಿ ಮಾತ್ರವಲ್ಲದೇ ಜೈವಿಕ ತಂತ್ರಜ್ಞಾನದ ತವರೂ ಆಗಿದೆ. ಬಯೋಫಾರ್ಮಾ, ಬಯೋಫಾರ್ಮಸ್ಯೂಟಿಕಲ್, ಸಸ್ಯ ಆನುವಂಶೀಯತೆ, ವಂಶವಾಹಿನಿಗಳ ಅನುಕ್ರಮಣಿಕೆ, ಜೈವಿಕ ಸಂಸ್ಕರಣೆಗೆ ಸಂಬಂಧಿಸಿದ ಆವಿಷ್ಕಾರಗಳಿಗೆ ಬೆಂಗಳೂರು ಪ್ರಮುಖ ಕಾರ್ಯನೆಲೆಯಾಗಿದೆ" ಎಂದು ಇದೇ ಸಂದರ್ಭದಲ್ಲಿ ವಿವರಿಸಿದರು.

ನವೋದ್ಯಮಗಳಿಗೆ ಹೊಸ ಅವಕಾಶ
"ಐಟಿ, ಬಿಟಿ ಕ್ಷೇತ್ರವು ಹೆಚ್ಚಿನ ಉದ್ಯೋಗ ಸೃಷ್ಟಿಸುವ ಜೊತೆಗೆ ಉತ್ಪಾದಕತೆ ಹಾಗೂ ಸಮೃದ್ಧಿಯನ್ನು ಹೆಚ್ಚಿಸುತ್ತದೆ. ಆಹಾರ ಭದ್ರತೆ, ಆರೋಗ್ಯಸೇವೆ, ಶುದ್ಧ ಇಂಧನ, ಸ್ವಚ್ಛ ಪರಿಸರ ಇತ್ಯಾದಿ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳು ತೆರೆದುಕೊಳ್ಳಲಿವೆ. ಜೊತೆಗೆ, ಕೋವಿಡ್-19 ಸೋಂಕಿನ ಸನ್ನಿವೇಶದ ನವೋದ್ಯಮಗಳಿಗೆ ಹೊಸ ಅವಕಾಶಗಳನ್ನು ಉಂಟುಮಾಡಿವೆ. ಇದಕ್ಕೆ ಪೂರಕವಾಗಿ, ರಾಜ್ಯವು ಸ್ಪರ್ಧಾತ್ಮಕ ಸಂಸ್ಥೆಯ (ಐಎಫ್ ಸಿ) ಸಹಭಾಗಿತ್ವದಲ್ಲಿ ‘ಕರ್ನಾಟಕ ನಾವೀನ್ಯತಾ ಒಳನೋಟ-2030' ಹೊರತರಲು ತಯಾರಿ ನಡೆಸುತ್ತಿದೆ" ಎಂದು ಡಿಸಿಎಂ ಡಾ. ಅಶ್ವಥ್ ನಾರಾಯಣ ಸಂವಾದದಲ್ಲಿ ವಿವರಿಸಿದರು.

ನಾವೀನ್ಯತಾ ಉತ್ಪನ್ನಗಳನ್ನು ವೀಕ್ಷಿಸಿದ ನಿರ್ಮಲಾ
ಸಂವಾದ ಕಾರ್ಯಕ್ರಮಕ್ಕೂ ಮುನ್ನ ಕೇಂದ್ರ ಸಚಿವೆ ನಿರ್ಮಾಲಾ ಸೀತಾಮಾರನ್ ಅವರು ವಿವಿಧ ಸ್ಟಾರ್ಟ್‌ಅಪ್‌ಗಳು ಅಭಿವೃದ್ಧಿಪಡಿಸಿರುವ ಸುಮಾರು 20ಕ್ಕೂ ಹೆಚ್ಚು ನಾವೀನ್ಯತಾ ಉತ್ಪನ್ನಗಳನ್ನು ವೀಕ್ಷಿಸಿದರು. ಜೊತೆಗೆ ಅವುಗಳಿಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರದ ರಾಜಸ್ವ ಕಾರ್ಯದರ್ಶಿ ತರುಣ್ ಬಜಾಜ್ ಅವರು ಸಾಧನೆ ಆಧಾರಿತ ಪ್ರೋತ್ಸಾಹಕಗಳು, ಸಂಶೋಧನಾ ಮತ್ತು ಅಭಿವೃದ್ಧಿ ವೆಚ್ಚಗಳು ಹಾಗೂ ತೆರಿಗೆ ಸಂಬಂಧಿತ ವಿಷಯಗಳ ಕುರಿತು ವಿವರಿಸಿದರು.
ರಾಜ್ಯ ಜೈವಿಕ ತಂತ್ರಜ್ಞಾನ ಕಾರ್ಯಪಡೆ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ, ಕೇಂದ್ರದ ಕಂದಾಯ ಇಲಾಖೆ ಕಾರ್ಯದರ್ಶಿ ತರುಣ್ ಬಜಾಜ್, ಬಯೋ ಇನೋವೇಷನ್ ಸೆಂಟರ್ ವ್ಯವಸ್ಥಾಪಕ ನಿರ್ದೇಶಕ ಡಾ.ಜಿತೇಂದ್ರ ಕುಮಾರ್, ಸಿ ಕ್ಯಾಂಪ್ ಸಿಇಒ ಡಾ. ತಸ್ಲೀಮಾರಿಫ್ ಸೈಯ್ಯದ್, ಹೆಚ್ಚುವರಿ ಮುಖ್ಯ ಕಾಯ್ರದರ್ಶಿ ಡಾ.ಇ.ವಿ.ರಮಣ ರೆಡ್ಡಿ, ಐಟಿ ನಿರ್ದೇಶಕಿ ಮೀನಾ ನಾಗರಾಜ ಮುಂತಾದವರು ಸಂವಾದದಲ್ಲಿ ಭಾಗಿಯಾಗಿದ್ದರು.












Click it and Unblock the Notifications