Power Price Hike: ಉಚಿತ 'ಗೃಹ ಜ್ಯೋತಿ' ಯೋಜನೆಯಿಂದ ನಷ್ಟವಾಯ್ತೆ? ವಿದ್ಯುತ್ ದರ ಹೆಚ್ಚಳ ಯಾರಿಗೆಲ್ಲ ಅನ್ವಯ
ಬೆಂಗಳೂರು, ಮಾರ್ಚ್ 20: ಕರ್ನಾಟಕ ಜನರಿಗೆ ರಾಜ್ಯ ಸರ್ಕಾರ ವಿದ್ಯುತ್ ದರ ಹೆಚ್ಚಳದ ಶಾಕ್ ನೀಡಿದೆ. ಪ್ರತಿ ಯೂನಿಟ್‌ಗೆ 36 ಪೈಸೆ ಹೆಚ್ಚಳ ಮಾಡಿದ್ದು, ಇದು ಮುಂದಿನ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಗುರುವಾರ ಆದೇಶಿಸಲಾಗಿದೆ. ಉಚಿತ 200 ಯೂನಿಟ್ ಕೊಟ್ಟ ಸರ್ಕಾರಕ್ಕೆ ನಷ್ಟವಾಗಿದೆಯೇ? ಇದನ್ನು ಸರಿದೂಗಿಸಲು ಪ್ರತಿ ಯೂನಿಟ್ ವಿದ್ಯುತ್ ದರ ಏರಿಕೆ ಮಾಡಿತೇ? ಎಂಬ ಅನುಮಾನ ಉಂಟಾಗಿದೆ. ಇದಕ್ಕೆ ಸಚಿವರು ಸ್ಪಷ್ಟ ಉತ್ತರ ಕೊಟ್ಟಿದ್ದಾರೆ.
ಕರ್ನಾಟಕ ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗ (KERC)ವು ಪ್ರತಿ ಯೂನಿಟ್‌ಗೆ 36 ಪೈಸೆ ಹೆಚ್ಚಿಸಿ ಆದೇಶಿಸಿದೆ. ನಿಗಮದ ನೌಕರರ ಪಿಂಚಣಿ, ಗ್ಯಾಚುಟಿಗಾಗಿ ಹಣ ವಸೂಲಿಗಾಗಿ ದರ ಏರಿಕೆ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೇ, ಉಚಿತ ವಿದ್ಯುತ್ ಯೋಜನೆಯಾದ 'ಗೃಹ ಜ್ಯೋತಿ' ನಷ್ಟದಲ್ಲಿದೆ. ಅದನ್ನು ಸರಿದೂಗಿಸಲು ಜನರಿಗೆ ದರ ಹೆಚ್ಚಳ ಬರೆ ಹಾಕಲಾಗಿದೆ ಅಂತಲೂ ಮಾತನಾಡುತ್ತಾರೆ. ಆದರೆ 'ಗೃಹ ಜ್ಯೋತಿ'ಯಿಂದ ನಷ್ಟವಾಗಿಲ್ಲ ಎಂದು ಸಚಿವರು ಹೇಳಿದ್ದಾರೆ.

ಹೌದು, ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಶರಣ ಪ್ರಕಾಶ್ ಪಾಟೀಲ್ ಅವರು, ಗೃಹ ಜ್ಯೋತಿ ಯೋಜನೆಯಿಂದ ಸರ್ಕಾರಕ್ಕೆ ಯಾವ ನಷ್ಟವಾಗಿಲ್ಲ. ಈ ಕಾರಣದಿಂದ ಸರ್ಕಾರ ದರ ಏರಿಕೆ ಮಾಡಿಲ್ಲ. 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಪಡೆಯುವವರಿಗೆ ದರ ಏರಿಕೆ ಅನ್ವಯವೇ ಆಗಲ್ಲ. 200 ಯೂನಿಟ್ ಗೂ ಹೆಚ್ಚು ವಿದ್ಯುತ್ ಬಳಕೆ ಮಾಡುವವರಿಗೆ ಬೆಲೆ ಹೆಚ್ಚಳವು ಅನ್ವಯವಾಗುತ್ತದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರದ ಬದಲವಾಗಿ ಸ್ವಾಯತ್ತ ಸಂಸ್ಥೆ ವಿದ್ಯುತ್ ದರ ಏರಿಕೆ ಮಾಡಿದೆ. ದರ ಏರಿಕೆಯಿಂದ ಸಾಮಾನ್ಯ ಜನರಿಗೆ ತೊಂದರೆ ಆಗುವುದಿಲ್ಲ. ಚಿಂತೆ ಬೇಡ. ಬಿಜೆಪಿಯವರು ಶ್ರೀಮಂತರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು. ವಿದ್ಯುತ್ ದರ ಏರಿಕೆ ನಿರ್ಧಾರಕ್ಕೆ ಸಮರ್ಥನೆ ಕೊಟ್ಟರು.

ಇತ್ತೀಚೆಗೆ ಸಾರಿಗೆ ಬಸ್‌ಗಳ ದರ, ನಮ್ಮ ಮೆಟ್ರೋ ಮತ್ತು ಹಾಲಿ ದರ ಹೆಚ್ಚಿಸಿದ್ದ ಸರ್ಕಾರ ವಿದ್ಯುತ್ ದರ ಏರಿಕೆ ಮಾಡಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಸದ್ಯ ಸಚಿವರು ಹೇಳುವ ಪ್ರಕಾರ, 200 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಸುವವರು ಚಿಂತೆ ಮಾಡಬೇಕಿಲ್ಲ ಎನ್ನಬಹುದಾಗಿದೆ.
ಇತ್ತ ವಿಪಕ್ಷ ಬಿಜೆಪಿ ನಾಯಕರು ಸರ್ಕಾರ ಬೆಲೆ ಏರಿಕೆ ಜಾರಿಯೊಂದನ್ನೆ ಕೆಲಸವಾಗಿ ಮಾಡಿಕೊಂಡಿದೆ. ಜನರಿಗೆ ಆರ್ಥಿಕ ಹೊರೆ ಹೆಚ್ಚಿಸುವುದೇ ಕಾಯಕವಾಗಿಬಿಟ್ಟಿದೆ. ಗ್ಯಾರೆಂಟಿ ಯೋಜನೆಗಳಿಂದ ಸರ್ಕಾರ ನಷ್ಟದಲ್ಲಿದೆ. ಆದ್ದರಿಂದ ಎಲ್ಲ ವಸ್ತುಗಳ ದರ ಏರಿಕೆಗೆ ಮುಂದಾಗಿದೆ ಎಂದು ಆರೋಪಿಸಿದರು.
ನೀರಿನ ದರ ಏರಿಕೆ ಶೀಘ್ರ: ಅದೊಂದು ಹೊರೆ
ವಿದ್ಯುತ್ ದರ ಏರಿಕೆ ಬೆನ್ನಲ್ಲೆ ಗ್ರಾಹಕರಿಗೆ ನೀರಿನ ದರ ಹೆಚ್ಚಾಗುವ ಚಿಂತೆ ಕಾಡುತ್ತಿದೆ. ಪ್ರತಿ ಲೀಟರ್ ನೀರಿಗೆ ಒಂದು ಪೈಸೆ ಹೆಚ್ಚಿಗೆ ಮಾಡಲು ಚಿಂತನೆ ಹೊಂದಿದೆ. ಈ ಬಗ್ಗೆ ಶೀಘ್ರವೇ ಆದೇಶ ಪ್ರಕಟವಾದರೂ ಅಚ್ಚರಿ ಇಲ್ಲ. ಇದರಿಂದ ಪ್ರತಿ ಮನೆಗೆ ಹೆಚ್ಚುವರಿಯಾಗಿ ಸುಮಾರು 500 ರೂಪಾಯಿ ಏರಿಕೆ ಆಗಬಹುದು. ನೀರಿನ ದರ ಹೆಚ್ಚಿಸಿದ್ದೇ ಆದಲ್ಲಿ ಬೆಂಗಳೂರು ಜಲಮಂಡಳಿಗೆ 750 ಕೋಟಿಗೂ ಅಧಿಕ ಆದಾಯ ಸಂಗ್ರಹವಾಗುವ ನಿರೀಕ್ಷೆಗಳು ಇವೆ.












Click it and Unblock the Notifications