Karnataka weather: ರಾಜ್ಯದ ಈ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆ ಸೂಚನೆ
ರಾಜ್ಯದಲ್ಲಿ ಈ ವರ್ಷ ಚಳಿಗಾಲ ಪೂರ್ಣಗೊಳ್ಳುವ ಮುನ್ನವೇ ಬೇಸಿಗೆ ಕಾಲಿಟ್ಟಂತೆ ಕಾಣುತ್ತಿದೆ. ಕಳೆದ ನಾಲ್ಕೈದು ದಿನಗಳಿಂದ ರಾಜ್ಯದಲ್ಲಿ ಚಳಿಯ ಪ್ರಮಾಣದಲ್ಲಿ ತೀವ್ರವಾಗಿ ಕುಸಿತ ಕಂಡಿದ್ದು, ಬೇಸಿಗೆಯ ಸೆಕೆ ಕಾಡಲಾರಂಭಿಸಿದೆ. ಚಳಿಗಾಲ ಮುಗಿಯಲು ಇನ್ನೂ ಒಂದು ತಿಂಗಳು ಸಮಯವಿದ್ದರೂ ಹವಾಮಾನ ವೈಪರೀತ್ಯ ಕಂಡುಬಂದಿದೆ. ಈ ಹಿನ್ನೆಲೆ ಚಳಿಯ ನಡುವೆ ಬಿಸಿಲಿನ ತಾಪ ಕೂಡ ಹೆಚ್ಚಾಗಿದೆ.
ರಾಜ್ಯದ ಉಷ್ಣವಲಯದ ಮಟ್ಟದಲ್ಲಿ ಹಗುರದಿಂದ ಮಧ್ಯಮ ಪೂರ್ವ ಅಥವಾ ಈಶಾನ್ಯ ಹವಾಮಾನ ಇರುತ್ತದೆ. ಹೀಗಾಗಿ ಕರ್ನಾಟಕದ ಒಳನಾಡಿನಲ್ಲಿ ಮುಖ್ಯವಾಗಿ ಶುಷ್ಕ ಹವಾಮಾನ ಇರಲಿದೆ. ಕರ್ನಾಟಕದ ಒಳನಾಡಿನ ಒಂದು ಅಥವಾ ಎರಡು ಸ್ಥಳಗಳಲ್ಲಿ ದಟ್ಟ ಮಂಜು ಅಥವಾ ಮಂಜು ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ರಾಜ್ಯದ ಮೈಸೂರು, ಕೊಡಗು, ಹಾಸನ, ಚಿಕ್ಕಮಗಳೂರು, ಚಾಮರಾಜನಗರ, ದಕ್ಷಿಣ ಕನ್ನಡ ಮತ್ತು ಉಡುಪಿ ಸೇರಿದಂತೆ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಮಳೆಯಾಗುವ ಸಾಧ್ಯತೆಯೂ ಇದೆ. ಉತ್ತರ ಕನ್ನಡ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಬೆಂಗಳೂರು ನಗರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಶಿವಮೊಗ್ಗ ಮತ್ತು ವಿಜಯನಗರ ಸೇರಿದಂತೆ ಹಲವೆಡೆ ಶೀತಗಾಳಿ ಮತ್ತು ಒಣ ಹವೆ ಇರಲಿದೆ.
ಮತ್ತೊಂದೆಡೆ ರಾಜ್ಯದಲ್ಲಿ ಒಂದೆರಡು ಜಿಲ್ಲೆ ಬಿಟ್ಟರೆ ಬಹುತೇಕ ಭಾಗಗಳಲ್ಲಿ ಚಳಿಯ ತೀವ್ರತೆ ಕಡಿಮೆಯಾಗಿದೆ. ಫೆಬ್ರವರಿ 9ರವರೆಗೆ ಕರ್ನಾಟಕ ರಾಜ್ಯದಾದ್ಯಂತ ಕನಿಷ್ಠ ತಾಪಮಾನದಲ್ಲಿ ದೊಡ್ಡ ಬದಲಾವಣೆ ಇಲ್ಲ ಎಂದು ಹೇಳಿದೆ. ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಮುಖ್ಯವಾಗಿ ಶುಭ್ರ ಆಕಾಶ ಕಂಡುಬರಲಿದೆ. ಕೆಲವು ಪ್ರದೇಶಗಳಲ್ಲಿ ಬೆಳಗಿನ ಜಾವದಲ್ಲಿ ದಟ್ಟ ಮಂಜು ಬೀಳುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 33 ಡಿಗ್ರಿ ಸೆಲ್ಸಿಯಸ್ ಹಾಗೂ 17 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಒಂದು ವಾರದಿಂದ ಈಚೆಗೆ ಚಳಿಯ ಪ್ರಮಾಣ ಬಹುತೇಕ ಕಡಿಮೆಯಾಗಿದೆ. ಸಂಜೆಯಾದರೆ ಕಾಡುತ್ತಿದ್ದ ಚಳಿ ಬದಲಿಗೆ ಇದೀಗ ಸೆಕೆ ಕೂಡ ಹೆಚ್ಚಾಗುತ್ತಿದೆ. ಬೆಳಿಗ್ಗೆ ವೇಳೆ ಮಂಜಿನ ಪ್ರಮಾಣ ಕೂಡ ಕಡಿಮೆಯಾಗಿ ಆಕಾಶ ಶುಭ್ರವಾಗಿ ಕಾಣಿಸುತ್ತಿದೆ. ಇನ್ನು ಸಂಜೆಯವರೆಗೆ ಬಿಸಿಲಿನ ಪ್ರಮಾಣ ಕೂಡ ಹೆಚ್ಚಾಗಿ ತಾಪಮಾನದಿಂದ ಜನ ಬಸವಳಿಯುತ್ತಿದ್ದು, ಚಳಿ ಸಂಪೂರ್ಣವಾಗಿ ನಿಲ್ಲುವ ಲಕ್ಷಣಗಳು ಕಾಣುತ್ತಿವೆ.

ದೇಶದಲ್ಲೂ ಚಳಿ ಕಡಿಮೆ: ಉತ್ತರ ಭಾರತದಲ್ಲೂ ಚಳಿಯ ಪ್ರಭಾವ ಕಡಿಮೆಯಾಗುತ್ತಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಉತ್ತರ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ರಾತ್ರಿ ಮತ್ತು ಬೆಳಿಗ್ಗೆ ಚಳಿಯ ವಾತಾವರಣ ಕಂಡುಬರುತ್ತಿದೆ. ಆದರೆ ಹಗಲಿನ ವೇಳೆ ಬಿಸಿಲಿನ ಪ್ರಮಾಣ ಕೂಡ ಅಧಿಕವಾಗುತ್ತಿದೆ. ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಕೂಡ ಇದೇ ರೀತಿಯ ಹವಾಮಾನ ಸ್ಥಿತಿ ಇದೆ. ಉತ್ತರ ಪ್ರದೇಶದ ಹಲವು ಜಿಲ್ಲೆಗಳಿಗೆ ಹೆಚ್ಚು ಮಂಜು ಆವರಿಸುವ ಹಿನ್ನೆಲೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಈ ಭಾಗದಲ್ಲೂ ಮಳೆಯಾಗುವ ಸಾಧ್ಯತೆ ಇದ್ದು, ವಾತಾವರಣದಲ್ಲಿ ಬದಲಾವಣೆಯಾಗುವ ಸಾಧ್ಯತೆಯೂ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.












Click it and Unblock the Notifications