Karnataka rains: ಕಾವೇರಿದ ಧರೆಗೆ ತಂಪೆರೆಯಲಿದೆ ಮಳೆ, ಮುಂದಿನ 5 ದಿನದ ಹವಾಮಾನ ವರದಿ
ಬೆಂಗಳೂರು ಮೇ 19: ಕರ್ನಾಟಕದಾದ್ಯಂತ ಬಿಸಿ ಗಾಳಿಯ ವಾತಾವರಣ ಹೆಚ್ಚಾಗಿದೆ. ಇನ್ನೆರಡು ದಿನದಲ್ಲಿ ಮಳೆರಾಯ ಮತ್ತೆ ಅಬ್ಬರಿಸುವ ಮುನ್ಸೂಚನೆ ನೀಡಿದ್ದು, ಧರೆಗೆ ತಂಪೆಯಲಿದ್ದಾನೆ. ಮುಂದಿನ ಐದು ದಿನಗಳ ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ವ್ಯಾಪಕ ಮಳೆ ಮತ್ತು ಕರಾವಳಿ ಸಾಧಾರಣ ಮಳೆಯ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಶನಿವಾರದಿಂದ ಕರ್ನಾಟಕದಲ್ಲಿ ಮತ್ತೆ ಮಳೆಯ ವಾತಾವರಣ ನಿರ್ಮಾಣವಾಗಲಿದೆ. ಮೇ 24ರವರೆಗೆ ಗುಡುಗು ಸಹಿತ ಭರ್ಜರಿ ಮಳೆ ಸುರಿಯುವ ಸಾಧ್ಯತೆ ಇದೆ. ಈ ಪೈಕಿ ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ತುಮಕೂರು, ದಾವಣಗೆರೆ, ಮಂಡ್ಯ, ಮೈಸೂರು, ಹಾಸನ, ರಾಮನಗರ, ಚಿಕ್ಕಿಬಳ್ಳಾಪುರ, ಕೋಲಾರ, ಚಾಮರಾಜನಗರ, ಶಿವಮೊಗ್ಗ, ಕೊಡಗು ಜಿಲ್ಲೆಗಳಲ್ಲಿ ಮೊದಲ ಮೂರು ದಿನ ಸಾಧಾರಣ ಮಳೆ ಆರಂಭವಾಗಲಿದೆ.

ಮುಂದಿನ ಐದು ದಿನಗಳ ಪೈಕಿ ಕೊನೆಯ ಎರಡು ದಿನ ಈ ಒಳನಾಡಿನ ಜಿಲ್ಲೆಗಳಿಗೆ ಕೊನೆಯ ಎರಡು ದಿನ ವ್ಯಾಪಕ ಮಳೆ ಬರುವ ಸಾಧ್ಯತೆ ಇದೆ. ಈ ವೇಳೆ ಕರಾವಳಿ ಮತ್ತು ಉತ್ತರ ಒಳನಾಡಿನ ಭಾಗದ ಜಿಲ್ಲೆಗಳಲ್ಲಿ ಮಳೆ ಸುರಿಸುವ ಮಾರುತಗಳು ಸಕ್ರಿಯವಾಗಿರಲಿವೆ.
ಬಂಗಾಳಕೊಲ್ಲಿಯಲ್ಲಿ ಮೇ 6 ರಂದು ನಿರ್ಮಾಣವಾಗಿದ್ದ ಮೋಚಾ ಚಂಡಮಾರುತವು ತೀವ್ರ ಸ್ವರೂಪ ಪಡೆದಿತ್ತು. ಆದರೆ ಕರಾವಳಿ ಭಾಗದತ್ತ ಮೋಚಾ ಚಂಡಮಾರುತದ ಚಲನೆ ಅಷ್ಟಾಗಿ ಕಂಡು ಬರಲಿಲ್ಲ. ಆದರೆ ಒಂದೇ ಕಡೆ ವಾಯುಭಾರ ಕುಸಿತ ಪ್ರಭಾವ ಇದ್ದ ಕಾರಣ ಮಳೆ ಸುರಿಸುವ ಮಾರುತಗಳ ಸೆಳೆತ ಉಂಟಾಗಿತ್ತು. ಹೀಗಾಗಿ ನಿರ್ಮಲ ಆಕಾಶದ ವಾತಾವರಣ ಉಂಟಾಗಿ ತಾಪಮಾನದ ಗರಿಷ್ಠ ಮಿತಿ ಮೀರಿ ದಾಖಲಾಯಿತು.
ಗರಿಷ್ಠ ತಾಪಮಾನ: ಬೆಂಗಳೂರು ಹವಾಮಾನ ವರದಿ
ಇದೀಗ ಮಳೆಯ ಕಾರಣಕ್ಕೆ ಇನ್ನೆರಡು ದಿನಗಳಲ್ಲಿ ತಾಪಮಾನ ಹಂತ ಹಂತವಾಗಿ ಕಡಿಮೆಯಾಗಲಿದೆ. ಉತ್ತರ ಕರ್ನಾಟಕದ ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಗಡಿ ಮುಟ್ಟಿದೆ. ಇತ್ತ ರಾಜಧಾನಿ ಬೆಂಗಳೂರಿನಲ್ಲಿ ಸಹ ಗರಿಷ್ಠ ತಾಪಮಾನ 30.5 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದೆ.

ಬೆಂಗಳೂರಿನಲ್ಲಿ ಮುಂದಿನ ಎರಡು ದಿನ ಬಿಸಿಲಿನ ವಾತಾವರಣ ಮುಂದುವರಿಯಲಿದೆ. ನಂತರ ಮೂರು ದಿನ ಅಂದರೆ ಮೇ 21ರಿಂದ ಮೇ 23ರವರೆಗೆ ಮೂರು ದಿನ ಜೋರು ಮಳೆಯ ಆಗಮನವಾಗಲಿದೆ. ಈ ವೇಳೆ ವಾತಾವರಣದಲ್ಲಿ ತಾಪಮಾನ ತುಸು ಇಳಿಕೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ವರದಿ ತಿಳಿಸಿದೆ.












Click it and Unblock the Notifications