Heat Wave Death: ಬಿಸಿಲಿಗೆ ರಾಜ್ಯದಲ್ಲಿ ಮೊದಲ ಸಾವು ವರದಿ?: ಕಲಬುರಗಿಯಲ್ಲಿ ಕಾರ್ಮಿಕ ಸಾವು
ಬೆಂಗಳೂರು, ಏಪ್ರಿಲ್ 01: ಕರ್ನಾಟಕದಾದ್ಯಂತ ಬೇಸಿಗೆಯ ಅತ್ಯಧಿಕ ಬಿಸಿಲು ದಾಖಲಾಗುತ್ತಿದೆ. ಅಲ್ಲಲ್ಲಿ ಮಳೆ ಬಂದರೂ ಸಹಿತ ವಾಡಿಕೆಗಿಂತ ಹೆಚ್ಚು ತಾಪಮಾನ ಕಂಡು ಬರುತ್ತಿದೆ. ಕಲ್ಯಾಣ ಕರ್ನಾಟಕದ ಕಲಬುರಗಿಯಲ್ಲಿ ಉರಿ ಬಿಸಿಲಿಗೆ ಒಬ್ಬರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಕಲ್ಯಾಣ ಕರ್ನಾಟಕದ ಕಲಬುರಗಿಯಲ್ಲಿ ರಾಜ್ಯದ ಅತ್ಯಧಿಕ ಗರಿಷ್ಠ ತಾಪಮಾನ ದಾಖಲಾಗಿದೆ. ವಾಡಿಕೆಗಿಂತಲೂ ಹೆಚ್ಚು ತಾಪಮಾನ ಈ ಜಿಲ್ಲೆಯಲ್ಲಿ ದಾಖಲಾಗಿದೆ. ಈ ವಿಪರೀತ ಬಿಸಿಲಿನಿಂದ ಕೂಲಿ ಕಾರ್ಮಿಕನೊಬ್ಬ ಭಾನುವಾರ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಶಾಖದ ಅಲೆ ಕಲಬುರಿಯಲ್ಲಿ ಅತೀವವಾಗಿದ್ದು, ಈ ಬಿಸಿ ಗಾಳಿಗೆ ನರೇಗಾ ಯೋಜನೆಯಡಿ ಕೆಲಸ ನಡೆದಿತ್ತು. ಈ ವೇಳೆ ಜಿಲ್ಲೆಯ ಆಳಂದ ತಾಲೂಕಿನ ದೊಣ್ಣೂರಿನ ಗ್ರಾಮದಲ್ಲಿ ಭಾನುವಾರ ಬಿಸಲಿನ ತಾಪಕ್ಕೆ ಕೂಲಿ ಕಾರ್ಮಿಕ ಶರಣಪ್ಪ ಸಮಗಾರ (42) ಕುಸಿದು ಬಿದಿದ್ದಾರೆ. ಮಧ್ಯಾಹ್ನ ಕೆಲಸ ಮಾಡುವಾಗ ಘಟನೆ ನಡೆದಿದೆ ಎಂದು ಜೊತೆಗಿದ್ದ ಕೂಲಿ ಕಾರ್ಮಿಕರು ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆ
ಕಲ್ಯಾಣ ಕರ್ನಾಟಕ ಭಾಗದಲ್ಲಿ ರಾಜ್ಯದ ಇತರೆ ಭಾಗಕ್ಕಿಂತಲೂ ಸಾಮಾನ್ಯವಾಗಿ ಹೆಚ್ಚಾಗಿಯೇ ತಾಪಮಾನ ಇರುತ್ತದೆ. ಅದರಲ್ಲೂ ಮಧ್ಯಾಹ್ನವಂತೂ ಬಿಸಿಲಿನ ಝಳಕ್ಕೆ ಮನುಷ್ಯ ತತ್ತರಿಸುತ್ತಿದ್ದಾರೆ. ಈ ಮಧ್ಯೆ ಕೂಲಿ ಕಾರ್ಮಿಕ ಉರಿ ಬಿಸಿಲಿಗೆ ತಾಳಲಾರದೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಕೆಲವು ಇದು ಹೃದಯಾಘಾತವಾಗಿರಬೇಕು ಎಂದು ಶಂಕಿಸಿದ್ದಾರೆ.
ಸದ್ಯ ಈ ಸಾವಿನ ಪ್ರಕರಣವನ್ನು ಜಿಲ್ಲೆಯ ನರೋಣಾ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ. ಈ ಕುರಿತು ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಅದರ ವರದಿ ಬಂದ ಬಳಿಕವೇ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಾರದಿಂದಲೂ ಕಲಬುರಗಿಯಲ್ಲಿ ಹೆಚ್ಚು ಬಿಸಿಲು
ಕೆಲವು ದಿನಗಳಿಂದ ಕಲಬುರಗಿ ಭಾಗದಲ್ಲಿ 40 ಡಿಗ್ರಿ ಸೆಲ್ಸಿಯಸ್ ಗಿಂತ ಕಡಿಮೆ ತಾಪಮಾನ ದಾಖಲಾಗಿಲ್ಲ. ಇಲ್ಲಿ ಒಮ್ಮೆ 42 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಸಹ ದಾಖಲಾಗಿದೆ.
ಕಲಬುರಗಿಯಲ್ಲಿ ಭಾನುವಾರ ಗರಿಷ್ಠ ಉಷ್ಣಾಂಶ 41.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಉಳಿದಂತೆ ರಾಯಚೂರಿನಲ್ಲಿ ಗರಿಷ್ಠ 40.4, ಬಾಗಲಕೋಟೆ 40.4, ವಿಜಯಪುರ, ಗದಗ, ಕೊಪ್ಪಳದಲ್ಲಿ ತಲಾ ಗರಿಷ್ಠ 39 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಉತ್ತರ ಕರ್ನಾಟಕ, ಕರಾವಳಿ ಹಾಗೂ ಕಲ್ಯಾಣ ಕರ್ನಾಟಕದಲ್ಲಿ ಒಣಹವೆ ಮುಂದುವರಿದಿದೆ. ಬಿಸಿಲಿಗೆ ಹೈರಾಣಾಗಿರುವ ಜನರು ಮಳೆಗಾಗಿ ಕಾದು ಕೂತಿದ್ದಾರೆ.












Click it and Unblock the Notifications