ಹಿಂದುತ್ವಕ್ಕಿಂತ ರೊಟ್ಟಿ, ಬಟ್ಟೆ, ಮನೆಯೆಂಬ ಬದುಕಿನ ಅನಿವಾರ್ಯತೆಗಳಿಗೆ ಫುಲ್ ಮಾರ್ಸ್ ನೀಡಿದ ಕನ್ನಡಿಗರು
ಬೆಂಗಳೂರು, ಮೇ 14: ಕರ್ನಾಟಕದಲ್ಲಿ ಚುನಾವಣೆಗೆ ಕೇವಲ ಒಂದು ವಾರ ಬಾಕಿ ಇರುವಾಗ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಾದ್ಯಂತ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದರು. ಭಜರಂಗದಳದಂತಹ ಸಂಘಟನೆಗಳನ್ನು ನಿಷೇಧಿಸುವ ಕುರಿತ ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ವಾಗ್ದಾಳಿ ನಡೆಸಿದರು. ಜೈ ಭಜರಂಗಬಲಿ ಎಂಬ ಘೋಷಣೆಯನ್ನು ಸ್ವತಃ ಮೋದಿ ಅವರೇ ಕೂಗಿದರು. ಈ ಮೂಲಕ ಕರ್ನಾಟಕದಲ್ಲಿ ಹಿಂದುತ್ವವನ್ನು ಮುನ್ನೆಲೆಗೆ ತರುವ ಬಿಜೆಪಿಯ ಯತ್ನಕ್ಕೆ ಭಾರೀ ಹೊಡೆತ ಬಿದ್ದಿರುವುದು ಈಗ ಚರ್ಚಿತ ವಿಷಯವಾಗಿದೆ.
ಈ ವಿಚಾರವನ್ನು ಮೋದಿ ಅವರು ಎತ್ತಿದಾಗ ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಷಯವು ಪ್ರಮುಖವಾಗಿ ಚರ್ಚೆಯಾಯಿತು. ಇದು ಕರ್ನಾಟಕದ ಮತದಾರರ ಮೇಲೆ ಪ್ರಭಾವ ಬೀರಲಿದೆ ಎಂಬ ಮಾತುಗಳೂ ಕೇಳಿಬಂದಿದ್ದವು. ಧಾರ್ಮಿಕ ರಾಷ್ಟ್ರೀಯತಾವಾದವನ್ನು ಪ್ರತಿಪಾದಿಸುವ ಬಿಜೆಪಿ ಕರ್ನಾಟಕದಲ್ಲಿಯೂ ಹಲವು ಪ್ರಯೋಗಗಳಿಗೆ ಕೈ ಹಾಕಿತು.

ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವೂ ಸಹ ಕರ್ನಾಟಕದಲ್ಲಿ ಹಲವು ಹಿಂದುತ್ವ ಪ್ರಯೋಗಗಳನ್ನು ಮಾಡಲು ನೋಡಿತು. ಹಿಜಾಬ್, ಹಲಾಲ್, ಟಿಪ್ಪು ವಿಚಾರಗಳನ್ನು ಮುನ್ನೆಲೆಗೆ ತರಲಾಯಿತು. ಅದು ದೊಡ್ಡ ಮಟ್ಟದ ಗದ್ದಲಕ್ಕೆ ಕಾರಣವಾಯಿತು. ಇದರ ಹಿಂದೆ ಹಿಂದೂ ಮತಗಳ ಕ್ರೋಡಿಕರಣಕ್ಕೆ ಬಿಜೆಪಿ ಹಾಗೂ ಸಂಘ ಪರಿವಾರ ಮುಂದಾಯಿತು. ಆದರೆ, ಚುನಾವಣಾ ಫಲಿತಾಂಶಗಳು ಹೇಳುವಂತೆ ಕರ್ನಾಟಕದ ಜನರು ಹಿಂದುತ್ವಕ್ಕೆ ಅಂಟಿಕೊಂಡಿಲ್ಲವೆಂದು ಗೊತ್ತಾಗುತ್ತಿದೆ.
ಜಾತಿ ಹಾಗೂ ಧರ್ಮಗಳಿಗೆ ಸಂಬಂಧಿಸಿದ ಭಾವನೆಗಳಿಗೆ ಕನ್ನಡಿಗರು ಬೆಲೆ ಕೊಟ್ಟಿಲ್ಲವೆಂಬುದು ತಿಳಿದುಬಂದಿದೆ. ಇದರ ಪರಿಣಾಮ ಕರ್ನಾಟಕದಲ್ಲಿ ಹಿಂದುತ್ವಕ್ಕೆ ಹಿನ್ನಡೆಯಾಗಿದೆ. ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದನ್ನು ಶಾಲೆಯಿಂದ ನಿಷೇಧಿಸಿದ ಬಿಜೆಪಿ ಸಚಿವ ಬಿ.ಸಿ.ನಾಗೇಶ್ ಅವರು ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದಾರೆ.

ಬಲಪಂಥೀಯ ಬಿಜೆಪಿ ನಾಯಕ ಸಿ.ಟಿ.ರವಿ ಅವರು ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಅವರು ಪ್ರತಿನಿಧಿಸುವ ಜಿಲ್ಲೆ ಚಿಕ್ಕಮಗಳೂರಿನ ಐದು ಸ್ಥಾನಗಳ ಪೈಕಿ ಯಾವುದರಲ್ಲೂ ಬಿಜೆಪಿ ಗೆದ್ದಿಲ್ಲವೆಂಬುದನ್ನು ಇಲ್ಲಿ ತಿಳಿಯಬಹುದು. ಪ್ರಬಲ ಹಿಂದುತ್ವದ ಪ್ರದೇಶವಾದ ಕೊಡಗು ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಸಂಪೂರ್ಣ ನೆಲಕಚ್ಚಿದೆ.
ಹಿಂದುತ್ವಕ್ಕಿಂತ ರೋಟಿ, ಕಪಡಾ ಔರ್ ಮಕಾನ್‌ಗೆ ಒಲಿದ ಜನ
ಕರ್ನಾಟಕದ ಚುನಾವಣೆಯಲ್ಲಿ ಸ್ಪಷ್ಟವಾಗಿ ಪ್ರಾಬಲ್ಯ ಸಾಧಿಸಿದ್ದು ಆರ್ಥಿಕ ಸಂಕಷ್ಟದ ಹೆಚ್ಚು ತರ್ಕಬದ್ಧ ಕಲ್ಪನೆ. ನಗರದ ಮತದಾರರು ಉದ್ಯೋಗಗಳ ಬಳಲುತ್ತಿರುವುದು ಹೆಚ್ಚು ಕಂಡುಬಂದಿತು. ಗ್ರಾಮೀಣ ಪ್ರದೇಶದಲ್ಲಿ ರೈತರು ಕಂಗಾಲಾಗಿದ್ದರು. ಸಿದ್ದರಾಮಯ್ಯ ಸರ್ಕಾರದಿಂದ ಸಿಗುತ್ತಿದ್ದ ಹತ್ತು ಕೆಜಿ ಅಕ್ಕಿಯನ್ನು ಮೂರು ಕೆಜಿಗೆ ಇಳಿಸಲಾಯಿತು. ಇಂದಿರಾ ಕ್ಯಾಂಟಿನ್ ಅನ್ನು ಮುಚ್ಚಲಾಯಿತು. ಗ್ಯಾಸ್ ಸಿಲಿಂಡರ್ ಬೆಲೆ ಗಗನಕ್ಕೆ ಮುಟ್ಟಿತು. ಇದೆಲ್ಲವೂ ಈ ಚುನಾವಣೆಯಲ್ಲಿ ಪ್ರಾಬಲ್ಯ ಸಾಧಿಸಿದ ವಿಚಾರಗಳಾಗಿದ್ದವು. ಸಾಂಪ್ರದಾಯಿಕ ಭಾರತೀಯ ಜನತಾ ಪಕ್ಷದ ಮತದಾರರು ಸಹ ಈ ಬಗ್ಗೆ ಅತೃಪ್ತಿ ಹೊಂದಿರುವುದು ಗೊತ್ತಾಗುತ್ತದೆ.
ಜನಕ್ಕೆ ಅನ್ನ, ಬಟ್ಟೆ, ಮನೆ, ಆಹಾರ, ಮೂಲಭೂತ ಸೌಕರ್ಯಗಳು ಮುಖ್ಯವಾಗಿದ್ದವು. ಕನ್ನಡಿಗರು ಈ ಮೂಲಕ ಬಿಜೆಪಿ ವಿರುದ್ಧ ಮತ ಚಲಾಯಿಸಿರುವುದು ಕಂಡುಬಂದಿದೆ.












Click it and Unblock the Notifications