ಸ್ಥಳೀಯ ಸಂಸ್ಥೆ ಚುನಾವಣೆ; ಕಾಂಗ್ರೆಸ್ ಗೆಲುವು ಮತ್ತು ಬೊಮ್ಮಾಯಿ ಸೋಲು!
ಬೆಂಗಳೂರು, ಡಿಸೆಂಬರ್ 31; ಕರ್ನಾಟಕದ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಗುರುವಾರ ಪ್ರಕಟವಾಗಿದೆ. ಬಿಜೆಪಿ ಆಡಳಿತ ಇರುವ ರಾಜ್ಯದಲ್ಲಿ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ಡಿಸೆಂಬರ್ 27ರಂದು 58 ನಗರ ಸ್ಥಳೀಯ ಸಂಸ್ಥೆಗಳ 1184 ವಾರ್ಡ್‌ಗಳಿಗೆ ಚುನಾವಣೆ ನಡೆದಿತ್ತು. ಗುರುವಾರ ಮತ ಎಣಿಕೆ ನಡೆದಿದ್ದು, ಕಾಂಗ್ರೆಸ್ ಒಟ್ಟು 501 ವಾರ್ಡ್‌ಗಳಲ್ಲಿ ಗೆದ್ದಿದೆ. ಬಿಜೆಪಿ 433 ವಾರ್ಡ್‌ಗಳಲ್ಲಿ ಜಯಗಳಿಸಿದ್ದರೆ ಜೆಡಿಎಸ್ 45 ವಾರ್ಡ್ ಗೆದ್ದಿದೆ.
ಜನತಾ ಪಕ್ಷ 1, ಎಎಪಿ 1, ಎಐಎಂಐಎಂ 1, ಎಸ್‌ಡಿಪಿಎಐ 6 ಮತ್ತು ಪಕ್ಷೇತರ ಅಭ್ಯರ್ಥಿಗಳು 195 ವಾರ್ಡ್‌ನಲ್ಲಿ ಗೆಲುವು ಸಾಧಿಸಿದ್ದಾರೆ. 2023ರಲ್ಲಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಫಲಿತಾಂಶವನ್ನು ಹಲವಾರು ಆಯಾಮಗಳಲ್ಲಿ ವಿಶ್ಲೇಷಣೆ ಮಾಡಲಾಗುತ್ತಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತವರು ಜಿಲ್ಲೆ ಹಾವೇರಿಯ ಬಂಕಾಪುರ ಪುರಸಭೆ ಮತ್ತು ಗುತ್ತಲ ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಇದರಿಂದಾಗಿ ಬಿಜೆಪಿಗೆ ಮತ್ತು ಬಸವರಾಜ ಬೊಮ್ಮಾಯಿಗೆ ಭಾರೀ ಮುಖಭಂಗವಾಗಿದೆ ಎಂಬ ಚರ್ಚೆಗಳು ನಡೆಯುತ್ತಿವೆ.
ಬಸವರಾಜ ಬೊಮ್ಮಾಯಿ ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರ ಶಿಗ್ಗಾವಿ-ಸವಣೂರ. ಈ ಕ್ಷೇತ್ರದ ವ್ಯಾಪ್ತಿಯ ಬಂಕಾಪುರ ಪುರಸಭೆಯ 23 ಸ್ಥಾನಗಳಲ್ಲಿ ಕಾಂಗ್ರೆಸ್ 14, ಬಿಜೆಪಿ 7ರಲ್ಲಿ ಜಯಗಳಿಸಿದ್ದು, 2 ಸ್ಥಾನದಲ್ಲಿ ಪಕ್ಷೇತರರು ಗೆಲುವು ಕಂಡಿದ್ದಾರೆ. ಗುತ್ತಲ ಪಟ್ಟಣ ಪಂಚಾಯಿತಿಯ ಒಟ್ಟು 18 ಸ್ಥಾನಗಳಲ್ಲಿ ಕಾಂಗ್ರೆಸ್ 11, ಬಿಜೆಪಿ 6 ಮತ್ತು ಪಕ್ಷೇತರ ಅಭ್ಯರ್ಥಿ 1 ಸ್ಥಾನದಲ್ಲಿ ಗೆದ್ದಿದ್ದು ಬಿಜೆಪಿಗೆ ಮುಖಭಂಗವಾಗಿದೆ.
ಕಾಂಗ್ರೆಸ್ ವಾದವೇನು?; ಕರ್ನಾಟಕದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಸರ್ಕಾರದ ಬಗ್ಗೆ ಇರುವ ಜನಾಭಿಪ್ರಾಯಕ್ಕೆ ಹಿಡಿದ ಕೈಗನ್ನಡಿ ಎಂಬುದು ಕಾಂಗ್ರೆಸ್ ವಾದವಾಗಿದೆ. ಜನರ ಒಲವು ಕಾಂಗ್ರೆಸ್ ಪಕ್ಷದ ಕಡೆ ಇದೆ. ಮುಂದಿನ ಚುನಾವಣೆಯಲ್ಲಿ ನಮ್ಮ ಗೆಲುವು ಖಂಡಿತ ಎಂದು ಕಾಂಗ್ರೆಸ್ ನಾಯಕರು ಘೋಷಣೆ ಮಾಡಿದ್ದಾರೆ.
ಚುನಾವಣಾ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, "ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 1,187 ಸ್ಥಾನಗಳ ಪೈಕಿ 500ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆ ಇದೆ ಎಂಬುದನ್ನು ಈ ಫಲಿತಾಂಶ ಇನ್ನೊಮ್ಮೆ ಸಾಬೀತು ಮಾಡಿದೆ" ಎಂದು ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, "ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 1,187 ಸ್ಥಾನಗಳ ಪೈಕಿ 500ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆ ಇದೆ ಎಂಬುದನ್ನು ಈ ಫಲಿತಾಂಶ ಇನ್ನೊಮ್ಮೆ ಸಾಬೀತು ಮಾಡಿದೆ" ಎಂದು ಫಲಿತಾಂಶವನ್ನು ವಿಶ್ಲೇಷಣೆ ಮಾಡಿದ್ದಾರೆ.
ತವರು ಕ್ಷೇತ್ರದಲ್ಲಿನ ಪಕ್ಷದ ಸೋಲಿನ ಕುರಿತು ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, "ಕ್ಷೇತ್ರದಲ್ಲಿ ಶೇ 65ಕ್ಕಿಂತ ಹೆಚ್ಚು ಮತದಾರರು ಅಲ್ಪಸಂಖ್ಯಾತರಾಗಿದ್ದಾರೆ. ಹೀಗಾಗಿ ನಾವು ಯಾವತ್ತೂ ಗೆದ್ದಿಲ್ಲ. ಮುಂದಿನ ಬಾರಿ ಗೆಲ್ಲುವ ಭರವಸೆ ಹೊಂದಿದ್ದೇವೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಫಲಿತಾಂಶದ ಬಳಿಕ ಟ್ವೀಟ್ ಮಾಡಿದ್ದು, 'ಪುರಸಭೆ, ನಗರಸಭೆ, ಪಟ್ಟಣ ಪಂಚಾಯ್ತಿ ಕ್ಷೇತ್ರಗಳ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಿದ ಮತದಾರ ಬಂಧುಗಳಿಗೆ ಹೃತ್ಪೂರ್ವಕ ಕೃತಜ್ಞತೆಗಳು. ಹಾಗೆಯೇ, ಗೆಲುವು ಸಾಧಿಸಿದ ಪಕ್ಷದ ಎಲ್ಲ ಅಭ್ಯರ್ಥಿಗಳಿಗೂ, ಎಲ್ಲ ನಾಯಕರಿಗೂ, ಪದಾಧಿಕಾರಿಗಳಿಗೂ ಹಾಗೂ ನಮ್ಮ ಎಲ್ಲ ನಿಷ್ಠಾವಂತ ಕಾರ್ಯಕರ್ತರಿಗೂ ಅಭಿನಂದನೆಗಳು" ಎಂದು ಹೇಳಿದ್ದಾರೆ.
ಹಲವಾರು ಬಿಜೆಪಿ ನಾಯಕರು ಗೆದ್ದ ಅಭ್ಯರ್ಥಿಗಳಿಗೆ ಅಭಿನಂದನೆಗಳನ್ನು ಸಲ್ಲಿಕೆ ಮಾಡಿದ್ದಾರೆ. ಆದರೆ ರಾಜ್ಯದಲ್ಲಿಯೇ ಪಕ್ಷವೇ ಆಡಳಿತದಲ್ಲಿದ್ದರೂ ಪಕ್ಷಕ್ಕೆ ಹಿನ್ನಡೆ ಆಗಿದ್ದು ಏಕೆ?, ಕಾಂಗ್ರೆಸ್ ಹೆಚ್ಚಿನ ಸ್ಥಾನಗಳಿಸಿದ್ದು ಏಕೆ? ಎಂಬ ಬಗ್ಗೆ ಮೌನಕ್ಕೆ ಶರಣಾಗಿದ್ದಾರೆ.
ಕಳೆದ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದ, ಬಿಜೆಪಿಗೆ ಅಧಿಕಾರ ಸಿಕ್ಕಿದ್ದ ಹಲವು ಸ್ಥಳೀಯ ಸಂಸ್ಥೆಗಳು ಈ ಬಾರಿ ಕಾಂಗ್ರೆಸ್ ಪಾಲಾಗಿವೆ. ಹೆಚ್ಚು ಸ್ಥಾನಗಳಲ್ಲಿ ಜಯಗಳಿಸುವ ಜೊತೆಗೆ ಪಕ್ಷ ಶೇ 42.06 ಮತಗಳನ್ನು ಪಡೆದಿದೆ. ಬಿಜೆಪಿಯ ಮತಗಳಿಕೆ ಶೇ 36.90 ಮತ್ತು ಜೆಡಿಎಸ್ ಮತಗಳಿಕೆ ಶೇ 3.80 ಆಗಿದೆ. ಪಕ್ಷೇತರ ಅಭ್ಯರ್ಥಿಗಳೇ ಶೇ 17.22ರಷ್ಟು ಮತಗಳನ್ನು ಪಡೆದಿದ್ದಾರೆ.
ಯಾರಿಗೆ ಎಷ್ಟು ಸ್ಥಾನ?; 5 ನಗರಸಭೆಯ 166 ವಾರ್ಡ್ ಪೈಕಿ ಕಾಂಗ್ರೆಸ್ 62, ಬಿಜೆಪಿ 66, ಜೆಡಿಎಸ್ 12, ಎಸ್‌ಡಿಪಿಐ 1 ಮತ್ತು ಪಕ್ಷೇತರರು 24 ವಾರ್ಡ್‌ಗಳಲ್ಲಿ ಜಯಗಳಿಸಿದ್ದಾರೆ.
19 ಪುರಸಭೆಯ 441 ವಾರ್ಡ್ ಪೈಕಿ ಕಾಂಗೆಸ್ 202, ಬಿಜೆಪಿ 176, ಜೆಡಿಎಸ್ 21 ಜನತಾ ಪಕ್ಷ 1, ಎಸ್‌ಡಿಪಿಐ 3, ಪಕ್ಷೇತರರು 8 ವಾರ್ಡ್‌ಗಳಲ್ಲಿ ಜಯಗಳಿಸಿದ್ದಾರೆ.
34 ಪಟ್ಟಣ ಪಂಚಾಯಿತಿಗಳ 577 ವಾರ್ಡ್‌ಗಳಲ್ಲಿ ಕಾಂಗೆಸ್ 237, ಬಿಜೆಪಿ 191, ಜೆಡಿಎಸ್ 12, ಎಐಎಂಐಎಂ 2, ಎಸ್‌ಡಿಪಿಐ 2, ಪಕ್ಷೇತರ 133 ವಾರ್ಡ್‌ಗಳಲ್ಲಿ ಗೆಲುವು ಕಂಡಿದ್ದಾರೆ.
ಬಸವರಾಜ ಬೊಮ್ಮಾಯಿ; ಜುಲೈ 28ರಂದು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದರು. ಬಳಿಕ ರಾಜ್ಯದಲ್ಲಿ 3 ಚುನಾವಣೆಗಳು ನಡೆದಿವೆ. ಆದರೆ ಪಕ್ಷದ ಸಾಧನೆ ಹೇಳಿಕೊಳ್ಳುವಂತಿಲ್ಲ.
ಸೆಪ್ಟೆಂಬರ್‌ನಲ್ಲಿ ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮತ್ತು ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ ನಡೆಯಿತು. ಬೆಳಗಾವಿಯಲ್ಲಿ ಬಿಜೆಪಿ ಜಯಗಳಿಸಿತು. ಆದರೆ ಹುಬ್ಬಳ್ಳಿ-ಧಾರವಾಡ ಮತ್ತು ಕಲಬುರಗಿಯಲ್ಲಿ ನಿರೀಕ್ಷಿತ ಸೀಟು ಸಿಗಲಿಲ್ಲ.
ನವೆಂಬರ್‌ನಲ್ಲಿ ಬಸವರಾಜ ಬೊಮ್ಮಾಯಿ ತವರು ಜಿಲ್ಲೆ ಹಾನಗಲ್ ಮತ್ತು ಸಿಂಧಗಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ನಡೆಯಿತು. ಆದರೆ ಹಾನಗಲ್‌ನಲ್ಲಿಯೇ ಬಿಜೆಪಿ ಅಭ್ಯರ್ಥಿಗೆ ಸೋಲಾಯಿತು.
ಡಿಸೆಂಬರ್‌ನಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಕಳೆದ ಬಾರಿಗಿಂತ ಉತ್ತಮ ಸಾಧನೆ ಮಾಡಿತು. ಆದರೆ ಪರಿಷತ್‌ನಲ್ಲಿ ಬಹುಮತ ಪಡೆಯುವಷ್ಟು ಸ್ಥಾನಗಳು ಪಕ್ಷಕ್ಕೆ ಸಿಗಲಿಲ್ಲ. 15 ರಿಂದ 16 ಸ್ಥಾನಗಳಲ್ಲಿ ಗೆಲ್ಲುವ ಗುರಿ ಪಕ್ಷದ್ದಾಗಿತ್ತು.












Click it and Unblock the Notifications