ರಾಜ್ಯದಲ್ಲಿ ಶಿಕ್ಷಕರ ನೇಮಕಾತಿ ಕುರಿತು ಸಚಿವ ಮಧು ಬಂಗಾರಪ್ಪ ಮಹತ್ವದ ಮಾಹಿತಿ
Teachers Recruitment: ರಾಜ್ಯದಲ್ಲಿ ಶಿಕ್ಷಣ ಇಲಾಖೆ ಶಿಕ್ಷಕರಿಗೆ ಆಗಾಗ ಗುಡ್ ನ್ಯೂಸ್ ಕೊಡುತ್ತಲಿರುತ್ತದೆ. ಇದೀಗ 18,000 ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು. ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಶಿವಮೊಗ್ಗದಲ್ಲಿ ಇಂದು (ನವೆಂಬರ್ 29) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶೀಘ್ರದಲ್ಲೇ ಸರ್ಕಾರಿ ಶಾಲೆಗಳಿಗೆ 12,000 ಮತ್ತು ಅನುದಾನಿತ ಶಾಲೆಗಳಿಗೆ 6,000 ಸೇರಿ ಒಟ್ಟು 18,000 ಶಿಕ್ಷಕರನ್ನ ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

ರಾಜ್ಯದಲ್ಲಿ ಯಾವುದೇ ಶಿಕ್ಷಕರ ಕೊರತೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ. ಆದ್ದರಿಂದ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮಕ್ಕಳ ಸ್ವಾಗತಕ್ಕೆ ಈ ಶಿಕ್ಷಕರೇ ಉಪಸ್ಥಿತರಿರುತ್ತಾರೆ. ಅಲ್ಲಿಗೆ ನಾವು ಒಟ್ಟು 32,000 ಶಿಕ್ಷಕರ ನೇಮಕ ಮಾಡಿದ ಹಾಗೆ ಆಗುತ್ತದೆ ಎಂದು ಮಾಹಿತಿ ನೀಡಿದರು.
ವಿದ್ಯಾರ್ಥಿಗಳ ಉತ್ತಮ ಫಲಿತಾಂಶಕ್ಕೆ ಇಲಾಖೆ ಸಹ ಸಹಕಾರ ಮಾಡಬೇಕಾಗುತ್ತದೆ. ಈ ಉದ್ದೇಶದಿಂದ ಪ್ರಾಂಶುಪಾಲರು, ಉಪಪ್ರಾಂಶುಪಾಲರ ಕಾರ್ಯಾಗಾರ ನಡೆಸಲಾಗುತ್ತಿದೆ. ಶಿಕ್ಷಕರನ್ನು ಸರಿಯಾಗಿ ಇಲಾಖೆ ಬಳಸಿಕೊಳ್ಳುತ್ತಿದೆ. ಅದರಂತೆಯೇ ವಿದ್ಯಾರ್ಥಿಗಳಿಗೂ ಸಹ ಸರಿಯಾಗಿ ಭೋದನೆ ಮೂಲಕ ಪರೀಕ್ಷೆಗಳನ್ನು ಬರೆಯಲು ಅನುಕೂಲ ಆಗುತ್ತಿದೆ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಈಗಿನಿಂದಲೇ ಪರೀಕ್ಷೆಗೆ ಪೂರಕವಾಗಿ ತಯಾರಿ ಮಾಡಲಾಗುತ್ತಿದೆ. ಈ ಹಿಂದಿನ ಸರ್ಕಾರದವರು ಕೇವಲ 5,000ದೊಳಗೆ ಶಿಕ್ಷಕರ ನೇಮಕಾತಿ ಮಾಡಿದರು. ಮಕ್ಕಳ ಹಿತದೃಷ್ಟಿಯಿಂದ ಶಿಕ್ಷಕರ ನೇಮಕಾತಿಯು ಆದಷ್ಟು ಬೇಗ ಮುಕ್ತಾಯ ಆಗಲಿದೆ ಎಂದು ಹೇಳಿದರು.
ಟಿಇಟಿ ಪರೀಕ್ಷೆ ಕುರಿತು ಮಾಹಿತಿ: ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ)ಗೆ ಮುಹೂರ್ತ ಫಿಕ್ಸ್ ಆಗಿದೆ. ಡಿಸೆಂಬರ್ 7ರಂದು ಪರೀಕ್ಷೆ ನಡೆಸಲು ಶಾಲಾ ಶಿಕ್ಷಣ ಇಲಾಖೆ ಘೋಷಣೆ ಮಾಡಿದೆ. ಇಲಾಖಾಯು ಈ ಬಗ್ಗೆ ಇಲಾಖೆ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಪರೀಕ್ಷೆಯ ಫಲಿತಾಂಶವನ್ನು ಡಿಸೆಂಬರ್ 31ರಂದು ಪ್ರಕಟಿಸಲಾಗುವುದು ಎಂದು ತಿಳಿಸಿದೆ.
ಅಭ್ಯರ್ಥಿಗಳು ಅಕ್ಟೋಬರ್ 23ರಿಂದ ನವೆಂಬರ್ 9ರ ವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. ಅದೇ ವೇಳೆ ಕಲ್ಯಾಣ ಕರ್ನಾಟಕ ಪ್ರದೇಶ ಹಾಗೂ ಉಳಿದ ಶಿಕ್ಷಕರ ಹುದ್ದೆಗಳ ಭರ್ತಿಗೂ ಸಿಇಟಿ ಪರೀಕ್ಷೆಯ ಮೂಲಕ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದೆ.
ಪರೀಕ್ಷೆ ಹಾಗೂ ಫಲಿತಾಂಶ ದಿನಾಂಕಗಳ ವಿವರ
* ಪರೀಕ್ಷೆ - ಡಿಸೆಂಬರ್ 7
* ಅರ್ಜಿ ಸಲ್ಲಿಕೆ - ಅಕ್ಟೋಬರ್ 23ರಿಂದ ನವೆಂಬರ್ 9ರ ವರೆಗೆ
* ಫಲಿತಾಂಶ - ಡಿಸೆಂಬರ್ 31
ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ-2025ಕ್ಕೆ ಅರ್ಜಿ ಸಲ್ಲಿಸಬಯಸುವ ಅರ್ಹ ಅಭ್ಯರ್ಥಿಗಳು ಶಿಕ್ಷಣ ಇಲಾಖೆಯ https://schooleducation.karnataka.gov.in ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕು. ಆನ್‌ಲೈನ್ ಅರ್ಜಿಯಲ್ಲಿ ಅಗತ್ಯ ಇರುವ ಎಲ್ಲಾ ಮಾಹಿತಿಗಳನ್ನು ಪೂರ್ಣವಾಗಿ ಭರ್ತಿ ಮಾಡಿದ ಬಳಿಕ ಅಭ್ಯರ್ಥಿಗಳು ತಮ್ಮ ನೊಂದಣಿ ಸಂಖ್ಯೆ ಹಾಗೂ ಪೂರ್ಣ ವಿವರಗಳನ್ನು ಒಳಗೊಂಡ ಅರ್ಜಿಯ ಕಂಪ್ಯೂಟರ್ ಜನರೇಟೆಡ್ ಪ್ರತಿಯ ಪ್ರಿಂಟ್‌ಔಟ್ ಪಡೆದುಕೊಳ್ಳಬೇಕು.
ಪರೀಕ್ಷೆ ದಿನಾಂಕಗಳ ವಿವರ
* ಪತ್ರಿಕೆ-1: - 07/12/2025, ಭಾನುವಾರ
* ಸಮಯ: - ಬೆಳಗ್ಗೆ 9.30 ರಿಂದ 12.00 ಗಂಟೆವರೆಗೆ
* ಪತ್ರಿಕೆ-2: ದಿನಾಂಕ-07/12/2025, ಭಾನುವಾರ
* ಸಮಯ : ಮಧ್ಯಾಹ್ನ 2ರಿಂದ 4.30 ಗಂಟೆವರೆಗೆ
ವರ್ಗವಾರು ಪರೀಕ್ಷಾ ಶುಲ್ಕಗಳ ವಿವರ
ಸಾಮಾನ್ಯ ವರ್ಗ, 2ಎ, 2ಬಿ, 3ಎ ಮತ್ತು 3ಬಿ: ಪತ್ರಿಕೆ-1 ಅಥವಾ ಪತ್ರಿಕೆ-2 ಮಾತ್ರ-700 ರೂಪಾಯಿ, ಪತ್ರಿಕೆ-1 ಹಾಗೂ ಪತ್ರಿಕೆ-2- 1000 ರೂಪಾಯಿ ಪಾವತಿ ಮಾಡಬೇಕು.
ಪ.ಜಾತಿ/ಪ.ವರ್ಗ/ಪ್ರವರ್ಗ-1: ಪತ್ರಿಕೆ-1 ಅಥವಾ ಪತ್ರಿಕೆ-2 ಮಾತ್ರ- 350 ರೂಪಾಯಿ, ಪತ್ರಿಕೆ-1 ಹಾಗೂ ಪತ್ರಿಕೆ 2- 500 ರೂಪಾಯಿ, (ವಿಶೇಷ ಚೇತನ/ದಿವ್ಯಾಂಗ ಅಭ್ಯರ್ಥಿಗಳಿಗೆ ಪರೀಕ್ಷಾ ಶುಲ್ಕದಿಂದ ವಿನಾಯಿತಿ ಇರುತ್ತದೆ.)
ಅಭ್ಯರ್ಥಿಗಳು KARTET-2025 ಪರೀಕ್ಷೆಯ ಪ್ರವೇಶ ಪತ್ರವನ್ನು ಡಿಸೆಂಬರ್ 1 ರಿಂದ ಡಿಸೆಂಬರ್ 7ರ ವರೆಗೆ ಇಲಾಖಾ ವೆಬ್‌ಸೈಟ್‌ನಲ್ಲಿ ಲಾಗ್ ಇನ್ ಆಗಿ ಪಡೆದುಕೊಳ್ಳಬಹುದು. ಅಭ್ಯರ್ಥಿಗಳ ಮಾಹಿತಿ, ಭಾವಚಿತ್ರ ಹಾಗೂ ಅವರ ಸಹಿಗೆ ಸಂಬಂಧಿಸಿದಂತೆ ವ್ಯತ್ಯಾಸ ಇದ್ದರೆ, ಸರಿಪಡಿಸಿಕೊಳ್ಳಲು ಅವಕಾಶ ಇರುವುದಿಲ್ಲ.












Click it and Unblock the Notifications