ನಿಶ್ಚಿತ ಪಿಂಚಣಿಯ ಬೇಡಿಕೆ, 5ನೇ ದಿನಕ್ಕೆ ಕಾಲಿಟ್ಟ ಶಿಕ್ಷಕರ ಹೋರಾಟ
ಬೆಂಗಳೂರು, ಅಕ್ಟೋಬರ್ 16 : ನಿಶ್ಚಿತ ಪಿಂಚಣಿ ಯೋಜನೆ ಜಾರಿಗೆ ಒತ್ತಾಯಿಸಿ ಬೆಂಗಳೂರಿನಲ್ಲಿ ಪಿಂಚಣಿ ವಂಚಿತ ನೌಕರರು ಕಳೆದ ಐದು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಬಸವರಾಜ ಹೊರಟ್ಟಿ ನೇತೃತ್ವದ ಸಮಿತಿ ನೀಡಿರುವ ಕಾಲ್ಪನಿಕ ವೇತನ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನುದಾನಿತ ಪಿಂಚಣಿ ವಂಚಿತ ನೌಕರರು
ನಡೆಸುತ್ತಿರುವ ಪ್ರತಿಭಟನೆಯಲ್ಲಿ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಪಾಲ್ಗೊಂಡಿದ್ದರು. ಪ್ರತಿಭಟನೆಗೆ ಬೆಂಬಲ ನೀಡಿದರು.
ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ ಬೆಳೆಸಬೇಕು ಎನ್ನುವ ಕೂಗು ಒಂದು ಕಡೆಯಾದರೆ ಅದೇ ಶಾಲೆಗಳಲ್ಲಿ ದುಡಿಯುತ್ತಿರುವ ಸುಮಾರು 40 ಸಾವಿರಕ್ಕೂ ಅಧಿಕ ಶಿಕ್ಷಕರು ಹಾಗೂ ನೌಕರರಿಗೆ ನಿವೃತ್ತಿ ಜೀವನದ ನಂತರ ದೊರೆಯಬೇಕಾದ ಪಿಂಚಣಿ ಹಾಗೂ ಮತ್ತಿತರ ಪ್ರಮುಖ ಸೌಲಭ್ಯಗಳನ್ನು ನೀಡದೆ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ.
ಕಳೆದ ಐದು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಸರಕಾರ ಮಾತ್ರ ಇವರ ಕೂಗನ್ನು ಕೇಳಿಯೂ ಕೇಳದಂತೆ ವರ್ತಿಸುತ್ತಿರುವದಕ್ಕೆ ಹೋರಾಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

5ನೇ ದಿನಕ್ಕೆ ಕಾಲಿಟ್ಟ ಹೋರಾಟ
ಕೆಲವು ದಿನಗಳ ಹಿಂದೆ ವೇತನಾನುದಾನಕ್ಕೊಳಪಟ್ಟಿರುವ ರಾಜ್ಯದ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಅನುದಾನ ರಹಿತ ಅವಧಿಯಲ್ಲಿ ಅನೇಕ ವರ್ಷಗಳ ಕಾಲ ವೇತನವಿಲ್ಲದೆ ದುಡಿದ ಸೇವಾವಧಿಯನ್ನು ಪರಿಗಣಿಸಿ ವೇತನ ನಿಗದಿಗೊಳಿಸುವ ಸಲುವಾಗಿ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ನೇತೃತ್ವದ ಸಮೀತಿ ನೀಡಿರುವ ಕಾಲ್ಪನಿಕ ವೇತನ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಹಾಗೂ ನಿಶ್ಚಿತ ಪಿಂಚಣಿ ಯೋಜನೆ ಜಾರಿಗಾಗಿ ಆಗ್ರಹಿಸಿ ಅನುದಾನಿತ ಪಿಂಚಣಿ ವಂಚಿತ ನೌಕರರು ಹೋರಾಟ ನಡೆಸುತ್ತಿದ್ದಾರೆ.

ಸರ್ಕಾರ ವಿರುದ್ಧ ಆಕ್ರೋಶ
ಸರ್ಕಾರ ಮಾತ್ರ ಇವರ ಕೂಗನ್ನು ಕೇಳಿಯೂ ಕೇಳದಂತೆ ವರ್ತಿಸುತ್ತಿರುವದಕ್ಕೆ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿಭಟನೆಯ ನೇತೃತ್ವ ವಹಿಸಿರುವ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ರಾಜ್ಯಾಧ್ಯಕ್ಷ ಜಿ.ಹನುಮಂತಪ್ಪ ಮಾತನಾಡಿ, '1-4-2006 ನಂತರ ಅನುದಾನಕ್ಕೊಳ್ಪಟ್ಟು ವೇತನ ಪಡೆಯುತ್ತಿರುವ ಅನುದಾನಿತ ವಿದ್ಯಾ ಸಂಸ್ಥೆಗಳ ಸುಮಾರು ನಾಲವತ್ತು ಸಾವಿರಕ್ಕೂ ಹೆಚ್ಚು ನೌಕರರಿರಗೆ ಹಳೆಯ ನಿಶ್ಚಿತ ಪಿಂಚಣಿ ಯೋಜನೆ ಜಾರಿಯಾಗಬೇಕು' ಎಂದು ಒತ್ತಾಯಿಸಿದರು.

ಸರ್ಕಾರ ಯೋಜನೆ ಜಾರಿಗೊಳಿಸಬೇಕು
ವೇತನಾನುದಾನಕ್ಕೊಳಪಟ್ಟು ಕೇವಲ ಬೆರಳೆಣಿಕೆಯಷ್ಟು ವರ್ಷ ಮಾತ್ರ ವೇತನ ಪಡೆದು ಈಗ ಕೊನೆ ತಿಂಗಳ ಸಂಬಳವನ್ನಷ್ಟೇ ಪಡೆದ ಸಾವಿರಾರು ನೌಕರರು ಬರಿಗೈಲಿ ನಿವೃತ್ತರಾಗಿದ್ದು ಅವರ ಸಂಧ್ಯಾಕಾಲದ ಆಸರಗೆ ಬಿಡಿಗಾಸು ಇಲ್ಲದೇ ಪರದಾಡುತ್ತಿದ್ದಾರೆ. ಅವರ ನಿವೃತ್ತಿ ಜೀವನ ನೆಮ್ಮದಿಯಾಗಿರಬೇಕೆಂದರೆ ಸರ್ಕಾರ ನಿಶ್ಚಿತ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಎಂದು ಹೋರಾಟಗಾರರು ಒತ್ತಾಯಿಸುತ್ತಿದ್ದಾರೆ.

ಬೃಹತ್ ಜಾಥಾ
ಬೇಡಿಕೆಗಳ ಈಡೇರಿಕೆಗಾಗಿ ಕಳೆದ ವಾರ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ ತನಕ ಸುಮಾರು 20000 ಸಾವಿರ ಅನುದಾನಿತ ಪಿಂಚಣಿ ವಂಚಿತ ನೌಕರರು ಬೃಹತ್ ಜಾಥಾ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ. ಆದರೂ ಸರ್ಕಾರ ನಮ್ಮನ್ನು ನಿರ್ಲಕ್ಷಿಸುತ್ತಿದೆ ಎಂದು ನೌಕರರು ಆರೋಪ ಮಾಡುತ್ತಿದ್ದಾರೆ.
ಪ್ರತಿಭಟನೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ ಅನುದಾನಿತ ಪಿಂಚಣಿ ವಂಚಿತ ಸಂಘದ ಪಾದಾಧಿಕಾರಿಗಳು, ಪಿಂಚಣಿ ಹಾಗೂ ಕಾಲ್ಪನಿಕ ವೇತನ ವಂಚಿತ ಸಾವಿರಾರು ಶಿಕ್ಷಕರು,ನೌಕರರು ಪಾಲ್ಗೊಂಡಿದ್ದಾರೆ.












Click it and Unblock the Notifications