ಬಿಜೆಪಿ ಅಡ್ಡದಾರಿಯಲ್ಲಿ ಅಧಿಕಾರಕ್ಕೆ ಬಂದಿದೆ’; EVM ವಿಚಾರದಲ್ಲಿ ತಂಗಡಗಿ ಗಂಭೀರ ಆರೋಪ
ಕೊಪ್ಪಳ; ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಇವಿಎಂ ದುರ್ಬಳಕೆ ಮೂಲಕ ಅಡ್ಡದಾರಿಯಲ್ಲಿ ಅಧಿಕಾರಕ್ಕೆ ಬರುತ್ತಿದೆ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ದುರ್ಬಲಗೊಳಿಸುವ ಕೆಲಸ ಮಾಡುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್.ಎಸ್.ತಂಗಡಗಿ ಅವರು ತೀವ್ರ ವಾಗ್ದಾಳಿ ನಡೆಸಿದರು.
ಜಿಲ್ಲೆಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ರಾಜಕೀಯ ಇತಿಹಾಸವೇ ಅಡ್ಡದಾರಿ ಹಿಡಿದು ಅಧಿಕಾರಕ್ಕೆ ಬರುವುದಾಗಿದೆ. ಮತಗಳ್ಳತನದ ಬಗ್ಗೆ ದೇಶದ ಜನರಲ್ಲಿ ನಿರಂತರವಾಗಿ ಜಾಗೃತಿ ಮೂಡಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಪ್ರಜಾಪ್ರಭುತ್ವದ ಹಕ್ಕುಗಳನ್ನು ಕಸಿದುಕೊಳ್ಳುವ ಯಾವುದೇ ಪ್ರಯತ್ನವನ್ನು ಜನತೆ ಹೆಚ್ಚು ದಿನ ಸಹಿಸುವುದಿಲ್ಲ. ಮುಂದಿನ ದಿನಗಳಲ್ಲಿ ದೇಶದ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.

ಪರಿಸ್ಥಿತಿಗೆ ತಕ್ಕಂತೆ ಬಿಜೆಪಿ ಆಟ
ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್ ಕರ್ನಾಟಕದಲ್ಲಿ ಹೇಗೆ ಅಧಿಕಾರಕ್ಕೆ ಬಂತು ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಬಿಜೆಪಿಯವರು ಅಡ್ಡದಾರಿಯಲ್ಲಿ ಅಧಿಕಾರಕ್ಕೆ ಬರುವ ವಿಚಾರದಲ್ಲಿ ನಿಸ್ಸೀಮರು. ದೇಶದಾದ್ಯಂತ ಏಕಾಏಕಿ ಅಧಿಕಾರಕ್ಕೆ ಬಂದರೆ ಜನರಲ್ಲಿ ಸಹಜವಾಗಿಯೇ ಅನುಮಾನ ಮೂಡುತ್ತದೆ ಎಂಬುದನ್ನು ಬಿಜೆಪಿಗರು ಅರಿತಿದ್ದಾರೆ. ಹೀಗಾಗಿ ಯಾವ ಕ್ಷೇತ್ರದಲ್ಲಿ ಯಾವ ರೀತಿಯ ರಾಜಕೀಯ ಪರಿಸ್ಥಿತಿ ಇದೆ, ಎಲ್ಲಿ ಯಾರ ಪರ ಅಲೆ ಇದೆ ಎಂಬುದನ್ನು ಗಮನಿಸಿ, ಅಲ್ಲಿನ ಪರಿಸ್ಥಿತಿಗೆ ತಕ್ಕಂತೆ ಇವಿಎಂ ದುರ್ಬಳಕೆಯ ಆಟ ಆಡುತ್ತಿದ್ದಾರೆ ಎಂದು ಆರೋಪಿಸಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಪರವಾದ ಸ್ಪಷ್ಟ ಅಲೆ ಇತ್ತು. ಹೀಗಾಗಿ ಇಲ್ಲಿ ತಮ್ಮ ಆಟವನ್ನು ಹೆಚ್ಚು ಆಡಲು ಬಿಜೆಪಿಗೆ ಸಾಧ್ಯವಾಗಲಿಲ್ಲ. ಜನರ ತೀರ್ಪನ್ನು ಗೌರವಿಸುವ ಬದಲು ಚುನಾವಣಾ ವ್ಯವಸ್ಥೆಯನ್ನೇ ಪ್ರಶ್ನಾರ್ಹಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ದೂರಿದರು.
ಕೇಂದ್ರದ ನಡೆ ಅತ್ಯಂತ ಹೀನ
ಮತಗಳ್ಳತನದ ವಿರುದ್ಧ ಧ್ವನಿ ಎತ್ತಿ, ಮತದಾರರ ಹಕ್ಕು ಹಾಗೂ ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡುವಂತೆ ಒತ್ತಾಯಿಸಿದ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಇಂಡಿಯಾ ಕೂಟದ ನಾಯಕರನ್ನು ತಡೆದು, ಬಂಧಿಸಿ, ದೈಹಿಕವಾಗಿ ಹಿಂಸಿಸಿರುವುದು ಕೇಂದ್ರ ಸರ್ಕಾರದ ಅತ್ಯಂತ ಹೀನ ಹಾಗೂ ಪ್ರಜಾಪ್ರಭುತ್ವ ವಿರೋಧಿ ನಡೆ ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದರು.
ಮತಗಳ್ಳತನ, ಎಸ್‌ಐಆರ್ ಅಕ್ರಮ, ಚುನಾವಣಾ ಆಯೋಗದ ದುರ್ಬಳಕೆ ಹಾಗೂ ಮತದಾರರ ಹಕ್ಕುಗಳ ಹರಣದ ವಿರುದ್ಧ ಪ್ರಜಾಸತ್ತಾತ್ಮಕವಾಗಿ ನಡೆಯುತ್ತಿದ್ದ ಹೋರಾಟವನ್ನು ಹತ್ತಿಕ್ಕಲು ಬಲಪ್ರಯೋಗ ಮಾಡಿರುವುದು ಗೂಂಡಾಗಿರಿಯ ಪರಮಾವಧಿ. ಇದು ಕೇವಲ ಪ್ರತಿಪಕ್ಷದ ನಾಯಕರ ಮೇಲಿನ ದಾಳಿ ಅಲ್ಲ, ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲಿನ ದೊಡ್ಡ ದಾಳಿ ಎಂದು ಅವರು ಕಿಡಿ ಕಾರಿದರು.
ಸಂವಿಧಾನ ಬದಲಾವಣೆಗೆ ಕೈ ಹಾಕಿದ್ರು: ಬಿಜೆಪಿಗರನ್ನು ನಂಬುವ ಪರಿಸ್ಥಿತಿ ಇಲ್ಲ. ಹೀಗಾಗಿ ಎಚ್ಚರಿಕೆಯಿಂದ ಇರುವಂತೆ ನಮ್ಮ ಮುಖ್ಯಮಂತ್ರಿಗಳು ಹೇಳಿದ್ದಾರೆ. ಅದರಲ್ಲಿ ಯಾವುದೇ ತಪ್ಪಿಲ್ಲ. ನಾವೆಲ್ಲರೂ ಎಚ್ಚರಿಕೆಯಿಂದ ಇದ್ದೇವೆ. ಸಂವಿಧಾನವನ್ನೇ ಬದಲಾವಣೆ ಮಾಡುತ್ತೇವೆ ಎಂದು ಹೇಳಿದ್ದವರಿಂದ ದೇಶದ ಜನರು ಇನ್ನೇನು ನಿರೀಕ್ಷಿಸಲು ಸಾಧ್ಯ? ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಮತದಾರರ ಹಕ್ಕುಗಳನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಎಂದು ಹೇಳಿದರು.
ಪ್ರಜಾಪ್ರಭುತ್ವದ ಮೇಲೆ ನಡೆಯುತ್ತಿರುವ ಯಾವುದೇ ದಾಳಿಯನ್ನು ಕಾಂಗ್ರೆಸ್ ಎಂದಿಗೂ ಸಹಿಸುವುದಿಲ್ಲ. ಜನರ ಮತವೇ ಅಂತಿಮ ತೀರ್ಪು. ಆ ಮತದ ಹಕ್ಕನ್ನು ರಕ್ಷಿಸುವ ಹೋರಾಟ ನಿರಂತರವಾಗಿ ಮುಂದುವರಿಯಲಿದೆ ಎಂದು ತಿಳಿಸಿದರು.


Click it and Unblock the Notifications
