Sowmya Reddy: ಬಿಜೆಪಿ ನಾಯಕರು ಸ್ವಾರ್ಥಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ- ಸೌಮ್ಯ ರೆಡ್ಡಿ ವಾಗ್ದಾಳಿ
ಹುಬ್ಬಳ್ಳಿ: ಬಿಜೆಪಿ ನಾಯಕರು ಕರ್ನಾಟಕದ ಮೂಲೆ ಮೂಲೆಯಲ್ಲೂ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ. ಬಿಜೆಪಿ ನಾಯಕರ ಹೋರಾಟ ಜೋರಾಗಿದ್ದು, ಹೀಗೆ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಆದರೆ ಇದೇ ವೇಳೆ, ಬಿಜೆಪಿ ನಾಯಕರು ಸ್ವಾರ್ಥಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ ಅಂತಾ ಕರ್ನಾಟಕ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಕರ್ನಾಟಕ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯ ರೆಡ್ಡಿ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ & ಬಿಜೆಪಿ ನಾಯಕರು ತಮ್ಮ ಅಸ್ತಿತ್ವವನ್ನ ಉಳಿಸಿಕೊಳ್ಳಲು ಜನಾಕ್ರೋಶ ಯಾತ್ರೆ ಮಾಡುತ್ತಿದ್ದಾರೆ ಹೊರತು ಜನರ ಮೇಲಿನ ಕಾಳಜಿಯಿಂದ ಅಲ್ಲ ಎಂದು ವಾಗ್ದಾಳಿ ನಡೆಸಿದರು. ಜಾತಿ & ಧರ್ಮದ ಹೆಸರಿನಲ್ಲಿ ಈಗಾಗಲೇ ಜನರಿಗೆ ಮಂಕು ಬೂದಿಯನ್ನ ಬಿಜೆಪಿ ನಾಯಕರು ಎರಚಿದ್ದಾರೆ. ಈಗ ಜನಾಕ್ರೋಶ ಯಾತ್ರೆ ಅಂತ ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷರಾದ ಸೌಮ್ಯಾ ರೆಡ್ಡಿ ಅವರು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ಕೇಂದ್ರದಿಂದ ಬೆಲೆ ಏರಿಕೆ ಆಗುತ್ತಿದೆ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರಾತ್ರೋ ರಾತ್ರಿ ಅಡುಗೆ ಅನಿಲ ದರ ಹೆಚ್ಚಿಸಿದೆ. ಉಜ್ವಲ ಯೋಜನೆಯ ಅಡುಗೆ ಅನಿಲ ದರವನ್ನೂ ಏರಿಕೆ ಮಾಡಿದ್ದು, ಪೆಟ್ರೋಲ್ & ಡೀಸೆಲ್ ರೇಟ್‌ನ ಹೆಚ್ಚಳ ಮಾಡುವ ಮೂಲಕ ಜನರ ಮೇಲೆ ಹೊರೆ ಹಾಕಿದೆ ಎಂದು ಕೇಂದ್ರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಕೇಂದ್ರ ಸರ್ಕಾರಕ್ಕೆ ಜನರ ಮೇಲೆ ಹಾಗೂ ಮಹಿಳೆಯರ ಮೇಲೆ ಕಾಳಜಿ ಇಲ್ಲ. ಹೀಗಾಗಿ ಮಹಿಳಾ ಕಾಂಗ್ರೆಸ್ ವತಿಯಿಂದ ದೇಶದಾದ್ಯಂತ ಮಹಿಳಾಕ್ರೋಶ ಪ್ರತಿಭಟನೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕ ಬಿಜೆಪಿ ನಾಯಕರಿಗೆ ಸವಾಲು!
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು, ಮಹಿಳೆಯರ ಹಿತದೃಷ್ಟಿಯಿಂದ ಗೃಹಲಕ್ಷ್ಮೀ ಯೋಜನೆ, ಶಕ್ತಿ ಯೋಜನೆ ಸೇರಿದಂತೆ ಹಲವಾರು ಯೋಜನೆಗಳನ್ನ ಜಾರಿಗೆ ತಂದಿದೆ. ಆದರೆ ಇದನ್ನು ನೋಡಿ ಬಿಜೆಪಿ ನಾಯಕರಿಗೆ ಅಸೂಯೆ ಉಂಟಾಗಿದೆ. ಹೀಗಾಗಿ, ಬಿಜೆಪಿ ಮುಖಂಡರು ನಮ್ಮ ಸರ್ಕಾರದ ವಿರುದ್ಧ ಜನಾಕ್ರೋಶ ಯಾತ್ರೆ ಹೆಸರಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದರು.
ಕೇಂದ್ರ ಸರ್ಕಾರ ಇಂಧನ ದರ ಹಾಗೂ ದಿನ ಬಳಕೆ ಅನಿಲ ದರವನ್ನು ಹೆಚ್ಚಳ ಮಾಡಿದೆ, ಅದರ ವಿರುದ್ಧವೂ ಬಿಜೆಪಿ ನಾಯಕರು ಈಗ ಪ್ರತಿಭಟನೆ ನಡೆಸಲಿ ಎಂದು ಸವಾಲು ಹಾಕಿದರು. ಇನ್ನು ಸೌಮ್ಯಾ ರೆಡ್ಡಿ ಅವರ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಿ, ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಲಾಯಿತು.












Click it and Unblock the Notifications