ವಿದ್ಯಾರ್ಥಿಗಳು ಗಮನಿಸಿ: ಉನ್ನತ ಶಿಕ್ಷಣ ಇಲಾಖೆಯ ಪದವಿ ಕೋರ್ಸ್, ಪರೀಕ್ಷೆ, ಫಲಿತಾಂಶದ ವೇಳಾಪಟ್ಟಿ ಬಿಡುಗಡೆ
ಬೆಂಗಳೂರು, ಮೇ 25: ಕರ್ನಾಟಕದ ವಿಶ್ವವಿದ್ಯಾಲಯ ಮತ್ತು ಅವುಗಳ ಸಂಯೋಜಿತ ಕಾಲೇಜುಗಳಲ್ಲಿ 2023-2024ನೇ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಪದವಿ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆ, ಪರೀಕ್ಷೆ ಹಾಗೂ ಫಲಿತಾಂಶ ಕುರಿತು ಉನ್ನತ ಶಿಕ್ಷಣ ಇಲಾಖೆ ವೇಳಾಪಟ್ಟಿ ಹೊರಡಿಸಿದೆ. ಈ ಮೂಲಕ ಶೈಕ್ಷಣಿಕ ಸಂಸ್ಥೆಗಳಿಗೆ ಕೆಲವು ನಿರ್ದೇಶನಗಳನ್ನು ನೀಡಿದೆ.
ಈ ಏಕರೂಪದ ವೇಳಾಪಟ್ಟಿಯಲ್ಲಿ ಪ್ರಸಕ ಶೈಕ್ಷಣಿಕ 2023-24ನೇ ಸಾಲಿನಲ್ಲಿ ಇದೇ ಮೇ 22 ರಿಂದ ಜುಲೈ 15, 2023 ರೊಳಗೆ ಪ್ರಥಮ ಸೆಮಿಸ್ಟರ್ ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಜುಲೈ 17 ರಿಂದ ತರಗತಿಗಳನ್ನು ಆರಂಭಿಸಬೇಕಿದೆ.

ಇದೇ ವರ್ಷ ಮುಂದಿನ ಜುಲೈ 17 ರಿಂದ ಆರಂಭವಾಗುವ ಸೆಮಿಸ್ಟರ್ ತರಗತಿಗಳು ನವೆಂಬರ್ ತಿಂಗಳ ಮಧ್ಯಭಾಗ (ನ.18) ಅಂತ್ಯಗೊಳ್ಳುತ್ತದೆ. ಹೀಗಾಗಿ ನವೆಂಬರ್ 20 ರಿಂದ ಪದವಿ ಕೋರ್ಸ್‌ಗಳ ಒಂದನೇ, ಮೂರು ಮತ್ತು ಐದನೇ ಸೇಮಿಸ್ಟರ್ ಪರೀಕ್ಷೆಗಳನ್ನು ಆರಂಭಿಸಬೇಕು. ಮುಂದಿನ ವರ್ಷ 2024ರ ಜನವರಿ 15 ರೊಳಗೆ ಮೌಲ್ಯಮಾಪನ ಮುಗಿಸಿ ಫಲಿತಾಂಶ ಬಿಡುಗಡೆ ಮಾಡುವಂತೆ ವೇಳಾಪಟ್ಟು ಮೂಲಕ ಇಲಾಖೆ ಸೂಚಿಸಿದೆ.
ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳು ಮತ್ತು ಪದವಿ ಕಾಲೇಜುಗಳು 2024ರ ಜನವರಿ 16 ರಿಂದ ಪದವಿ ಕೋರ್ಸ್‌ಗಳ ದ್ವಿತೀಯ ಸೆಮಿಸ್ಟರ್ ತರಗತಿ ಆರಂಭಿಸಿ ಮೇ 15ಕ್ಕೆ ಮುಕ್ತಾಯಗೊಳಿಸಬೇಕು. ಮೇ 13 ರಿಂದ ಎರಡನೇ ಸೆಮಿಸ್ಟರ್ ಪರೀಕ್ಷೆಗಳನ್ನು ಆರಂಭಿಸಿ ಜೂನ್ 19ರ ಒಳಗಾಗಿ ಫಲಿತಾಂಶ ಪ್ರಕಟಿಸಬೇಕು ಎಂದು ಏಕರೂಪದ ವೇಳಾಪಟ್ಟಿಯಲ್ಲಿ ತಿಳಿಸಿದೆ.
ಈ ವೇಳಾಪಟ್ಟಿ ಇಂಜಿನಿಯರಿಂಗ್, ಡಿಪ್ಲೋಮಾ ಇತರೆ ತಾಂತ್ರಿಕ ಶಿಕ್ಷಣ ಕೋರ್ಸ್‌ಗಳಿಗೆ ಅನ್ವಯಿಸುವುದಿಲ್ಲ ಎಂದು ಉನ್ನತ ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.












Click it and Unblock the Notifications